ಪುಸ್ತಕದ ಶೀರ್ಷಿಕೆ: ದೇವರು ಹೊರಟನು
ಪುಸ್ತಕದ ಲೇಖಕರು: ದಿ ಬಾ ಮೊಕಾಶಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಎಸ್ ರೇಣುಕಾ ಪ್ರಕಾಶ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಇದು ದಿ ಬಾ ಮೊಕಾಶಿಯವರ ಪ್ರಸಿದ್ಧ ಕಾದಂಬರಿ .ಯಾವುದಕ್ಕೆ ಆದಿಯಿಲ್ಲವೋ-ಅಂತ್ಯವಿಲ್ಲವೋ ಅಂತಹ ದೇವರ ಕಥೆ ಎನ್ನುವ ಉಪ ಶೀರ್ಷಿಕೆಯ ಹೊತ್ತಿದೆ. ಎಲ್ಲ ವಯಸ್ಸಿನವರಿಗೂ ಮೋಡಿ ಮಾಡುವ ಅಜರಾಮರ ಕಾದಂಬರಿ.ಮುನ್ನೂರು ವರ್ಷಗಳಿಂದ ಹಳ್ಳಿಯ ಮನೆಯಲ್ಲಿ,ಸಾಕಾರ ಮೂರ್ತಿಯಾಗಿ ನೆಲೆಸಿರುವ ದೇವ ನರಸಿಂಹನು ಈ ಕಾದಂಬರಿಯ ಕಥೆಯ ಕೆಂದ್ರಬಿಂದು ಹಾಗು ನಿಮಿತ್ತನೂ ಕೂಡ. ಅರವತ್ತರ ದಶಕದಲ್ಲಿ ನಗರೀಕರಣ ಆರಂಭಗೊಂಡು,ಉದರ ನಿರ್ವಹಣೆಗಾಗಿ ಉದ್ಯೋಗ,ಕೃಷಿ ಮತ್ತಿತರ ಕಾರಣಕ್ಕಾಗಿ ಮನುಷ್ಯ ವಲಸೆ ಹೊರಟು,ತನ್ನೊಡನೆ ತನ್ನ ಕುಟುಂಬ ,ಪ್ರೀತಿಪಾತ್ರ ವಸ್ತುಗಳು,ಸಾಕು ಪ್ರಾಣಿಗಳು,ಕೊನೆಗೆ ತಾನು ಪೂಜಿಸುವ ದೇವರ ಸಾಕಾರ ಮೂರ್ತಿಯನ್ನು ಹೊತ್ತಯ್ಯುವ ಸಂದರ್ಭ. ಇಂತಹದ್ದೇ ಪರಿಸ್ಥಿತಿಯಲ್ಲಿ ಕುಟುಂಬವೊಂದು,ಪಳಸಗಾವ ಗ್ರಾಮದಲ್ಲಿ ,ದೇವ ನರಹರಿಯನನ್ನು ತಮ್ಮ ಮನೆಯಲ್ಲಿ ನೆಲೆಯೂರಿಸಿಕೊಂಡು,ಆರಾಧಿಸುತ್ತಾ ಬರುತ್ತಾರೆ.ಈ ಘಟನೆಗಳನ್ನು ಕಾದಂಬರಿಯು ಸಂದರ್ಭೋಚಿತವಾಗಿ ವಿವರಿಸುತ್ತ,ಆ ಕಾಲಘಟ್ಟದ ವಿವರಣೆ ಕಟ್ಟಿಕೊಡುತ್ತದೆ. ಹೀಗೆ ಸುಮಾರು ಮುನ್ನೂರು ವರ್ಷಗಳಿಂದ ಪೂಜಿಸುತ್ತಾ ಬಂದ ಕುಟುಂಬವು,ಕಾಲದ ಹೊಡೆತಕ್ಕೆ ಅನಿವಾರ್ಯವಾಗಿ ಚದುರುವ ಸಂದರ್ಭ,ದಿಕ್ಕಾಪಾಲಾಗಿ ಹೊರಟ ನಾಲ್ವರು ಸಹೋದರರ ಪೈಕಿ,ಯಾರೊಡನೆ ದೇವ ನರಹರಿಯು ಹೊರಡಬೇಕು,ಇಲ್ಲೇ ಉಳಿಯಬೇಕೆ ಬೇಡವೇ ಎನ್ನುವ ತಾಕಲಾಟಗಳು,ಅದಕ್ಕೆ ತಕ್ಕಂತೆ ಕಥೆಯು ಬೇರೆ ಬೇರೆ ಆಯಾಮಗಳಿಗೆ ತೆರೆದುಕೊಳ್ಳುತ್ತದೆ. ಸಹೋದರರಾದ ಅಭಾ,ರಾಮು,ನಾರೂ,ಜಗು ಹಾಗು ಸೀತಾ ಚಿಕ್ಕಮ್ಮ ,ಅವರ ಒಡನಾಟ,ಸಿಟ್ಟು,ದುಗುಡ, ಏನು ಮಾಡಲಾಗದ ಪರಿಸ್ಥಿತಿ ಓದುಗನನ್ನು,ಅಲ್ಲಿಯದೇ ಪಾತ್ರವಾಗಿ ಸನ್ನಿವೇಶವನ್ನು ಸ್ವತಃ ಅನುಭವಿಸುತ್ತಾ,ಮುಂದೇನಾಗಬಹುದು ಎನ್ನುವ ಕುತೂಹಲ ಕಟ್ಟಿಕೊಡುತ್ತಾ ಹೋಗುವಲ್ಲಿ ಯಶಸ್ವಿಯಾಗುತ್ತದೆ ಕಾದಂಬರಿ. ವಿಷ್ಣು ಭಟ್ಟರು,ಚಿಕ್ಕಪ್ಪ,ಪಾಪದ ಹುಡುಗಿ ನರ್ಮದ,ಊರಿನ ಪ್ರಮುಖರು ಹೀಗೆ ಬಂದು ಹಾಗೆ ಹೋದರೂ,ಕಥೆಯ ಗಟ್ಟಿತನವನ್ನು ಹೆಚ್ಚಿಸುತ್ತಾರೆ. ಮುಖ್ಯ ಘಟ್ಟದಲ್ಲಿ ದೇವ ನರಸಿಂಹನನ್ನು ತನ್ನೊಡನೆ ಒಯ್ಯುತ್ತೇನೆ ಎನ್ನುವ ಅಭಾ,ಅವನ ಚಿಂತನೆಗಳು,ಕೊನೆಗೂ ದೇವರಿಗೆ ನೆಲೆ ಸಿಕ್ಕು,ದೊಡ್ಡ ಸಮಸ್ಯೆಯೊಂದು ಬಗೆಹರಿಯಿತಲ್ಲ ಎಂದೆನಿಸಿದರೂ ,ನೆಲೆ ನಿಂತ ಮನೆ ,ಊರು,ಭಕ್ತ ಜನರನ್ನು ಬಿಟ್ಟು ಹೊರಟನಲ್ಲ ಎನ್ನುವ ನೋವಂತೂ,ಓದುಗನಿಗೆ ಸಹಜವಾಗಿ ಆವರಿಸುತ್ತದೆ.ಕೊನೆಗೆ ಎಲ್ಲರ ಸಮ್ಮುಖದಲ್ಲಿ ಪೂಜೆಗೊಂಡು,ಅಭಾನ ಹೆಗಲೇರಿ ಹೊರಟ ದೇವ ನರಹರಿ,ಊರ ಜನರ ಸಾನ್ನಿಧ್ಯವನ್ನು ತೊರೆದು ಹೊರಡುವ ಆ ದೃಶ್ಯ ಆರ್ದ್ರತೆ ಉಂಟುಮಾಡುತ್ತದೆ. ಮನುಷ್ಯನಿಗೆ ದೇವರ ಅವಶ್ಯಕತೆಯಿದೆ ಆದರೆ ದೇವರಿಗೆ ಮನುಷ್ಯನ ಅಗತ್ಯವಿದೆಯೇ? ಆದರೆ ಶತ ಶತಮಾನಗಳಿಂದ,ದೇವರು ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಿ ಹೋಗಿದ್ದಾನೆ.ಅವನಿಲ್ಲದ ಜಗವೇ ಇಲ್ಲ ಎನ್ನುವ ಮನುಷ್ಯನ ದೇವಮೋಹಕ್ಕೆ ಕಾದಂಬರಿ ಇಂಬುಕೊಟ್ಟು ಓದಿಸಿಕೊಂಡು ಹೋಗುತ್ತದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ದೇವ ನರಸಿಂಹನ ಸಂಪುಟವನ್ನು ಹೊತ್ತು ಹೊರಟ ಸಂದರ್ಭ ಭಾವುಕರನ್ನಾಗಿಸುತ್ತದೆ. ಎಲ್ಲರಿಗಾಗಿ ಬದುಕು ಸವೆಸಿ ಕೊನೆಗೆ ಒಂಟಿಯಾಗುವ ಸೀತಾ ಚಿಕ್ಕಮ್ಮ,ಕೊನೆಯವರೆಗೂ ಎಲ್ಲಿ ಅನಾಥನಾಗಿ ಬಿಡುತ್ತಾನೋ ಎಂದು ಹಪಹಪಿಸುವಂತೆ ಮಾಡುವ ದೈವ ನರಸಿಂಹನ ಪಾತ್ರಗಳು ಮನಸ್ಸಿನಲ್ಲಿ ಉಳಿದಿವೆ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಎಲ್ಲರೂ ಓದಬಹುದಾದ ವಿಭಿನ್ನ ಕಾದಂಬರಿ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.