ಪುಸ್ತಕದ ಶೀರ್ಷಿಕೆ: ಇಷ್ಟುಕಾಲ ಒಟ್ಟಿಗಿದ್ದು...
ಪುಸ್ತಕದ ಲೇಖಕರು: ಎನ್ ಸಂಧ್ಯಾರಾಣಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಚಂದ್ರಿಕಾ ಬಿ ಎಚ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಈ ಕಥೆಯ ಹಿನ್ನಲೆ ತಲೆತಲಾಂತರಗಳಿಂದ ಹೆಣ್ಣು ಜೀವಗಳು ಅನುಭವಿಸುತ್ತಿರುವ ಬದುಕು, ಭಾವನೆ, ಸವಾಲು, ಅಹವಾಲು, ಜವಾಬ್ದಾರಿಗಳು , ಕಟುನಿಯಮಗಳ ಸುತ್ತ ಒಂದು ವಿಹಂಗಮ ಪಕ್ಷಿನೋಟವನ್ನು ಕೊಡುತ್ತದೆ. ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವ ನಾಲ್ಕು ಜನ ಸ್ನೇಹಿತರು - ಗೌರಿ, ಇನಾಯ, ಅರುಂಧತಿ ಮತ್ತು ರಾಮಚಂದ್ರ - ಇವರುಗಳ ಜೀವನದಲ್ಲಿನ ಪ್ರೀತಿ, ಪ್ರೇಮ, ಸಂಬಂಧಗಳು ಹಾಗು ಅವು ಬದಲಾಗುವ ಪರಿಯನ್ನು ಅತ್ಯಂತ ಸಂಕ್ಷಿಪ್ತವಾಗಿ ಸಂಧ್ಯಾರಾಣಿಯವರು ವಿವರಿಸಿದ್ದಾರೆ. ಗಂಡು ಹೆಣ್ಣಿನ ನಡುವಣ ಸಂಬಂಧದ ಅನಾವರಣ ಗೊಳಿಸುವ ಈ ಪುಸ್ತಕ ನಮಗೆ ಮೊಟ್ಟ ಮೊದಲು ನೆನಪಿಸುವ ಗೀತೆ "ಇಷ್ಟು ಕಾಲ ಒಟ್ಟಿಗಿದ್ದು , ಎಷ್ಟು ಬೆರೆತರೂ , ಅರಿತೆವೇನು ನಾವು ನಮ್ಮ ಅಂತರಾಳವಾ? " ಎಂದು. ಸರೋಜಿನಿ(ಗೌರಿಯ ತಾಯಿ) , ಆಗಿನ ಕಾಲಕ್ಕೆ ಮನೆಯವರನ್ನೆಲ್ಲ ಎದಿರು ಹಾಕಿಕೊಂಡು , ತಮ್ಮ ಲೆಕ್ಚರರ್ ನ ಪ್ರೀತಿಸಿ ಮದುವೆ ಆಗಿದ್ದರು. ದಾಂಪತ್ಯ ಸುಖವು ತನ್ನ ಗಂಡನ ಪರಸ್ತ್ರೀ ವ್ಯಾಮೋಹಕ್ಕೆ ಬಲಿಯಾದರೂ , ಬದುಕಿನ ಪ್ರೀತಿಯನ್ನು ಬಿಟ್ಟುಕೊಡದೆ, ಡೈವೋರ್ಸ್ ತೆಗೆದುಕೊಳ್ಳದೆ , ಗಂಡನನ್ನು ದ್ವೇಷಿಸದೆ, ಮಗಳಿಗಾಗಿ ಗಟ್ಟಿ ಮನಸ್ಸು ಮಾಡಿ, ಸ್ವಂತ ಉದ್ಯೋಗ ಮಾಡಿ ಜೀವನ ರೂಪಿಸಿಕೊಂಡ ಬಗೆ ಓದುಗರಲ್ಲಿ ಅಚ್ಚರಿ ಮೂಡಿಸುತ್ತದೆ. ತಂದೆ-ತಾಯಿಯ ದಾಂಪತ್ಯ ಜೀವನವು ಮಕ್ಕಳ ಮೇಲೆ ಎಷ್ಟು ಪರಿಣಾಮ ತರುತ್ತದೆ ಎಂಬುದಕ್ಕೆ ಸಾಕ್ಷಿ , ಗೌರಿ, ಮದುವೆಯ ಬಗ್ಗೆ ಗೌರವವಿದ್ದರೂ ಸಹ , ಆ ಜವಾಬ್ದಾರಿಯನ್ನು ಹೊರಲು ಹಿಂದೇಟು ಹಾಕಿ ಮ್ಯಾಥ್ಯೂ ಎಂಬಾತನ ಜೊತೆ ಲಿವ್-ಇನ್ ರಿಲೇಶನ್‌ಶಿಪ್ ಹೊಂದಲು ಬಯಸುತ್ತಾಳೆ. ಇನ್ನು ಇನಾಯ - ಇಸ್ತಾಂಬುಲ್ನ ಮುಕ್ತ ವಾತಾವರಣ ಅವಳ ನಡವಳಿಕೆಯನ್ನು ರೂಪಿಸಿತ್ತಾದರೂ, ಸಂಪ್ರದಾಯಸ್ಥ ಮನೆಯ ರಫಿಯನ್ನು ಮದುವೆಯಾಗಿ , ಹಾಸಿಗೆ ಹಿಡಿದ ಅತ್ತೆಯನ್ನು, ಇನ್ನು ಹಸುಗೂಸಾಗಿರುವ ತನ್ನ ಮಗುವನ್ನು , ನವೀಕರಣಗೊಳಿಸಬೇಕಿದ್ದ ಮನೆಯನ್ನು, ಅವಳ ಉದ್ಯೋಗವನ್ನು ಹಾಗು ಕಿವಿಚುಚ್ಚುತ್ತಿದ್ದ ನೆಂಟರನ್ನು ಹೇಗೋ ಸಂಭಾಳಿಸುತ್ತಿದ್ದಳು. ಈ ಪಾತ್ರ ನಮ್ಮ ದೇಶದಲ್ಲಿನ ಬಹುತೇಕ ಹೆಣ್ಣು ಮಕ್ಕಳ ಸ್ಥಿತಿಯನ್ನು ಓದುಗರ ಮುಂದೆ ಅವರದೇ ಪ್ರತಿಬಿಂಬವಾಗಿ ತಂದು ನಿಲ್ಲಿಸುತ್ತದೆ. ತನ್ನ ಮೈಬಣ್ಣದ ಸಲುವಾಗಿ ತನ್ನದೇ ಕುಟುಂಬದವರಿಂದ ಟೀಕೆಗಳನ್ನು ಅನುಭವಿಸಿ ಅರುಂಧತಿಯಲ್ಲಿ ಮೂಡಿದ ಕೀಳರಿಮೆ, ಓದಿ ಬುದ್ಧಿವಂತಳಾದರೂ, ಉನ್ನತ ಹುದ್ದೆಯಲ್ಲಿದ್ದರೂ ಅವಳನ್ನ ಕಾಡದೆ ಬಿಡಲಿಲ್ಲ. ಆ ಬಾಲ್ಯದ ಮನಸಿನ ಗಾಯ ಅವಳನ್ನು ವಿವಾಹಿತನೊಬ್ಬನ ಜೊತೆ ರಿಲೇಶನ್ಶಿಪ್ನಲ್ಲಿರಲು ತಳ್ಳಿತ್ತು. ಅವರ ಸಂಬಂಧದ ಮುಕ್ತತೆ , ವೈಖರಿ, ಹಾಗು ಅದು ಕೊಡುತ್ತಿದ್ದ ಸೇಫ್ಟಿ ಮತ್ತು ವ್ಯಾಲಿಡೇಷನ್ ಅವನ ಮಗುವನ್ನು ಅಬೋರ್ಟ್ ಮಾಡದೇ ಉಳಿಸಿಕೊಳ್ಳಲು ಪ್ರೇರೇಪಿಸಿದ ಬಗೆ ಚರ್ಚಾಸ್ಪದ ವಿಷಯ. ಉತ್ತರ ಕರ್ನಾಟಕದಲ್ಲಿನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದು, ಕೊಂಚ ಹಳೆಯ ವಿಚಾರಧಾರೆ ಇದ್ದರೂ, ಬದುಕಿನ ಪಥ ಅರಿಸುತ್ತ ಸಿಟಿಗೆ ಬಂದಮೇಲೆ, ಈ ಮೂರು ಹುಡುಗಿಯರೊಡಗಿನ ವಿಷಯಗಳ ವಿನಿಮಯದಿಂದ, ಓಪನ್ ರಿಲೇಷನ್ಶಿಪ್ ಬಗ್ಗೆ ಕೂತುಹಲ ಮೂಡಿ ಅದನ್ನು ಆಯ್ಕೆ ಮಾಡುತ್ತಾನೆ. ಹೀಗೆ ಅವರುಗಳು ಸಮಾಜದ ರೂಢಿಗಳನ್ನು ಮುರಿದು, ಹೊಸಹಾದಿಯನ್ನು ಕಂಡುಕೊಳ್ಳುತ್ತಾ , ಒಬ್ಬರಿಗೊಬ್ಬರು ಬೆಂಗಾವಲಾಗಿ ನಿಲ್ಲುವುದು - ದುರ್ಬಿನು ಹಾಕಿ ನಮ್ಮನ್ನೇ ನೋಡುತ್ತಿರುವರ ಮಧ್ಯ ತಮಗನ್ನಿಸಿದ ಬದುಕು ಕಟ್ಟಿಕೊಳ್ಳುವ ರೂಪುರೇಷೆ ಅನಾವರಣಗೊಂಡ ರೀತಿಯನ್ನು ಲೇಖಕಿ ಬಹಳ ಸುಂದರವಾಗಿ ಮೂಡಿ ಬರುವ ಹಾಗೆ ಮಾಡಿದ್ದಾರೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಇಷ್ಟು ದಿನ ಪ್ರೀತಿಯ ವಿರುದ್ಧ ಪದ ದ್ವೇಷ ಅಂದುಕೊಂಡಿದ್ದೆ, ಆದರೆ ಅದು ದ್ವೇಷವಲ್ಲ, ನಿರ್ಭಾವುಕತೆ. ಒಬ್ಬರನ್ನ ದ್ವೇಷಿಸಬೇಕಾದರೂ ಏನಾದರು ಸಂಬಂಧ ಇರಬೇಕು. ಅದೆಷ್ಟೋ ವರ್ಷದ ನಂತರ ಸರೋಜಿನಿಯನ್ನು ಪರಪುರುಷನೊಟ್ಟಿಗೆ ಕಂಡದ್ದನ್ನು ಅವಳ ಗಂಡಿನಿಗೆ ಅರಗಿಸಿಕೊಳ್ಳಲಾಗದ ವಿಷಯವಾಗಿತ್ತು. ಆದರೆ ಅವಳು ಅದಾಗಲೇ ಗಂಡನ ಪರಸ್ತ್ರೀ ಸಂಗ ವ್ಯಕ್ತಿಗತವಾಗಿ ತನ್ನ ಮೌಲ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ದಿಟ್ಟವಾಗಿ ಓದುಗರಿಗೆ ಮನವರಿಕೆ ಮಾಡಿದ್ದಳು. "ಹೋಗಬೇಕು ಅಂತ ಒಂದ್ ಸಲ ಮನಸ್ಸು ಮಾಡಿದರೆ ಆಯಿತು, ಹೋಗೋ ಧೈರ್ಯ, ಹೋಗೋಕೆ ಕಾರಣ ಎರಡನ್ನು ಕೊಡುತ್ತದೆ ಮನಸ್ಸು , ಸಂಬಂಧದ ಒಳಗೆ ಹೋಗಬೇಕಾದರೂ ಅಷ್ಟೇ , ಹೊರಗೆ ಹೋಗಬೇಕಾದರೂ ಅಷ್ಟೇ..." ಎಂಬ ಮಾತು ಓದುಗರ ಮನಸಲ್ಲಿ ಅಚ್ಚೆಯ ಹಾಗೆ ಉಳಿದುಬಿಡುತ್ತದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಸ್ತ್ರೀ ಕೇಂದ್ರಿತ ಕಾದಂಬರಿಯಾದ ಇದು, ಯುವಕರಿಗೆ ವಯಸ್ಕರಿಗೆ ಸಮಾನವಾಗಿ ಇಷ್ಟವಾಗುತ್ತದೆ , ಸಂಬಂಧಗಳ ಕಗ್ಗಂಟುಗಳ ಬಗ್ಗೆ ಒಂದು ಸಣ್ಣ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಓದಲು ಅರ್ಹವಾದದ್ದು. ಸಂಬಂಧಗಳ ಬೇಗುಧಿಯಿಂದ ಬೇಸತ್ತವರು, ಅದರ ಮೌಲ್ಯಗಳ ಬಗ್ಗೆ ತರ್ಕಿಸುತ್ತಿರುವರು, ಸಂಸಾರದ ಜಂಜಾಟದಲ್ಲಿ ಸಿಲುಕಿರುವ ಯುವಕ ಯುವತಿಯರು, ತಮ್ಮ ವಿಚಾರಧಾರೆ ಹಾಗು ಯೋಚನಾಲಹರಿಯನ್ನು ಮತ್ತಷ್ಟು ವಿಶಾಲವಾಗಿಸಬಯಸುವರು ಓದಲೇಬೇಕಾದ ಪುಸ್ತಕ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.