Submission 1925

ಪುಸ್ತಕದ ಶೀರ್ಷಿಕೆ: ಶ್ರೀ ರಾಮಾಯಣ ದರ್ಶನಂ

ಪುಸ್ತಕದ ಲೇಖಕರು: ಕುವೆಂಪು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಷ್ಮರಾಣಿ ಜಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಶ್ರೀ ರಾಮಾಯಣ ದರ್ಶನಂ. ಅಂದಿಗೂ ಇಂದಿಗೂ ಎಂದೆಂದಿಗೂ ನಮ್ಮ ಭಾರತೀಯರ ಮನಸ್ಸನ್ನು ಹೊಕ್ಕಿ ಮನೆ ಮಾಡಿ ಮೈದುಂಬಿರುವ ರಾಮಾಯಣ ಹಾಗೂ ಮಹಾಭಾರತ ನಮ್ಮ ಆಸ್ತಿಯಂದೆ ಪರಿಗಣಿಸಬೇಕಾಗುತ್ತದೆ. ಚಿಕ್ಕವರಿಂದ ದೊಡ್ಡವರವರೆಗೂ "ರಾಮ" ಪದವು ಕೇವಲ ಹೆಸರಾಗಿಲ್ಲ ( ರಾಮ,ರಾಮ- ರಾಮ, ಅಯ್ಯೋ ರಾಮ!) ಒಳ್ಳೆಯದು ಸ್ವಧರ್ಮ ಹಾಗೂ ಕರುಣೆ ತೋರುವ ಅಂಶವಾಗಿ ನಮ್ಮ ಬದುಕಿನಲ್ಲಿ ಜನಜನಿತವಾಗಿದೆ. ನನಗೆ ಹತ್ತು ವರ್ಷ ತುಂಬಿದ ಸಮಯದಲ್ಲಿ ಸುತ್ತಮುತ್ತಲಿನಲ್ಲಿ ನಡೆಯುತ್ತಿದ್ದ ಘಟನಾವಳಿಗಳ ಗರಗಸದಿಂದ ಹೃದಯ ತರಿಸುತ್ತಿದ್ದಾಗ ಎಲ್ಲೋ ಕೇಳಿದ ಮಾತಿನಂತೆ ಸಮಾಜದಲ್ಲಿ/ ನಿಸರ್ಗದಲ್ಲಿ ಇರುವ ಕೊರತೆಗಳನ್ನು ಕಲೆ ತುಂಬಿ ಕೊಡುತ್ತದೆ ಅನ್ನುವ ಹಾಗೆಯೇ ನನಗೆ ಹಾಗೂ ಓದುವ ಕಲೆ, ಸಾಹಿತ್ಯ,ನಟನೆ ಒಡನಾಟಗಳು ಶುರುವಾಯಿತು. ಅಂದಿನ ಕಾಲಕ್ಕೆ ಬಹು ಜನಪ್ರಿಯವಾಗಿದ್ದ ಧಾರಾವಾಹಿ "ಸೀತೆ" ಅದನ್ನು ನಮ್ಮ ಹಳ್ಳಿಯ ಜನರು ಕಣ್ಣು ಮಿಟಕದಂತೆ ಅದರಲ್ಲಿಯೂ ಎಮ್ಮೆ,ಕರು, ಹಸು, ಹಾಡು,ಕುರಿ ಎಲ್ಲವನ್ನು ಮೇಯಿಸಿ ಆರು ಗಂಟೆಗೆ ಮುನ್ನವೇ ಗೂಡಿಗೆ ಸೇರುತ್ತಿದ್ದರು. ನಮ್ಮ ಮನೆಯಲ್ಲಿ ಆರು ಗಂಟೆಗೆ ಸರಿಯಾಗಿ ಐದು ಆರು ಜನರು ಅಂದರೆ ಟಿ.ವಿ ಇಲ್ಲದವರು ಹೊಕ್ಕು ಟಿ.ವಿಗೆ ಕೈಮುಗಿದು ಸೀತೆ ಧಾರಾವಾಹಿಯನ್ನು ನೋಡುತ್ತಿದ್ದ ಕ್ಷಣಕಣ್ಗಟ್ಟಿದಂತೆ ಇನ್ನು ನನ್ನ ನೆನಪಿನ ಚೌಕಟ್ಟಿನಲ್ಲಿ ಆಗಾಗ ಬಂದು ಹಾಜರಾಗುತ್ತದೆ. ಧಾರವಾಹಿಯನ್ನು ನೋಡಿದ ತರುವಾಯ ನಾಲಿಗೆ ಯಾವಾಗಲೂ ನೋವಿನ ಹಲ್ಲಿಗೆ ತಗಳುಹಾಗೆ ಕೆಲವು ವಿಚಾರಗಳು ಚಿತ್ಗೆ ಪ್ರಶ್ನೆ ಹಾಕುತ್ತಲೇ ಇದ್ದವು, ಸೀತೆಯ ಅಗ್ನಿಪ್ರವೇಶ, ಅಗಸನನಿಂದನೆಯಿಂದ ಮತ್ತೆ ಸೀತೆಯನ್ನು ಕಾಡಿಗಟ್ಟಿದ ಸಂದರ್ಭ, ಶೂದ್ರ ಶಂಬೂಕನಿಗೆ ಆದ ಶಿಕ್ಷೆ ಇವೆಲ್ಲ ಕುವೆಂಪುರವರೇ ಹೇಳುವಂತೆ ಮಹಾಕವಿ ವಾಲ್ಮೀಕಿ ಕೃತಿಯಲ್ಲಿ ಬಂದಾಳಿಕೆಗಳಂತೆ ಸೇರಿಕೊಂಡಿರುವ ಅಲ್ಪದೃಷ್ಟಿಯ ಕುಕವಿ ಕೃತವಾದ ಪ್ರಕ್ಷಿಪ್ತಗಳು. ವಾಲ್ಮೀಕಿ ಶಿಲ್ಪಿ ಕಟ್ಟಿದ ದೇವಾಲಯವು ಹಳತಾಗುತ್ತಾ ಬಂದಂತೆಲ್ಲ ಇಲಿ, ಹಲ್ಲಿ,ಬಾವುಲಿ ಅನಾಹುತ ಜೀವ ಜಂತುಗಳು ಗೂಡು ಬೀಡು ಮಾಡುವುದುಂಟು ಅದರ ಪುರಾತನತ್ವ ಅನಿವಾರ್ಯವಾಗಿದ್ದರಿಂದಲೇ ಮಹಾಕವಿ ಕುವೆಂಪು ತಮ್ಮ ಮನೋಧರ್ಮ ಮಹೋಪಮೆಗಳ ಮಹಾಛಂದಸ್ಸಿನಿಂದ ಬರೆದ ಮಹಾಕಾವ್ಯವೇ ಶ್ರೀ ರಾಮಾಯಣ ದರ್ಶನಂ. ಹಳೆಗನ್ನಡದ ಸೊಗವನುಣಿಸುವ ಕುವೆಂಪು, ತಾಯಿ ಮಗುವಿಗೆ ಕೈಯಾರೆ ಬೆಲ್ದನ್ನವನ್ನು ಉಣಿಸಿದ ರೀತಿ ಭಾವಗಳ ದಾರಕ್ಕೆ ಮುತ್ತಿನ ಪದಗಳನ್ನು ಪೊಣಿಸು ನಿಪುಣರಾಗಿ ಕಾಣುತ್ತಾರೆ. ಮಹಾ ಕೃತಿಯ ಪ್ರಾರಂಭದಲ್ಲಿ ತಮ್ಮ ಗುರುವಾದ ವೆಂಕಟಯ್ಯನವರನ್ನು ನೆನೆಯುವ ವೈಖರಿ ಹಾಗೂ ತಮಗೆ ಪ್ರೇರಣೆ ನೀಡಿರುವಂತಹ ಅಂದಿನ ಕವಿಗಳ ನಾಮ ಸ್ಮರಣೆ ಇವೆಲ್ಲವೂ ಕುವೆಂಪು ಗುರು ಮೌಲ್ಯವನ್ನು ಕೊಂಡಾಡುವುದು ಹೊಸದೇನಲ್ಲ, ತಾವೇ ಬರೆದಿರುವ "ಬೆರಳ್ ಗೆ ಕೊರಳ್" ನಾಟಕದಲ್ಲಿಯು "ಅಂತರತಮ ನೀ ಗುರು ಹೇ ಆತ್ಮತಮೋಹಾರಿ"ಎಂದು ಗುರುವಿನ ಸ್ಥಾನಮಾನವನ್ನು ವಿವರಿಸುವ ರೀತಿ ರೋಮರ್ಶವನ್ನು ನೀಡುತ್ತದೆ. ಕುವೆಂಪುರವರ ರಸನಿಘಂಟು ಓದುಗರಿಗೆ ರಸವಶವಾಗದೆ ಬೇರೆ ದಾರಿ ಇಲ್ಲ ಎನ್ನುವಂತೆ ಮಾಡುತ್ತದೆ- ಮನದನ್ನೆ, ಬೆಂಗದಿರ,ನೀರೆ, ಸಿಂಹತರ್ಕಿಣಿ, ಇಂಗಿತಜ್ಞೆ, ಅಕ್ಷಿಗೌತಣ, ರಸಾಶ್ರು ಮತ್ತು ಹಲವು ಪಂಚಾಮೃತ ಸವಿಯನ್ನು ನೀಡುತ್ತವೆ. ಅಂತ ಕರ್ಣಗಳನ್ನು ಕೆದುಕುವ ಕುವೆಂಪುವಿನ ದೃಷ್ಟಿಯ ಮಂಥರೆ - ನಿರ್ದಾಕ್ಷಿಣ್ಯವಾಗಿ ಹೊಡೆದು ನೂಕಿದರೂ ಭರತನ ಮೇಲೆ ತನಗೆ ಇರುವ ಪ್ರೀತಿ ಎಳ್ಳಷ್ಟು ಕಮ್ಮಿ ಆಗದೆ ರಾಮನನ್ನು ಕಾಡಿಂದ ಕರೆತರುವ ಕಾರ್ಯದಲ್ಲಿ ಬ್ರಾಂತಿಗೊಳಗಾಗಿ ಮತಿವಿಕಲೆ ಕಾಡ್ಗಿಚ್ಚಿನಲ್ಲಿ ರಾಮನನ್ನೇ ಕಂಡೆ ಎಂದು ಬೆಂಕಿಗೆ ಆಹುತಿಯಾದವಳನ್ನು ಮರೆಯಲು ಸಾಧ್ಯವೇ? ದಶರಥ ಲಂಪಟನಾಗಿ ತಾನು ಎಸೆಗೆದ ಕೃತ್ಯಕ್ಕೆ ಕೈಕೆ ರೂಪವನ್ನು ಕಾಮಿಸಿದ ತನ್ನ ಕಣ್ಣುಗಳೇ ಕಾರಣವೆಂದು ತನ್ನ ಎರಡು ಕಣ್ಣುಗಳನ್ನು ಕಿತ್ತು ಒಗೆಯುವ ಪಶ್ಚಾತಾಪದ ತಂದೆಯನ್ನು ಮರೆಯಲು ಸಾಧ್ಯವೇ? ರಾಮನು ನೀಲದೇಹಿ, ಕರುಣಾಮಯಿ, ಸಂಯಮಿ, ಸೌಮ್ಯ,ಧೀರ, ಶೂರ,ಅನುರಾಗಿ ಎಂದು ವರ್ಣಿಸುವಲ್ಲಿ ನಮ್ಮ ಮನಸ್ಸನ್ನು ಸೂರೆಗೊಳಿಸಿದ ಕುವೆಂಪು ಲಕ್ಷ್ಮಣನ ಕಡೆಗೂ ನಮ್ಮ ಗಮನವನ್ನು ಹೊರಳಿಸುವುದರಲ್ಲಿ ಮತ್ತೆ ಯಶಸ್ವಿಯಾಗಿದ್ದಾರೆ. ಭ್ರಾತೃ ಪ್ರೇಮಕ್ಕೆ ಪ್ರತಿಮೆಯಾಗಿಯೇ ತನ್ನ ಕಾಲವನ್ನು ಕಳೆದ ಲಕ್ಷ್ಮಣ ವಿರಾಗಿಯು ಹೌದು! ತಾನು ವನವಾಸ ಮುಗಿಸಿ ಬರುವ ದಿನ ಊರ್ಮಿಳಗೆ ಮೌನ ತಪಸ್ವಿನಿಗೆ ಉಡುಗೊರೆಯಾಗಿ ಖರನನ್ನು ಕೊಂದಾಗ ತಾನು ಹುಟ್ಟಿದ ಒಲ್ಕಲ ನಾರುಡೆ ಯನ್ನು ಸಿದ್ಧಪಡಿಸುವ ರೀತಿ, ಸಂಜೀವಿನಿ ಬೇರಿಂದ ಮತ್ತೆ ಜನುಮ ತಾಳಿದ ಲಕ್ಷ್ಮಣ ಕಣ್ತಿಳಿಯಾಗಿ ಎದ್ದು ಕನಸಿನಲ್ಲಿ ಕಂಡ ಮನದನ್ನೆ ಊರ್ಮಿಳಯೇ ಹೃದಯಕ್ಕೆ ಅಮೃತನಿಕ್ಕ ಪರಿಯನ್ನು ಕವಿ ವರ್ಣಿಸುವ ರೀತಿ ರಸಪಾನವಾದಂತಾಗಿದೆ. ರಾವಣನ ಕೈತವಕ್ಕೆ ಸಿಕ್ಕಿ ರಾಮ ಕಾಣೆಯಾದಾಗ ಅವನಿಜಾತೆ ಮತಿಗೆಟ್ಟು ಉಕ್ಕಿ ಬರುವ ಕೋಪವನ್ನು ನಿಯಂತ್ರಿಸಲಾಗದೆ " ಭ್ರಾತೃಘಾತಕ ಪಾಪಿ ಸಾಯಿ" ಎಂದು ಇಳೆಮಗಳು ಲಕ್ಷ್ಮಣನನ್ನು ನಿಂದಿಸಿದಾಗ. ಅತ್ತಿಗೆಮ್ಮ ತಾಳ್ಮೆಗೆಟ್ಟು ಆಡಿದ ಮಾತನ್ನು ಅರಗಿಸಿಕೊಂಡು ಅಣ್ಣನಾಜ್ಞೆಯಂತೆ ಸೀತೆ ರಕ್ಷಣೆಯನ್ನು ಮಾಡಿದ ಮಹಸಂಯಮಿ. ರಾಮ ಭೂಜಾತೆಯನ್ನು ಕಳೆದುಕೊಂಡು ವಿರಹದೂರಿಗನಾಗಿ ಬೆoದಿದ ಉರಿ ಓದುಗರಿಗೂ ತಾಗುವಂತೆ ಮಾಡಿದ ಪರಿಯೇ ಅದ್ಭುತ. ಹೃದಯ ಕಲಕುವ ಶಬರಜ್ಜಿಗೆ ರಾಮನ ಅನಾವರಣ ಹಾಗೂ ಅನುರಾಗಿ ರಾಮ ಸೀತೆಯನ್ನು ಕಳೆದುಕೊಂಡು ಬಿಕ್ಕಿ-ಬಿಕ್ಕಿ ಪಸುಳೆಯಂತೆ ಶಬರಜಿಯನ್ನು ತಬ್ಬಿ ಅಳುವ ದೃಶ್ಯಕ್ಕೆ ಭಾವುಕರಾಗದವರು ಸಿಗುವರೇ? ಅಂಜನಾಸೂನು ಮಿತಭಾಷಿ,ವಾಕ್ಕೋವಿದ, ಗಾಂಭೀರ್ಯ, ಬ್ರಹ್ಮಚರ್ಯದ ದೃಢ ಪ್ರತ್ಯಯನ ಹಾಗೂ ರಘುದ್ವಹನ ಮೈತ್ರಿ ಮಾದರಿಯಾಗದೆ ಇರುವುದೇ? ಕವಿಯು ಮಂಡೋದರಿಯ ಸುಗುಣಗಳನ್ನು ವರ್ಣಿಸುವ ಪರಿ ಶ್ಲಾಘನೀಯ,"ನಾನಕ್ಕನೆನ್ ನಿನಗೆ ತoಗೆ" ಎಂದು ಅಶೋಕವನದ ಸೀತೆಯ ಬಳಿ ತೆರಳಿ "ಹರಿಬದೆತನಕ್ಕೆ ಮಿಗಿಲಾದ ಸಾಧನೆ ಇಲ್ಲ ತಂಗಿ, ಕೊಳೆಗೆ ಅಗ್ನಿ ತಗಳಲು ಕೊಳೆಯು ಹೋದಂತೆ ನಿನ್ನ ನೋಂಪಿಯಿಂದಲಿ ನನ್ನ ಪತಿಯ ಹೃದಯದ ಪಾಪವು ತೊಲಗಲಿ ಎನ್ನುತ್ತಾ ಅಸುರೆಯ ಮನೋಭಾವಗಳು ಸುಂದರವಾಗಿ ಕವಿಯಿಂದ ವಿವರಿಸಲಾಗಿದೆ ತನ್ನ ಪತಿಯ ಸಾವಿಗೆ ತಾನು ಇಚ್ಛೆ ಸಾವನ್ನು ಪಡೆಯುವ ಹದಿಬದೆಯ ಅಸುರೆ ಕುವೆಂಪುಯಿಂದ ದೊರಕುವಳು. ಕುವೆಂಪುರವರೇ ಹೇಳಿದ ಹಾಗೆ "ಕಲ್ಪನೆಗೆ ಕೆಚ್ಚಿರಲ್ ಕಟ್ಟಿ ಕಾಣಾ.." ರಾವಣನಿಗೆ ಆವರಿಸಿದ ಪಾಪವನ್ನು ವಿನಾಶವಾಗಿಸುವ ಒಂದು ಕನಸು.ಕನಸಿನಲ್ಲಿ ಸೀತೆ ತನ್ನ ಅವಳಿ ಮಕ್ಕಳನ್ನು ಆಡಿಸುತ್ತಿದ್ದು ಆ ಮಕ್ಕಳನ್ನು ರಾವಣ,ಕುಂಭಕರ್ಣ ಎಂದು ಹೆಸರಿನಿಂದಲೂ ಕರೆಯುತ್ತಿದ್ದ ಸ್ವಪ್ನವನ್ನು ರಾವಣನಿಗೆ ದಯಪಾಲಿಸಿ ರಾವಣನ ಹಾಗೂ ಸೀತೆ ಸಂಬಂಧವನ್ನು ಬಲು ಅಮೋಘವಾಗಿ ತೋರಿ ರಾವಣನ ಪಾಪವನ್ನು ನಿರ್ಮೂಲನೆ ಮಾಡಿರುವ ದೃಶ್ಯವನ್ನು ನೀಡಿದ ಕುವೆಂಪು ಬಲು ಎತ್ತರದಲ್ಲಿ ನಿಲ್ಲುತ್ತಾರೆ, ಕೊನೆ ಕೊನೆಗೆ ರಾಮ ಬಿಟ್ಟ ಬ್ರಹ್ಮಾಸ್ತ್ರ ಬಾಣದ ತುಂಡಿನಿಂದಲೇ ರಾವ ನಿನಗೆ ಮೋಕ್ಷವನ್ನು ಎಂದು ಕಟ್ಟುಕೊಟ್ಟಿರುವ ಕುವೆಂಪುರವರಿಗೆ ರಸವನಾಸ್ವಾದಿಸುವ ರಸ ಕೋವಿದರು ಮಡಿಯದೇ ಇರುವರೆ? ಬಹು ಮುಖ್ಯವಾಗಿ ನನ್ನ ಅಂತರ್ಕರ್ಣವನ್ನು ಸಮಯ ಒದಗಿದಾಗೆಲ್ಲ ಕಾಡುತ್ತಿದ್ದು ಸೀತೆಯ ಅಗ್ನಿ ಪ್ರವೇಶ! ಹೆಣ್ಣೆ ಸಂಶಯ,ಅನುಮಾನಕ್ಕೆ ತುತ್ತಾಗುವುದು ಶೋಕನಿಯವಾದರೂ ದುರಂತವಾಗಿದೆ ಉಳಿದುಕೊಂಡಿದ್ದ ವಿಚಾರವನ್ನು ಕುವೆಂಪುರವರ ದೃಷ್ಟಿ ಹೊಸ ನಿಲುವನ್ನೇ ಕೊಡುತ್ತದೆ. ನನ್ನಂತಹ ಎಷ್ಟೋ ಕೋಟಿ ಹೆಣ್ಣು ಮಕ್ಕಳ ಪ್ರಶ್ನೆಯನ್ನು ನೋವನ್ನು ವಿಷಾದವನ್ನು ಆರಿಸಿದ ಕುವೆಂಪು ಸೀತೆಯ ಅಗ್ನಿ ಪ್ರವೇಶದ ಚಿತೆಯಲ್ಲಿ ಕೇವಲ ಸೀತೆಯನ್ನು ದಬ್ಬದೆ ರಾಮನು ತನ್ನ ಶೀಲವತ್ವವನ್ನು ನಿರೂಪಿಸಲು ಸೀತೆ ಹಿಂದೆ ರಾಮನನ್ನು ನಡೆಸುವ ಮಹಾ ಆಲೋಚನೆ ಕುವೆಂಪುರವರು ಕುವೆಂಪುರಾಗಿದ್ದರಿಂದಲೇ ಒಳದಿರಬೇಕು ಎಂದೆನಿಸುತ್ತದೆ. ಧನ್ಯೋಸ್ಮಿ ಕುವೆಂಪುರವರಿಗೆ. " ರಾಧೆ ನನ್ನ ಕೆನ್ನೆಗೆ " ಎಂದು ತಾವೇ ಭಾವಾನುಕರಣ ಮಾಡಿರುವ ಕವನದಲ್ಲಿ ಮಹಾಕವಿಗಳು, " ಎಲ್ಲಾ ಬರೆದುಕೊಳ್ಳುವ ವಿಧಿ, ನಿನಗೆ ನನ್ನದೊಂದು ಮೊರೆ, ಇವನು ಕೋಪಿ ಇವನು ಪಾಪಿ, ಸುಳ್ಳನ್ನೇ ಬರೆ ನಿನಗೆ ಮಾಫಿ, ಆದರೆ ನನ್ನದೊಂದೆ ಮೊರೆ, ಮುತ್ತುಕೊಟ್ಟುದನ್ನು ಬರೆ, ರಾಧೆ ನನ್ನ ಕೆನ್ನೆಗೆ!" ಈಗ ನನ್ನ ಪರವಾಗಿಯೂ ವಿಧಿಗೆ ಮೊರೆಯಿಕ್ಕುತ್ತಿದ್ದೇನೆ, " ಎಲ್ಲಾ ಬರೆದುಕೊಳ್ಳುವ ವಿಧಿ, ನಿನಗೆ ನನ್ನದೊಂದು ಮೊರೆ, ಶ್ರೀ ದರ್ಶನಂ ಓದಿದ್ದನ್ನು ಬರೆ!"

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

0
Votes
94
Views
7 Months
Since posted

Voting Closed!

Scroll to Top