Submission 1921

ಪುಸ್ತಕದ ಶೀರ್ಷಿಕೆ: ನಾಸು

ಪುಸ್ತಕದ ಲೇಖಕರು: ಸುನಂದಾ ಬೆಳಗಾಂವಕರ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿಜಯಲಕ್ಷ್ಮಿ ನಾಯ್ಕ್ ಬಿಳಿಯೂರು

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕನ್ನಡ ಪುಸ್ತಕ ವಿಮರ್ಶೆ ಸ್ಪರ್ಧೆ ಪುಸ್ತಕದ ಹೆಸರು : ನಾಸು ಲೇಖಕರು : ಸುನಂದಾ ಬೆಳಗಾಂವಕರ ಪ್ರಕಾಶಕರು : ಅಂಕಿತ ಪುಸ್ತಕ ಬೆಂಗಳೂರು ದ್ವಿತೀಯ ಮುದ್ರಣ ವರ್ಷ : 2012 ಪುಟಗಳ ಸಂಖ್ಯೆ : 416 ಪುಸ್ತಕದ ಬೆಲೆ : 250₹ "ನಾಸು" ಸುನಂದಾ ಬೆಳಗಾಂವಕರ ಅವರು ಬರೆದ ಕಾದಂಬರಿ ಪುಸ್ತಕವಾಗಿದೆ. ಪುಸ್ತಕವನ್ನು ಓದಿ ಪಡೆದ ವಿದ್ಯೆಯಿಂದ, ದುರಹಂಕಾರದಿಂದ ಮೆರೆವ ತಮ್ಮ ಮತ್ತು ಒಳ್ಳೆಯ ಸಂಸ್ಕಾರವನ್ನು ಹೊಂದಿ ಮಾನವೀಯತೆಯನ್ನು ಮೆರೆವ, ವಿದ್ಯೆ ತಲೆಗೆ ಹತ್ತದ ಅಣ್ಣನ ಜೀವನದಲ್ಲಿ ನಡೆಯುವ ಘಟನೆಗಳೇ ಈ "ನಾಸು" ಕಾದಂಬರಿಯ ಕಥಾವಸ್ತು. ಮನುಷ್ಯತ್ವ ಕಳೆದುಕೊಂಡು ಬದುಕಿದರೆ ಅವನು ಮೃಗಗಳಂತೆಯೇ. ಬಾಳಿನಲ್ಲಿ ಸಂತೋಷವಾಗಿರಲು ಉನ್ನತ ಶಿಕ್ಷಣವನ್ನೇ ಪಡೆಯಬೇಕೆಂದಿಲ್ಲ. ನಮ್ಮ ನಡೆನುಡಿ, ನಮ್ಮೊಳಗೊಂದಿಷ್ಟು ಕರುಣೆ, ಪ್ರೀತಿ, ಸಹಕಾರ ಗುಣವಿದ್ದರೆ ಯಾವ ಹೃದಯವನ್ನೂ ಗೆಲ್ಲಬಹುದು. ಸುಶಿಕ್ಷಿತನೆಂದೆನಿಸಿಕೊಂಡು ಇಲ್ಲದ ಪಾಪ ಕಾರ್ಯಗಳನ್ನು ಮಾಡಿದರೆ ಆ ವಿದ್ಯೆ, ಆ ಜೀವಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಇಲ್ಲಿ "ನಾಸು" ಎಂದರೆ ನಾಯಿ ಸೂಳೆಮಗ ಎಂದು ಅರ್ಥ. ಈ ಕಾದಂಬರಿಯು ಧಾರಾವಾಡ ಜಿಲ್ಲೆಯ ಒಂದು ಬ್ರಾಹ್ಮಣ ಕುಟುಂಬದ ಕಥೆಯಾಗಿದೆ. ಬ್ರಾಹ್ಮಣರ ಅನೇಕ ಮನೆಗಳಲ್ಲಿ ಅನಂತಾಚಾರ್ಯರ ಮನೆಯೂ ಒಂದು. ಇವರಿಗೆ ಮೂವರು ಮಕ್ಕಳು. ಮೊದಲನೆಯವನೇ 'ನಾರಾಯಣ'. ವಿದ್ಯೆ ತಲೆಗೆ ಹತ್ತದ ಈತನನ್ನು ದಡ್ಡನೆಂದು ಬಗೆದ ಅನಂತಾಚಾರ್ಯರು ಇವನನ್ನು ಸದಾ "ನಾಸು" ಎಂದು ಬೈಯುತ್ತಿದ್ದರು. ಅನಂತಾಚಾರ್ಯ ಮತ್ತು ಪದ್ಮಾವತಿ ದಂಪತಿಗಳ ಇನ್ನಿಬ್ಬರು ಮಕ್ಕಳು ವಿಷ್ಣು ಮತ್ತು ಅರುಂಧತಿ. ಇವರಿಬ್ಬರೂ ಶಾಲೆಯಲ್ಲಿ ಪ್ರಥಮರು. ಸ್ವತಃ ಗುರುಗಳಾಗಿದ್ದರೂ ತಮ್ಮ ಹಿರಿಮಗ ನಾನಿಯನ್ನು ಬುದ್ಧಿವಂತನನ್ನಾಗಿಸಲು ಇವರಿಂದ ಸಾಧ್ಯವಾಗಲಿಲ್ಲ. ವಿಷ್ಣುವನ್ನು ಹೊಗಳಿ, ಅಣ್ಣನಾದ ನಾನಿಯನ್ನು ತೆಗಳುವ ಅಪ್ಪನೆಂದರೆ ಅವನಿಗೆ ಇಷ್ಟ. ಅಣ್ಣನೆಂದರೆ ಅಪಮಾನ ಎಂಬಂತಿದ್ದ. ತಾಯಿ, ಅಜ್ಜಿ ಅಕ್ಕವ್ವ, ಹಿಂದು ಮುಂದಿಲ್ಲದ ಪಕ್ಕದ ಮನೆಯ ಅಂಬವ್ವನಿಗೆ ನಾನಿಯ ಮೇಲೆ ಪ್ರೀತಿ ಹೆಚ್ಚು. ಜೊತೆಗೆ ಓಣಿಯವರಿಗೆಲ್ಲಾ ನಾನಿ ಬೇಕಾದವನಾಗಿದ್ದ. ಮುಂದೆ ವಿಷ್ಣು ಉನ್ನತ ವ್ಯಾಸಂಗ ಮಾಡುತ್ತಾನೆ. ಅಪ್ಪನ ದೃಷ್ಟಿಯಲ್ಲಿ ಸದಾ ಕ್ರೂರಿಯಾಗಿ, ದಡ್ಡನಾಗಿ ಬೆಳೆಯುವ ನಾನಿಯ ನಡತೆಯಲ್ಲಿ ಬದಲಾವಣೆಗಳಾಗುತ್ತವೆ. ಆತ ಪ್ರಾಣಿಗಳನ್ನು ಪ್ರೀತಿಸತೊಡಗುತ್ತಾನೆ. ಹಕ್ಕಿಗಳ ಕಲರವ ಕೇಳುವುದು, ಪ್ರಕೃತಿಯ ವಿಸ್ಮಯವನ್ನು ಬೆರಗುಗಣ್ಣಿನಿಂದ ವೀಕ್ಷಿಸುವುದರಲ್ಲಿ ಆನಂದ ಪಡೆಯುತ್ತಿದ್ದ. ಒಮ್ಮೆ ಜನಾರ್ಧನರಾಯರ ಮಗಳು ಲಕ್ಷ್ಮಿಯ ಸೆರಗು ಹಿಡಿದ ಒಬ್ಬನನ್ನು ಹೊಡೆದು ಉರುಳಿಸಿದ ನಾನಿಯ ಮೇಲೆ ಲಕ್ಷ್ಮೀಗೆ ಒಲವಾಗುತ್ತದೆ. ಅಪ್ಪನಿಂದ ಅಣ್ಣನಿಗೆ ಶಿಕ್ಷೆಯಾಗಬೇಕು ಎಂದು ಬಯಸುವ ವಿಷ್ಣು ತುಂಗಾಳ ಜೊತೆಗೆ ದೈಹಿಕ ಸಂಪರ್ಕ ಮಾಡುತ್ತಾನೆ. ಹಾಗೂ ವೈದ್ಯಶಾಸ್ತ್ರದಲ್ಲಿ ಪರಿಣಿತನಾಗಿ ಅಪ್ಪನ ಪ್ರೀತಿಗೆ ಪಾತ್ರನಾಗುತ್ತಾನೆ. ಜನಾರ್ಧನರಾಯರು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲಾಗದೆ ತನ್ನ ಮಗಳು ಲಕ್ಷ್ಮಿಯನ್ನು ವಿಷ್ಣುವಿಗೆ ಮದುವೆ ಮಾಡಿಕೊಡಲು ನಿರ್ಧರಿಸುತ್ತಾರೆ. ಇದರಿಂದ ನಾನಿಯನ್ನು ಪ್ರೀತಿಸುತ್ತಿದ್ದ ಲಕ್ಷ್ಮಿಗೆ ಬಹಳ ಬೇಸರವಾಗುತ್ತದೆ. ಇಲ್ಲಿ ಆರ್ಥಿಕ ಸಮಸ್ಯೆಯು ಮಕ್ಕಳ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ದೂರಾಗಿಸುವ ಸನ್ನಿವೇಶವಿದೆ. ಈ ವಿಚಾರವನ್ನು ತಿಳಿದು ನಾನಿ 'ನಾಯಿ ಸೂಳಿಮಗ.. ನಾಯಿ ಸೂಳಿಮಗ' ಎಂದು ಕಿರುಚಿ ತನ್ನ ಕೈಗಳನ್ನು ಗಾಯಮಾಡಿಕೊಳ್ಳುತ್ತಾನೆ. ಈ ಅಸಹಾಯಕತೆಯಿಂದ ನಾನಿಯು ಕೋಪೋದ್ರಿಕ್ತನಾಗಿ ಅವನಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ಅಪ್ಪನಿಗೆ ಕೈ ಎತ್ತಿ ಊರು ಬಿಟ್ಟು ಹೋಗುವ ನಾನಿ ನುಗ್ಗಿಕೇರಿ ಗೌಡರ ಮನೆಯ ಆಳಾಗಿ ದುಡಿದು ಹೊಟ್ಟೆ ತುಂಬಿಸುತ್ತಾನೆ. ತಮ್ಮ ಅಂತಸ್ತಿನ ಬಗ್ಗೆ ಮಾತನಾಡುವ ತಂದೆಗೆ 'ಹಸಿವಿನ ಮುಂದೆ ಜಾತಿ, ಅಂತಸ್ತು ಲೆಕ್ಕಕ್ಕೆ ಬರಲ್ಲ. ನಾನು ದುಡಿದು ತಿನ್ನುತ್ತಿದ್ದೇನೆ' ಎಂದು ಹೇಳುತ್ತಾನೆ. ನಂತರ ನಾನಿಯು ತಮ್ಮ ವಿಷ್ಣುವಿನಿಂದ ಕೆಡಲ್ಪಟ್ಟ ತುಂಗಾಳಿಗೆ ನ್ಯಾಯ ಕೊಡಿಸುವನೇ..? ಲಕ್ಷ್ಮಿಯನ್ನು ನಾನಿಯೇ ಮದುವೆಯಾಗಿ ತನ್ನ ಪ್ರೀತಿಯನ್ನು ತನ್ನದಾಗಿಕೊಳ್ಳುವನೇ..? ತಂಗಿ ಅರುಂಧತಿಗೆ ಆಕೆಯು ಪ್ರೀತಿಸಿದ ಹುಡುಗನೊಂದಿಗೆ ವಿವಾಹ ಮಾಡುತ್ತಾನೆಯೇ..? ಈ ಮುಂತಾದ ಪ್ರಶ್ನೆಗಳಿಗೆ ಉತ್ತರ ಈ ಕಾದಂಬರಿಯಲ್ಲಿದೆ. 'ನಾಸು' ಎಂದು ಬೈದು ತೆಗಳುತ್ತಿದ್ದ ತಂದೆಯಿಂದ ನಾನಿ ಶ್ರೇಷ್ಠನೆಂದು ಕರೆಸಿಕೊಳ್ಳುವನೇ..? ಹೆತ್ತ ತಾಯಿಯಂತೆ ಪ್ರೀತಿಸಿ, ತನ್ನ ಒಡವೆಗಳನ್ನು ನಾನಿಗಿತ್ತು ಕಾಶಿಗೆ ತೆರಳಿದ್ದ ಅಂಬವ್ವನನ್ನು ಕರೆತರುವನೇ..? ಅಥವಾ ಆಕೆಯೊಂದಿಗೆ ಅಲ್ಲಿಯೇ ನೆಲೆಸುವನೇ..? ವಿಷ್ಣುವಿನಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಅನಂತಾಚಾರ್ಯರಿಗೆ ಮುಂದೇನಾಗುತ್ತದೆ..? ಈ ಕುತೂಹಲಗಳನ್ನು ತಣಿಸಲು ಓದುಗರು 'ನಾಸು'ವಿನ ಪುಟ ತೆರೆಯಬೇಕು. ಈ ಕಾದಂಬರಿಯಲ್ಲಿ ಒಬ್ಬ ಮಗನನ್ನು ಹೊಗಳಿ, ಇನ್ನೊಬ್ಬ ಮಗನನ್ನು ತೆಗಳಿ ತಾರತಮ್ಯ ಮಾಡುವ ತಂದೆಯ ಸಂಕುಚಿತ ಮನೋಭಾವವಿದೆ. ಅತಿಯಾದ ಮುದ್ದಿನಿಂದ ಮಕ್ಕಳು ಅಡ್ಡದಾರಿ ಹಿಡಿಯಬಹುದು ಎನ್ನುವ ಕಿವಿ ಮಾತಿದೆ. ಇಲ್ಲಿ ತುಳಿದಷ್ಟು ಬೆಳೆಯುವ ಮನುಷ್ಯ ಸ್ವಭಾವದ ಚಿತ್ರಣವಿದೆ. 'ನಾಸು' ಮಾನವೀಯತೆಯೇ ನಿಜವಾದ ಧರ್ಮ ಎಂದು ಸಾರುತ್ತದೆ. ಪೋಷಕರು ಮಕ್ಕಳನ್ನು ಹೀಯಾಳಿಸಿ ಅವರ ಮನಸ್ಸಿನಲ್ಲಿ ಕೀಳರಿಮೆಯನ್ನು ಬೆಳೆಸಬಾರದೆನ್ನುವ ಸಂದೇಶವಿದೆ. ತಮ್ಮ ಆರ್ಥಿಕ ಸಂಕಷ್ಟಗಳಿಂದ ಪಾರಾಗಲು ಮಕ್ಕಳನ್ನು ಅಸ್ತ್ರಗಳನ್ನಾಗಿಸಬಾರದು.. ಹೊಸ ಜೀವನ ನಡೆಸಲು ಮುಂದಾಗುವಾಗ ಮಕ್ಕಳ ಮಾತಿಗೂ ಬೆಲೆ ಕೊಡಬೇಕು ಎನ್ನುವ ಸತ್ಯವಿದೆ. ಒಟ್ಟಿನಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ, ಭಾವಾನಾತ್ಮಕ, ಕೌಟುಂಬಿಕ ಹಿನ್ನೆಲೆಯ ಹಳ್ಳಿಯ ಸೊಗಡಿನ 'ನಾಸು' ಸುದೀರ್ಘವಾಗಿದೆ. ಕೆಟ್ಟತನದ ವಿರುದ್ಧ ಒಳ್ಳೆತನಕ್ಕೆ ಜಯ ಸಿಗುವುದೇ..? ಓದಿ ನೋಡಿ. ✍️ ವಿಜಯಲಕ್ಷ್ಮಿ ನಾಯ್ಕ್ ಬಿಳಿಯೂರು

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
92
Views
7 Months
Since posted

Voting Closed!

Scroll to Top