Submission 1714

ಪುಸ್ತಕದ ಶೀರ್ಷಿಕೆ: ಮಾನವೀಯ ಮೌಲ್ಯಗಳ ಗಣಿ ’ಮಮತೆಯ ಹಣತೆ’

ಪುಸ್ತಕದ ಲೇಖಕರು: ಕಾದಂಬರಿ ಶಾರದೆ ಜಯಂತಿ ಚಂದ್ರಶೇಖರ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶಮಂತಕುಮಾರ್‌ ಎಸ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಸಾಮಾನ್ಯವಾಗಿ ಸಾಹಿತ್ಯದ ಯಾವುದೇ ಪ್ರಕಾರವಾದರೂ, ಅದು ಓದಿಸಿಕೊಂಡು ಹೋಗುವ ಗುಣಧರ್ಮವನ್ನು ಹೊಂದಿರಬೇಕು ಎಂಬುದು ಸಾಹಿತ್ಯ ಕ್ಷೇತ್ರದಲ್ಲಿ ಪ್ರಚಲಿತದಲ್ಲಿರುವ ಮಾತು. ಹಾಗೆಯೇ ಜಯಂತಿಯವರ ’ಮಮತೆಯ ಹಣತೆ’ ಕಾದಂಬರಿಯು ಓದಿಸಿಕೊಂಡು ಹೋಗುವ ಗುಣಧರ್ಮದೊಂದಿಗೆ ಸಾಮಾಜಿಕ ಕಳಕಳಿ, ಕೂಡು ಕುಟುಂಬದ ತತ್ವ, ಹೆಣ್ಣಿಗಿರಬೇಕಾದ ಸಹನೆ, ತಾಳ್ಮೆ, ಪ್ರೀತಿ, ವಾತ್ಸಲ್ಯ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳನ್ನು ಓದುಗನಿಗೆ ಬೋಧಿಸಿಕೊಂಡು ಹೋಗುವ ಗುಣಧರ್ಮವನ್ನು ಹೊಂದಿರುವ ಮಹೋನ್ನತ ಸಾಮಾಜಿಕ ಕಾದಂಬರಿಯಾಗಿದೆ. ಆರಂಭದಲ್ಲಿ ಕಾದಂಬರಿಯು ಬಹುಮುಖ ಪಾತ್ರಗಳ ಸೃಷ್ಟಿಯಿಂದ ಗೊಂದಲವನ್ನು ಉಂಟುಮಾಡಿದರೂ, ಪಾತ್ರಗಳ ಪರಿಚಯವಾದಂತೆ ಕೌತುಕ, ವಿಸ್ಮಯಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಅನೇಕ ತಿರುವುಗಳ ಹರದಾರಿಯಾಗಿರುವ ’ಮಮತೆಯ ಹಣತೆ’ ಕಾದಂಬರಿಯಲ್ಲಿ ರಾಘವಾಂಕನ ಹರಿಶ್ಚಂದ್ರ ಕಾವ್ಯದ ಚಂದ್ರಮತಿಯ ಸಂಕಟದಲ್ಲಿ ಶೋಕ ಸಾಗರವು ರಭಸವಾಗಿ ಹರಿದಂತೆ ಇಲ್ಲೂ ಹರಿದಿದೆ. ಸಂದರ್ಭಗಳ ಒತ್ತಡಕ್ಕೆ ಮಣಿದು ರಘು ಮತ್ತು ಅಮೃತ ಹೆತ್ತವರಿಗೆ ತಿಳಿಯದಂತೆ ವಿವಾಹವಾಗಿ ಅದೇ ವಿಧಿಯಾಟಕ್ಕೆ ತುತ್ತಾಗಿ ದೂರಾಗುತ್ತಾರೆ. ತಂದೆ ತಾಯಿಯ ಒತ್ತಾಯಕ್ಕೆ ಮಣಿದ ರಘು ಅಚಲಳನ್ನು ಮದುವೆಯಾದರೆ, ಅಣ್ಣ ಮತ್ತು ಅತ್ತಿಗೆಯ ಒಳಸಂಚಿಗೆ ಗುರಿಯಾಗಿ ಅಮೃತ ಅನಾಮಧೇಯನ್ನು ಮದುವೆಯಾಗಬೇಕಾಗುತ್ತದೆ. ಅಷ್ಟರಲ್ಲಾಗಲೇ ರಘುವಿನ ಕರುಳಿನ ಕುಡಿ ಅಮೃತಳ ಗರ್ಭದಲ್ಲಿ ಅಂಕುರಿಸಿರುತ್ತದೆ. ಮಗು ಹುಟ್ಟುವ ತನಕ ಅಜ್ಙಾತದಲ್ಲಿದ್ದ ಅಮೃತ ತನ್ನ ಮಗುವನ್ನು ಅಘುವಿನ ತಂಗಿ ರಾಧಿಕಾಳ ಮೂಲಕ ಅಘುವಿನ ಮಡಿಲಿಗೆ ಸೇರಿಸುತ್ತಾಳೆ. ಮೊದಲಿಗೆ ಮಗು ಯಾರದೆಂದು ತಿಳಿಯದ ರಘು ಮಗುವನ್ನು ಕಂಡ ಕೂಡಲೆ ಅವನ ಮನದಲ್ಲಿ ಹೇಳಲಾಗದ ಭಾವನೆಗಳು ನವಿರೇಳುತ್ತವೆ. ’ಕಣ್ಣರಿಯದಿದ್ದೊಡೇಂ ಕರುಳರಿಯದೆ’ ಎನ್ನುವ ಮಾತನ್ನು ಕಾದಂಬರಿಗಾರ್ತಿ ಈ ಘಟ್ಟದಲ್ಲಿ ಅದ್ಭುತವಾಗಿ ಕಡೆದು ನಿಲ್ಲಿಸಿದ್ದಾರೆ. ಮುಂದೆ ಈ ಮಗು ಮನ ಎನ್ನುವ ಹೆಸರಿನಿಂದ ಮನೆಯನ್ನು ಬೆಳಗುವ ದೀಪವಾಗುತ್ತಾಳೆ. ಮುಂದೆ ಅಮೃತಳಿಗೆ ಅಪರಿಚಿತರಾದ ಮಹೇಶ ಮತ್ತು ಆತನ ತಾಯಿ ಪರಿಚಯವಾಗಿ ಆಶ್ರಯ ನೀಡುತ್ತಾರೆ. ಅಸಹಾಯಕರಾಗಿ ಕತ್ತಲಲ್ಲಿ ಮುಳುಗಿದವರಿಗೂ ಸಣ್ಣ ಕೋಲ್ಮಿಂಚೊಂದು ದಾರಿ ತೋರಬಲ್ಲದು ಎಂಬುದನ್ನು ಕಾದಂಬರಿಯಲ್ಲಿ ಮಹೇಶ ಮತ್ತು ಆತನ ತಾಯಿಯ ಪಾತ್ರ ನಿರ್ವಹಿಸುತ್ತದೆ. ಇನ್ನೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಧಿಸುವ ರಘು ಮತ್ತು ಅಮೃತಳನ್ನು ಮತ್ತೆ ರಾಧಿಕ, ರಾಜೇಶ, ಅನಂತ ಮತ್ತು ರತ್ನರು ಒಂದುಗೂಡಿಸುತ್ತಾರೆ. ಇಲ್ಲಿ ರಘುವಿನ ಹೆಂಡತಿ ಅಚಲಳ ಮಾನವೀಯ ಮೌಲ್ಯಗಳು ಪ್ರಕಾಶಿಸುತ್ತವೆ. ’ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವ ಮಾತೊಂದಿದೆ. ತನ್ನ ಗಂಡನ ಹೃದಯದಲ್ಲಿ ಮತ್ತೊಬ್ಬಳು ಸ್ಥಾನ ಪಡೆಯುವುದನ್ನು ಯಾವ ಹೆಣ್ಣೂ ಸಹ ಸಹಿಸಲಾರಳು. ಆದರೆ ಇದಕ್ಕೆ ಅಪವಾದವೆಂಬಂತೆ ಅಚಲಳು ರಘು ಮತ್ತು ಅಮೃತಳ ಪ್ರೇಮವನ್ನು ಪುರಸ್ಕರಿಸಿ ತ್ಯಾಗಮಯಿಯಾಗುತ್ತಾಳೆ. ಅಮೃತಳೂ ಸಹ ಈ ಒಂದು ಗುಣಕ್ಕೆ ಹೊರತಾದವಳಲ್ಲ. ರಘುವಿಗೆ ವಿವಾಹವಾಗಿದೆಯೆಂದು ತಿಳಿದೂ, ಅವನನ್ನು ಸೇರುವ ವಿಫುಲ ಅವಕಾಶಗಳಿದ್ದರೂ ಸಹ ಅಚಲಳ ಬಾಳಿನಲ್ಲಿ ಬಿರುಗಾಳಿಯಾಗಬಾರದೆಂದು ದೂರವಾದ ದೇವತೆಯಾಗಿದ್ದಾಳೆ. ಮುಂದೆ ಅಚಲ ಮತ್ತು ಅಮೃತ ರಘುವಿನೊಡನೆ ಒಂದೇ ಸೂರಿನಡಿ ಅನ್ಯೋನ್ಯವಾಗಿ ವಾಸಿಸುವ ರೀತಿ "ಸಮಾನಶೀಲ ವ್ಯಸನೇಷು ಸಖ್ಯಂ" ಎನ್ನುವ ತತ್ವವನ್ನು ಸಾರುವಂತಿದೆ. ಕಾದಂಬರಿಯಲ್ಲಿ ರಘು-ಅಮೃತ-ಅಚಲ, ಸುಮಂತ್-ಮನ, ರಾಹುಲ್-ಗಂಗಾರಿಗೆ ಸಮಾನ ನ್ಯಾಯವನ್ನು ಹೊದಗಿಸಿರುವ ಕಾದಂಬರಿಗಾರ್ತಿ ಜಯಂತಿಯವರು ಮಹೇಶ ಮತ್ತು ಅಂಬುಜರಿಗೆ ಅನ್ಯಾಯವನ್ನು ಮಾಡಿದರೇನೋ ಎಂದು ವಿಷಾದವಾಗುತ್ತದೆ. ಕಾದಂಬರಿಯಲ್ಲಿ ಚೌಡೇಶ್ವರಿ ಅಮ್ಮನ ಜಾತ್ರೆ ಮತ್ತು ಅದರ ವಿವರಗಳು ಅಪ್ರಸ್ತುತವೆನಿಸಿದರೂ, ಅಮೃತಳನ್ನು ರಘುವಿನ ಹೆಂಡತಿಯೆಂದು ಸಮಾಜಕ್ಕೆ ಪರಿಚಯಿಸಿಕೊಡುವ ಉದ್ದೇಶದಿಂದ ಪೂರ್ವವೇದಿಕೆಯಾಗಿ ಚೌಡೇಶ್ವರಿ ಅಮ್ಮನ ಜಾತ್ರೆಯ ಪ್ರಸಂಗವನ್ನು ಜಯಂತಿಯವರು ಬಳಸಿಕೊಂಡಿರುವುದು ಸೂಕ್ತವೆನಿಸುತ್ತದೆ. ಒಟ್ಟಾರೆಯಾಗಿ ಕಾದಂಬರಿಯಲ್ಲಿ ಅಚಲಳು ದೀಪವಾದರೆ, ರಘು ಅದರೊಳಗಿನ ತೈಲದಂತೆ. ಅಮೃತ ನವಿರಾಗಿ ಹೊಸೆದ ಬತ್ತಿಯಾದರೆ, ಮನ ಇವರೆಲ್ಲರ ಸಾರವನ್ನು ಹೀರಿ ಬೆಳಗಿದ ಜ್ಯೋತಿಯಂತೆ. ಇವರ ಅವಿಭಕ್ತ ಕುಟುಂಬ ’ಮಮತೆಯ ಹಣತೆ’ಯಂತೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ರಘುವಿನ ಹೆಂಡತಿ ಅಚಲಳ ಮಾನವೀಯ ಮೌಲ್ಯಗಳು ಪ್ರಕಾಶಿಸುತ್ತವೆ. ’ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವ ಮಾತೊಂದಿದೆ. ತನ್ನ ಗಂಡನ ಹೃದಯದಲ್ಲಿ ಮತ್ತೊಬ್ಬಳು ಸ್ಥಾನ ಪಡೆಯುವುದನ್ನು ಯಾವ ಹೆಣ್ಣೂ ಸಹ ಸಹಿಸಲಾರಳು. ಆದರೆ ಇದಕ್ಕೆ ಅಪವಾದವೆಂಬಂತೆ ಅಚಲಳು ರಘು ಮತ್ತು ಅಮೃತಳ ಪ್ರೇಮವನ್ನು ಪುರಸ್ಕರಿಸಿ ತ್ಯಾಗಮಯಿಯಾಗುತ್ತಾಳೆ. ಅಮೃತಳೂ ಸಹ ಈ ಒಂದು ಗುಣಕ್ಕೆ ಹೊರತಾದವಳಲ್ಲ. ರಘುವಿಗೆ ವಿವಾಹವಾಗಿದೆಯೆಂದು ತಿಳಿದೂ, ಅವನನ್ನು ಸೇರುವ ವಿಫುಲ ಅವಕಾಶಗಳಿದ್ದರೂ ಸಹ ಅಚಲಳ ಬಾಳಿನಲ್ಲಿ ಬಿರುಗಾಳಿಯಾಗಬಾರದೆಂದು ದೂರವಾದ ದೇವತೆಯಾಗಿದ್ದಾಳೆ. ಮುಂದೆ ಅಚಲ ಮತ್ತು ಅಮೃತ ರಘುವಿನೊಡನೆ ಒಂದೇ ಸೂರಿನಡಿ ಅನ್ಯೋನ್ಯವಾಗಿ ವಾಸಿಸುವ ರೀತಿ "ಸಮಾನಶೀಲ ವ್ಯಸನೇಷು ಸಖ್ಯಂ" ಎನ್ನುವ ತತ್ವವನ್ನು ಸಾರುವಂತಿದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

0
Votes
72
Views
7 Months
Since posted

Voting Closed!

Scroll to Top