ಪುಸ್ತಕದ ಶೀರ್ಷಿಕೆ: ನವಿಲುಗರಿ
ಪುಸ್ತಕದ ಲೇಖಕರು: ಎ.ಆರ್. ಮಣಿಕಾಂತ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ರಂಜಿತಾ ಹೆಗಡೆ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನವಿಲು ಗರಿ ಎಂದ ಕೂಡಲೇ ನೆನಪಾಗುವುದು ನವನೀತ ಚೋರ ಶ್ರೀಕೃಷ್ಣ! ಅವನ ಮುಕುಟದಲ್ಲಿರುವ ನವಿಲುಗರಿಗೆ ಅದೆಂತಹದ್ದೋ ಹಿರಿಮೆ! ಭಗವಂತನ ಶಿರದಲ್ಲಿ ಮೆರೆಯುವ ಪುಣ್ಯ ದಕ್ಕಿದ್ದು ಗಂಗೆಯನ್ನು ಬಿಟ್ಟರೆ ನಿರ್ಜೀವಿಯಾದರೂ ಜೀವಕಳೆ ತುಂಬುವ ನವಿಲುಗರಿಗೆ ಮಾತ್ರವೇ..! ಅಂತಹದ್ದೇ ಜೀವಕಳೆ ತುಂಬುವ ಕಥೆಗಳನ್ನು ಹೆಣೆದು 'ನವಿಲುಗರಿ'ಯಾಗಿ ನಮ್ಮೆಲ್ಲರ ಮುಂದೆ ಲೇಖಕರಾದ ಎ. ಆರ್ ಮಣಿಕಾಂತ್ ಅವರು ಪ್ರಸ್ತುತ ಪಡಿಸಿದ್ದಾರೆ! ಹೆಸರೇ ಸೂಚಿಸುವಂತೆ ಇಲ್ಲಿರುವ ಕಥೆಗಳು ನವಿಲುಗರಿಯ ಎಳೆಯಷ್ಟೇ ಮಧುರ. ನವಿಲುಗರಿಯ ಕಣ್ಣಿನಷ್ಟೇ ಸತ್ಯ. ಇಲ್ಲಿರುವವರಾರೂ ಒಂದಾನೊಂದು ಕಾಲದಲ್ಲಿ ಇದ್ದ ಒಬ್ಬಳು ರಾಜಕುಮಾರಿಯಲ್ಲ! ಈ ಸಾಧಕರಾರಿಗೂ ರಾತ್ರಿ ಕಳೆದು ಮುಂಜಾನೆ ಏಳುವಷ್ಟರಲ್ಲಿ ಗೆಲುವಿನ ಸುಪ್ರಭಾತ ಕೇಳಲಿಲ್ಲ! ಕಷ್ಟ ಕಾರ್ಪಣ್ಯಗಳ ಮುಳ್ಳಿನ ಬೇಲಿಗೆ ಜೋತು ಬಿದ್ದು, ಗೆದ್ದ ತಮ್ಮದೇ ಯಶೋಗಾಥೆಯ ಲೇಖಕರಿವರು! ಜೀವನವೆಂಬ ಭವಸಾಗರದಲ್ಲಿ ಒಮ್ಮೆ ತೇಲುತ್ತಾ ಒಮ್ಮೆ ಮುಳುಗುತ್ತಾ ದಡ ಸೇರಿ ವಿಜಯ ಪರ್ವ ಆಚರಿಸಿದವರ ಜೀವಂತ ಕಥೆ ಇದಾಗಿದೆ! ಈ ನವಿಲುಗರಿ ಬರೀ ಸಾಧಕರ ಕಥೆಯನ್ನೇ ಹೇಳುತ್ತಿಲ್ಲ! ಜೊತೆ ಜೊತೆಗೆ ಎಲ್ಲಕ್ಕೂ ಮಿಗಿಲಾಗದ ಸಂಬಂಧಗಳು, ಭಾವನೆಗಳ ಪಾಠ ಹೇಳುತ್ತದೆ! ಒಂದು ಕಪ್ ಗಟ್ಟಿ ಮೊಸರು ತಿನ್ನಲು ಈ ಹಿಂದೆ ಅಪ್ಪ ಮೊಸರಿನಷ್ಟೇ ತಂಪಾಗಿ ಕುಳಿತಿರಲಿಲ್ಲ, ಎಂದು ಅರಿತು ಅಪ್ಪನ ಮನದ ಭಾವನೆಯನ್ನು ಕನ್ನಡಿಯಷ್ಟೇ ನಿಖರವಾಗಿ ಓದಿದ ಮಗ ಒಂದು ಕಡೆಯಾದರೆ, ತನ್ನ ಮಕ್ಕಳು ಎಷ್ಟೇ ಕಷ್ಟ ಕೊಟ್ಟರೂ ಸರಿ, ಅವರು ಚೆನ್ನಾಗಿರಬೇಕು ಎಂಬ ತಾಯಿಯ ಮಾತಿನಿಂದ ತನ್ನ ತಪ್ಪು ತಿದ್ದಿಕೊಂಡ ಸೊಸೆ ಇನ್ನೊಂದೆಡೆ! ಮಾವು ಬಿತ್ತಿದರೆ ಮಾವು, ಬೇವು ಬಿತ್ತಿದರೆ ಬೇವು ಎಂದು ಸೂಕ್ಷ್ಮವಾಗಿ ತಾಯಿಯೊಬ್ಬಳು ತನ್ನ ಅನಾಥಾಶ್ರಮದಲ್ಲಿ ಬಿಟ್ಟ ಸುಪುತ್ರನಿಗೆ ತಿಳಿಸುವ ಪರಿ ಅದ್ಭುತ! ಚಿಕ್ಕ ವಯಸ್ಸಿನಲ್ಲೇ ಸ್ನೇಹಿತನಿಗಾಗಿ ನೀಹಾರಿಕಾ ಮಾಡಿದ ತ್ಯಾಗ, ಅವಳ ಅಂತಃಕರಣ ಕೋಟಿ ನಕ್ಷತ್ರಪುಂಜಗಳ ಪ್ರಭೆಯನ್ನೇ ಮೀರಿಸುವಂತಹದ್ದು! ಅಲ್ಲೊಬ್ಬ ಮೊಮ್ಮಗ ತನ್ನ ಅಜ್ಜ ಅಜ್ಜಿಗೋಸ್ಕರ ಲಂಚ್ ಬಾಕ್ಸ್ ಹಂಚಿಕೊಂಡರೆ ಅವರು ಪುಳಿಯೋಗರೆ ತಿನ್ನಲಾಗದ ಗುಟ್ಟು ಹೇಳಿದ್ದರು. ಜೆಸ್ಸಿ ಓವೆನ್ಸ್ ತನ್ನ ಪ್ರತಿಸ್ಪರ್ಧಿ ಎಂಬುದನ್ನು ಮರೆತು, ಅವನಿಗೆ ಗುರು, ಹಿತೈಷಿಯಾದ ಲುಜ್ ಲಾಂಗ್, ಅಲ್ಲಿಂದ ಆರಂಭವಾದ ಸ್ನೇಹವೆಂಬ ಸುಮಧುರ ಬಂಧದ ಕಥೆ ಮಧುರವೆನಿಸುತ್ತದೆ! ಯೋಧನೊಬ್ಬನ ಪಿಸುಮಾತು ಪ್ರತಿಧ್ವನಿಸುವ ವೇಳೆ ಪ್ರತಿಧ್ವನಿಸುವ ಸ್ವರವೇ ಶಾಶ್ವತವಾಗಿ ಮೌನವ ಧ್ಯಾನಿಸುತ್ತಿದ್ದರೂ 'ಜೈ ಹಿಂದ್' ಎನ್ನಲು ಮರೆಯಲಿಲ್ಲ! ಆಸಿಡ್ ದಾಳಿಗೆ ತುತ್ತಾದರೂ ಪ್ರೀತಿಸಿದವಳ ಜೊತೆ ಸಪ್ತಪದಿ ತುಳಿದ ರವಿ ಶಂಕರ್ ಸಿಂಗ್ ಗೆ ಲಲಿತಾಳ ಮೇಲೆ ಇರುವ ಪ್ರೀತಿ, ರಜಿಯಾ ಬೇಗಂ, ಅಬ್ಬಾಸ್ ಪ್ರೇಮ ಕಥೆ ರೂಪ ರೂಪಗಳ ದಾಟಿ ಅಜರಾಮರವೇ ಸರಿ. ಅಮ್ಮನಿಗಾಗಿ ಹಂಬಲಿಸುವ ರಾಜನ ಮನ ಒಂದೆಡೆ. ಅಮ್ಮನ ಬೆಲೆ ಅರಿಯದ ಮಗಳು ಇನ್ನೊಂದೆಡೆ. ಹೀಗೆ ಎರಡು ಅಲಗಿನ ಕತ್ತಿಯ ಅಂಚಿನಂತೇ ಬದುಕು ಎನ್ನಿಸಿತು! ಹೂವು ಕೊಟ್ಟರೆ ಭಗವಂತ ಸಿಹಿಯಾದ ಹಣ್ಣನ್ನೇ ಕೊಡುತ್ತಾನೆ ಎನ್ನುವುದಕ್ಕೆ ಸೈಕಲ್ ರಿಕ್ಷಾದ ಬಾಬುಶೇಕ್ ಸಾಕ್ಷಿ! ಮಹಮ್ಮದ್ ಅಲಿಯ ಕಥೆಯಲ್ಲಿ ಅಡಗಿರುವ ಅನ್ನದ ಋಣ ದೇಶದ ಪರಿಧಿಯ ದಾಟಿ ಬಂದಿತ್ತು! ಮುಂಗೋಪದಿಂದ ಮನೆಯನ್ನು ತೊರೆದ ಮಗನಿಗೆ ಅಪ್ಪನ ಮೌನದ ಹಸ್ತಾಕ್ಷರ ಸ್ವಾಗತಿಸಿದ ಕಥೆ ಹೃದಯ ಮಿಡಿಯುವಂತಹದ್ದು! ಅನ್ಯಾಯದ ಕುಲುಮೆಯಲ್ಲಿ ಸಂಬಂಧವು ಕರಗಿತ್ತಷ್ಟೆ! ಆದರೆ ಕುಲುಮೆಯ ತಾಪ ಆರಿದಾಗ ಸಂಬಂಧ ಗಟ್ಟಿಯಾಗಿಯೇ ಇತ್ತು ಎಂಬ ಸತ್ಯದ ಅರಿವಾಗಿದ್ದು ನಂಜೇ ಗೌಡರ ಸಾವಿನ ನಂತರವೇ! ಈ ಕಥೆಗಳಲೆಲ್ಲಾ ಸಂಬಂಧಗಳ ಕಲರವ ಪ್ರತಿಧ್ವನಿಸಿದರೆ, ಇನ್ನಷ್ಟು ಕಥೆ ಸಾಧಕರು ನಡೆದು ಬಂದ ಹಾದಿಯನ್ನು ವರ್ಣಿಸುವುದು! ಒಬ್ಬ ಖಳನಾಯಕನ ಜೀವನದ ಪದವನ್ನೇ ಬದಲಿಸಿದ ಫುಟ್ಬಾಲ್, ವಿದ್ಯೆ ಇಲ್ಲದವನಿಗೂ ಒಲಿದ ಸಾಹಿತ್ಯ ಸರಸ್ವತಿ! ಬೆಂದವರು ಬಾಳುವರು ಎಂಬುವುದಕ್ಕೆ ಸಾಕ್ಷಿಯಾಗಿ ಮಹೇಶ್, ಐ ಎ ಎಸ್ ಮುಗಿಸಿದ ವರುಣ್ ಬರನ್ ವಾಲ್, ಶಿವಕುಮಾರ್ ಕಥೆ ನಿಜಕ್ಕೂ ಸ್ಪೂರ್ತಿ ದಾಯಕ! ವಿಧಿಯ ಸವಾಲಿಗೆ ಸೆಡ್ಡು ಹೊಡೆದು ಕಣ್ಣಿಲ್ಲದಿದ್ದರೂ ವಿಧಿಯ ಮೇಲೆಯೇ ಸವಾರಿ ಮಾಡಿ ಯಶಸ್ಸಿನ ಶಿಖರ ಏರಿದ ಶ್ರೀಕಾಂತ್ ಬೊಳ್ಳಾ! ನೂರಾರು ಜನರು ಬಾಳನ್ನು ಅಮೋಲ್ ನ ಆದರ್ಶ ಬೆಳಗಿದ್ದರೆ, ಕೊಳಕು ಬಟ್ಟೆ ಜಗತ್ತನ್ನೇ ಬೆಳಗಿಸಿತ್ತು! ಅಲ್ಲೊಬ್ಬಳು ಕಗ್ಗತ್ತಲ ಗರ್ಭವ ತೊರೆದು ಕರುಣೆಯ ದೀಪ ಬೆಳಗಿದ್ದಳು! ರುಪಾಯಿ ಹರಿದು ಬಿತ್ತನೆ ಮಾಡಿದಾಗ ಅದು ಮರವಾಗಿ ಮುನ್ನೂರು ಕೋಟಿ ಫಲ ನೀಡಿತ್ತು ಎಂಬ ಕಥೆ ಯಾವುದೋ ದಂತ ಕಥೆಯಲ್ಲ! ಇನ್ನು ಹೆದರಿಸಲು ಬಂದ ಸವಾಲುಗಳಿಗೆ ಸವಾಲಾದ ಶಾಲಿನಿ, ಮ್ಯಾರಥಾನ್ ತಾರೆ ಸಯೂರಿ, ಶೂನ್ಯದಿಂದ ಸನ್ಮಾನ್ಯ ಎಂಬುದಕ್ಕೆ ಅನ್ವರ್ಥಕವಾಗಿ ಬಲವಂತರಾಯ್ ಪಾರೇಖ್, ಇವರ ಅಚಲ ಧೈರ್ಯಕ್ಕೆ ವಿಧಿಯೇ ತಲೆಬಾಗಿ ನಮಸ್ಕರಿಸಿತ್ತು! ಮೋಡದ ಮರೆಯಲ್ಲಿ ಅಡಗಿ ಹೋದ ತಾರೆ ಯಾರಿಗೂ ಕಾಣದಿದ್ದರೂ ಭೈರವಿ ರೂಪದ ಗಾನ ಶಾರದೆಯ ಕಣ್ಣಿಗೆ ಬಿದ್ದ ಭೈರವಿ ಕೆಂಪೇಗೌಡರವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂಬುದು ಒಂದು ವಿಷಾದವೇ ಸರಿ. ದೇವರೇ ಸುಖ ಕೊಡು, ಕಷ್ಟ ಕೊಡಬೇಡ ಎಂದು ಕೇಳಿದಾಗ " ಮುಳ್ಳಿಲ್ಲದಿದ್ದರೇ ಹೂವಿಗೆ ಬೆಲೆ ಇರದು, ರಾತ್ರಿ ಇರದಿದ್ದರೆ, ಎರಡು ದಿನಗಳ ನಡುವಿನ ವ್ಯತ್ಯಾಸ ತಿಳಿಯದು. ಸಿಹಿಯ ಮಹತ್ವ ತಿಳಿಯಲು ಕಹಿಯೋ, ಖಾರವೋ ಇರಲೇಬೇಕು, ಹಾಗೆಯೇ ಸುಖದ ಮಹಲನ್ನು ತಲುಪಲು ಕಷ್ಟಗಳ ಮಜಲನ್ನು ದಾಟಲೇ ಬೇಕು" ಎನ್ನುತ್ತಾ ಕಷ್ಟಗಳನ್ನು ತಂದು ಸುರಿದ! ಪರಿಹರಿಸುವ ದಾರಿಯನ್ನು ತೋರಿಸಿ ಕೊಟ್ಟ! ಕೊನೆಗೂ ಗೆಲುವಿನ ಮಂದಿರದಲ್ಲಿ ದೇವರು ಎಂದಿನಂತೆ ಮೌನಾಭರಣನಾಗಿ, ಹಸನ್ಮುಖಿಯಾಗಿ ಕುಳಿತಿದ್ದಾನೆ ಸುಖಕ್ಕಾಗಿ ಬೇಡಿ ಕೊಂಡ ಪ್ರಾರ್ಥನೆಯ ಧ್ವನಿ ಈಗ ಮಂದಿರವ ಬೆಳಗುವ ದೀಪವಾಗಿ ಬದಲಾದ ಪರಿಯ ನೋಡುತ್ತಾ....!
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಚಿಕ್ಕ ವಯಸ್ಸಿನ ಮಕ್ಕಳಿಗಿಂತ ವಯಸ್ಸಾದವರು ಕೂಡ ಓದಬಹುದಾದ ಪುಸ್ತಕ ಇದಾಗಿದ್ದು ಜೀವನದ ಪ್ರತಿ ಸವಾಲಿನಲ್ಲಿ ಸ್ಪೂರ್ತಿಯಾಗಿ ಜೊತೆ ನಿಲ್ಲುವಂತಹ ಕಥೆಗಳು ಪಾತ್ರಗಳು ಎದುರು ಬರುತ್ತವೆ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.