Submission 1664

ಪುಸ್ತಕದ ಶೀರ್ಷಿಕೆ: ನವಿಲು ಕವನಸಂಕಲನ

ಪುಸ್ತಕದ ಲೇಖಕರು: ಕುವೆಂಪು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಹಿಮೀಶತನಯೆಚೈತ್ರ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

೧೯೩೪ ರಲ್ಲಿ ಪ್ರಕಟವಾದ ಕುವೆಂಪು ವಿರಚಿತ ನವಿಲು ಕವನ ಸಂಕಲನವು ಒಟ್ಟು ೪೨ ಕವನಗಳನ್ನು ತನ್ನ ಗರಿಯಲ್ಲಿ ಸೇರಿಸಿಕೊಂಡಿದೆ. ಈ ಕವನ ಸಂಕಲನದಲ್ಲಿ, ತೊಂಬತ್ತು ಭಾಗದಷ್ಟು ಕವನಗಳು ಪ್ರಕೃತಿ ಆರಾಧನೆಯನ್ನು ಮಾಡುತ್ತವೆ. ಅಲ್ಲೊಂದಿಲ್ಲೊಂದು ಕವನಗಳು ಸ್ವಾತಂತ್ರ್ಯ, ಕನಸು ಹಾಗೂ ಭಾಷೆಗೆ ಸಂಬಂಧಿಸಿದ್ದಾಗಿದೆ. ಇಂತಹ ಅದ್ಭುತ ಕವನಗಳನ್ನು ಓದುವ ಅವಕಾಶ ನವಿಲಿನಲ್ಲಿ ಸಿಗುತ್ತವೆ. ಸ್ಥಿರವಾದ ಈ ಪ್ರಕೃತಿಯನ್ನು, ವೈವಿಧ್ಯಮಯವಾಗಿ ನೋಡುತ್ತಾ ಅದನ್ನು ಕವಿತೆಯನ್ನಾಗಿಸಿ, ಓದುಗರನ್ನು ಪ್ರಕೃತಿ ಆರಾಧನೆಯಲ್ಲಿ ತೊಡಗುವಂತೆ ಮಾಡಿದ್ದಾರೆ. ಕುವೆಂಪು ರವರು , ಸೂರ್ಯೋದಯ, ಹಿಮ, ಪ್ರಾತಃಕಾಲ, ಪಕ್ಷಿ, ಬೆಳದಿಂಗಳು ಮುಂತಾದ ಬಗೆಯನ್ನು ಹೇಗೆ ವೈವಿಧ್ಯಮಯವಾಗಿ ಕಂಡು ಅವುಗಳನ್ನು ಲೇಖನಿಯಲ್ಲಿ ಬರೆದಿಟ್ಟಿದ್ದಾರೋ ಅದರಂತೆಯೇ ವೈವಿಧ್ಯಮಯ ಭಾವಾರ್ಥಗಳು ಸಹೃದಯನಿಗೆ ಮೂಡುತ್ತಲೇ ಇರುತ್ತದೆ. ಕವನಗಳಲ್ಲಿ ಪರಿಸರವನ್ನು ವರ್ಣಚಿತ್ರಗಳಂತೆ ಚಿತ್ರಿಸಿದ್ದಾರೆ, ಪ್ರಕೃತಿಗೆ ಮಹತ್ವವನ್ನು ಕೊಡುವ ಶ್ರೀಕುವೆಂಪು ರವರು ಪ್ರಕೃತಿಯಲ್ಲಿ ದೇವರು ಹಾಗೂ ಸ್ವರ್ಗವನ್ನೆರಡನ್ನು ಕಾಣುತ್ತಾರೆ. ಕವನ ಸಂಕಲನದ ಮೊದಲ ಕವನ‌ದ ಹೆಸರು ನವಿಲು. ನವಿಲನ್ನು ಕವಿತೆಗೆ ಹೋಲಿಸಿದ್ದಾರೆ. ಕವಿತೆಯು ಮಯೂರ ನರ್ತನದಂತೆಯೇ ಸುಂದರವಾಗಿದೆ. ಬೈಗುಗಂಪು ಕವಿತೆಯಲ್ಲಿ, ಸೂರ್ಯಾಸ್ತವನ್ನು ಸುಂದರವಾದ ಮಂಗಳ ಹಾಗೂ ರುದ್ರ ಮನೋಹರ ಎಂಬೆರಡು ರೀತಿಯಲ್ಲಿ ವರ್ಣಿಸಿರುವುದು ವಿಶೇಷ ಭಾವವನ್ನು ಮೂಡಿಸುತ್ತದೆ. ಸೌಂದರ್ಯತೆ ಮತ್ತು ಕ್ರೌರತೆ ಎರಡೂ ಅರ್ಥವನ್ನು ಸೂರ್ಯಸ್ತದ ಕೆಂಪಿನಲ್ಲಿ ಕಂಡಿರುವುದು, ಬೇಂದ್ರೆ ರವರ ನಾದಲೀಲೆ ಕವನವನ್ನು ನೆನಪಿಸುತ್ತದೆ. ಕನ್ನಡಿಗರ ಶೌರ್ಯವನ್ನು ,‌ ಕನ್ನಡಿಗರ ಶಕ್ತಿಯನ್ನು 'ಕಬ್ಬಿಗರು' ಎಂಬ ಕವನದಲ್ಲಿ ಬಿತ್ತರಿಸಿದ್ದಾರೆ. ಕನ್ನಡಿಗರ ಲೇಖನಿಯ ಮುಂದೆ ಯಾವ ಬರಸಿಡಿಲೂ ಲೆಕ್ಕಕ್ಕಿಲ್ಲ ಎಂದು ಬರಹಗಾರನ ಪ್ರಾಮುಖ್ಯತೆಯನ್ನು ಈ ಕವನದಲ್ಲಿ ತಿಳಿಸಿದ್ದಾರೆ. ಇನ್ನೂ ಸಹ್ಯಾದ್ರಿ ಶೃಂಗದಲಿ, ಉಷೆ, ಅರುಣ ಗೀತೆ, ಪ್ರಾತಃಕಾಲ, ಬೈಗಿನಲಿ, ಶಾಂತಿ ಬರುವಳು ಮುಂತಾದ ಕವನಗಳು ಪ್ರಕೃತಿಗೆ ಸಂಬಂಧಿಸಿದ ಕವನಗಳಾಗಿವೆ. ಈ ಕವನಗಳು ನಿಸರ್ಗ ದೇವತೆಯ ವರ್ಣನೆಗಳಾಗಿವೆ. ಹಾಗೂ ಮಿಸ್ ಲೀಲಾವತಿ ಚಲನಚಿತ್ರದಲ್ಲಿರುವ ಸುಪ್ರಸಿದ್ಧ ಗೀತೆ ದೋಣಿ ಸಾಗಲಿ ಮುಂದೆ ಹೋಗಲಿ ಕವನವು 'ದೋಣಿ ಹಾಡು' ಹೆಸರಿನಲ್ಲಿ ಇದೇ ಕವನ ಸಂಗ್ರಹದಲ್ಲಿದೆ. ಇವಲ್ಲದೇ, ಕಾಜಾಣ, ತೇನೆಹಕ್ಕಿ, ಗೂಬೆ , ಇವು ಪಕ್ಷಿಗಳನ್ನುದ್ದೀಶಿ ಬರೆದ ಕವನಗಳಾಗಿದೆ. ಮರದ ನೆರಳು, ಸಬಕ್ತಗೀನ್, ಬಹುಮಾನ, ಶೂನ್ಯತೆಯೇನಿದು?, ವಿಮರ್ಶಕ, ಬಂಜೆಯ ಕನಸು, ದುಃಖಧ್ವನಿ, ಜಾಯಪಜಯಗಳು, ಕೇಶಿರಾಜ ಮೊದಲಾದವುಗಳು ವಿಶೇಷ ಆಲೋಚನೆಯೊಳಗೆ ಕಣ್ತೆರೆಸುವಂತಹ ಕವನಗಳಾಗಿದೆ. ಈ ಕವನಗಳೂ ಸಹ ನವಿಲು ಕವನ ಸಂಕಲನದಲ್ಲಿ ಅಡಕವಾಗಿದೆ. ಮತ್ತೊಂದು ಕವನವಾದ ' ಕೇಶಿರಾಜ' ವು ಹಲವು ವಿಶೇಷತೆಗೆ ಕಾರಣವಾಗಿದೆ. ಈ ಕವನವನ್ನು ವಿಶ್ಲೇಷಿಸುತ್ತಾ ಹೋದಂತೆ ವೈಯಾಕರಣಿ ' ಕೇಶಿರಾಜನು' ಕನ್ನಡಕ್ಕೆ ನೀಡಿದ ಕೊಡುಗೆ ಎಂತಹದ್ದು ಎಂಬುದು ಅರಿವಾಗುತ್ತದೆ. ಕುವೆಂಪು ರವರು 'ಕೇಶಿರಾಜ' ವಿರಚಿತ 'ಶಬ್ದಮಣಿದರ್ಪಣ'ವನ್ನು ಓದಿ ಮುಗಿಸಿ ಮಲಗಿದಾಗ ಬಿದ್ದಂತಹ ಕನಸನ್ನು 'ಕೇಶಿರಾಜ' ಕವನದಲ್ಲಿ ಚಿತ್ರಿಸಿದ್ದಾರೆ. ೪೨ ಕವನಗಳಲ್ಲಿ ನನಗೆ ಅತ್ಯಂತ ಇಷ್ಟವಾದದ್ದು ಇದೇ ಕವನ. ಹತ್ತಾರು ಬಾರಿ ಓದಿದರೂ ಮತ್ತೇ ಮತ್ತೇ ಓದುತ್ತಲೇ ಇರಬೇಕು ಎನಿಸುತ್ತಲೇ ಇದೆ. ಕೇಶಿರಾಜನ ಮುಂದೆ ಹೆದರಿ ನಿಂತ ಪ್ರಾಚೀನ ಕವಿಗಳು, ವ್ಯಾಕರಣಂಶಗಳು ಕುವೆಂಪು ರವರ ಕವಿತೆಯನ್ನು, ಹಿಂಬಾಲಿಸಿ ಬಂದು ಕಟ್ಟಿಹಾಕುವುದು, ಮತ್ತು ಕುವೆಂಪು ಕೇಶಿರಾಜ ನನ್ನು ನೋಡಿ ಹೆದರಿ ಓಡಿದಂತಹ ಸ್ವಪ್ನವು, ಕೇಶಿರಾಜನ ವ್ಯಾಕರಣಂಶದ ಶಕ್ತಿಯ ಕುರಿತು ತಿಳಿಸುತ್ತದೆ. ಕುವೆಂಪು ರವರು ಕೇಶಿರಾಜನನ್ನು ಸಾಮ್ರಾಟನೆಂದು ಕರೆದಿದ್ದಾರೆ. ಸೋತ ಜೀವವೊಂದು ಗೆಲುವಿಗಾಗಿ ಹಂಬಲಿಸುವ, ಅಪಜಯಗಳನ್ನೆಲ್ಲಾ ಜಯದ ಮುಂದೆ ಅರ್ಪಿಸಿ, ಜಯವನ್ನು ಕರುಣಿಸು ಎಂದು ವಿನಮ್ರವಾಗಿ ಬೇಡುತ್ತಿರುವ ಚಿತ್ರಣ ' 'ಜಯಾಪಜಯಗಳು' ಕವನದಲ್ಲಿ ಮೂಡಿಬಂದಿದೆ. ಈ ಕವನವು ನಮ್ಮದೇ ಕವನವೇನೊ ಎಂಬ ಭಾವನೆ ಮೂಡಿಸುತ್ತದೆ. ಇನ್ನು ವಾಸ್ತವ ಪರಿಸ್ಥಿತಿಗೆ ತೀರ ಹತ್ತಿರವಾದಂತಹ ಕವನವೆಂದರೆ, 'ಸಂಸ್ಕೃತ ಮಾತೆ'. ಸಂಸ್ಕೃತ ಭಾಷೆಯನ್ನು ಎಲ್ಲಾ ಭಾಷೆಗಳ ಮಾತೆ ಎಂದು ಹೇಳುತ್ತಾ ಕುವೆಂಪು ರವರು ಸಂಸ್ಕೃತವನ್ನು ಹಿಮಾಚಲಕ್ಕೆ ಹೋಲಿಸಿದ್ದಾರೆ. ಸಂಸ್ಕೃತವು ಅಳಿದು ಹೋದರೂ ತನ್ನ ಮಕ್ಕಳನ್ನು ( ಇತರ ಭಾಷೆಯನ್ನು) ಹಾರೈಸು ಎಂದು ಕೇಳಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಸ್ಥಳೀಯ ಭಾಷೆಗಳ ಲಕ್ಷಣವನ್ನು ಹಾಳು ಮಾಡುತ್ತಿರುವ ಪರಭಾಷೆಯ ದಾಳಿಗೆ ಒಳಗಾಗಿರುವ ವಿಚಾರವನ್ನು ಪ್ರಸ್ತುತಪಡಿಸಿ. ಸಂಸ್ಕೃತವು ನಮ್ಮ ಸಂಸ್ಕೃತಿಯ ಆರ್ಯೆ. ಪರಭಾಷೆಯ ಅನುಕರಣೆ ನಮಗೆ ಮಾತ್ರ ಇರಲಿ ನಿನಗೆ ಬೇಡ ಎನ್ನುವ ಬೇಸರದ ನುಡಿಗಳಿಂದ ಕವನ ಕೊನೆಗೊಳ್ಳುತ್ತದೆ. ಪರಭಾಷೆಯ ಅನುಕರಣೆಯ ಪ್ರಭಾವದಿಂದ ಸ್ಥಳೀಯ ಭಾಷೆಗಳ ಮೇಲಾದ ಅಪಘಾತವನ್ನು ಕಂಡ ಕುವೆಂಪು ರವರಿಗೆ ಉಂಟಾದ ಬೇಸರ, ನೋವು ಈ ಕವನದಲ್ಲಿ ಎದ್ದು ಕಾಣುತ್ತದೆ. ಈ ಕವನವನ್ನು ಓದಿ ಮುಗಿಸಿದ ಮೇಲೆ ಭಾಷೆ ಮೇಲೆ ಅಭಿಮಾನ ಇರುವವರ ಮನಸ್ಸು ಒಂದು ಕ್ಷಣ ಮೂಕವಾಗುತ್ತದೆ. ನವಿಲು ಕವನ ಸಂಕಲನದ ಪ್ರತೀ ಕವನವನ್ನು ವಿವರಿಸಿಕೊಳ್ಳುತ್ತಾ, ವಿಮರ್ಶಿಸಿಕೊಳ್ಳುತ್ತಾ ಹೋದರೆ, ಇದೊಂದು ಪುಟ್ಟ ಪುಟ್ಟ ಕವನಗಳನ್ನೊಳಗೊಂಡ ಪುಟ್ಟ ಪುಸ್ತಕ ಎನಿಸುವುದೇ ಇಲ್ಲ. ಇದೊಂದು ಶ್ರೇಷ್ಠ ಪುಸ್ತಕ, ಪ್ರತೀ ಕವನಗಳು ಶ್ರೇಷ್ಠತೆಯಿಂದ ಘನವಾಗಿದೆ ಎಂದು ಭಾಸವಾಗುತ್ತದೆ. ( ಕುವೆಂಪು ಕವನಗಳು, ಬರಿಯ ಕವನವಲ್ಲವೊ ಕವನವು ಬರಿಯ ಕೃತಿಯಲ್ಲವೊ , ಆ ಭ್ರಾಂತಿಯ ಮಾಣೊ ) ಕನ್ನಡ ನಾಡಿಗೆ ಹೊಸ ನವೀನ ಜೀವನದ ಅರುಣೋದಯವಾದ ಸಂಭ್ರಮವನ್ನು ಆಚರಿಸುತ್ತಿರುವಂತಹ ಕವನವಾದ 'ನವೀನ'ತೆಯಿಂದ ಕವನ ಸಂಕಲನವು ಮುಕ್ತಾಯಗೊಳ್ಳುತ್ತದೆ. ಕುವೆಂಪು ರವರ ಕವನ ಸಂಕಲನಗಳನ್ನು ಓದುತ್ತಾ ಹೋದಂತೆ, ಪುನಃ ಪುನಃ ಓದುತ್ತಲೇ ಸಮಯ ವ್ಯಯಿಸಬೇಕು ಎನಿಸುವುದು ಮಾತ್ರ ಸುಳ್ಳಲ್ಲ. 'ನವಿಲು' ಕೊಳ್ಳಲು ಹೆಚ್ಚಿನ ಹಣಬೇಡ, 'ನವಿಲು' ಇಡಲು ಹೆಚ್ಚಿನ ಜಾಗವೂ ಬೇಡ. ಓದಲೂ ಹೆಚ್ಚಿನ ಸಮಯವೂ ಬೇಡ. ಓದಿ ಅರ್ಥೈಸಿಕೊಳ್ಳಲು ಮನಸ್ಸು ಇದ್ದರೇ ಸಾಕು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಕವನ ಸಂಕಲನದಲ್ಲಿ ನನಗೆ ತುಂಬಾ ಇಷ್ಟವಾದದ್ದೆಂದರೆ, ಕೇಶಕರಾಜ . ಕವಿಗೆ ಕಂಡ ಆ ಕನಸಿನ ಅನುಭವ ಓದುಗ ಎಂದೂ ಮರೆಯನು. ನಾನು ಈ ಪುಸ್ತಕವನ್ನು ಕೊಂಡಾಗ, ಪುಸ್ತಕ ಸಂಗ್ರಹದಲ್ಲಿ ಇದೂ ಕೂಡ ಜೊತೆಯಿರುತ್ತದೆ ಎಂದುಕೊಂಡಿದ್ದೆ. ಯಾವಾಗ ನವಿಲನ್ನು ಓದಲು ಶುರುವಿಟ್ಟುಕೊಂಡನೊ, ಅಂದಿನಿಂದ ನನ್ನ ಅಚ್ಚು ಮೆಚ್ಚಿನ ಪುಸ್ತಕ ಇದಾಗಿ ಹೋಗಿದೆ. ಕವನ ಸಂಕಲನದಲ್ಲೇನು ಇರುತ್ತದೆ ವಿವರಿಸುವಂತಹದ್ದು ಎಂದರೆ ನನ್ನ ಉತ್ತರ ಇಷ್ಟೇ, ಹಲವು ವೈವಿಧ್ಯಮಯ ಶ್ರೇಷ್ಠ ವಿಚಾರಗಳನ್ನು ಒಳಗೊಂಡಿರುವ ಶ್ರೇಷ್ಠ ಪುಸ್ತಕ ನವಿಲು ಕವನ ಸಂಕಲ.‌ ಶ್ರೀ ಕುವೆಂಪು ರವರಿಗೆ ಪ್ರಣಾಮ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ನವಿಲು ಕವನ ಸಂಕಲನ ಪಕೃತಿಯೊಡನೆ ಸಂಪರ್ಕ ಹೊಂದಲು ಬಯಸುವವರಿಗೆ ಆಪ್ತವಾಗುತ್ತದೆ. ಒಂಟಿ ಎನಿಸುವಾಗಲೆಲ್ಲ ಸ್ನೇಹಿತನಂತೆ ಜೊತೆಯಾಗಿ, ಮನಸ್ಸನ್ನು ಹಗುರ ಮಾಡುತ್ತದೆ. ನನ್ನ ಪ್ರಕಾರ ಈ ಕವನ ಸಂಕಲನವು ಪ್ರಕೃತಿಯನ್ನು ಇಷ್ಟ ಪಡುವವರಿಗೆ ಹೆಚ್ಚು ಇಷ್ಟವಾಗುತ್ತದೆ. ಹಾಗೂ ಎಲ್ಲರಿಗೂ ಇಷ್ಟವಾಗುವಂತಹ ಪುಸ್ತಕವೇ ಆಗಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

37
Votes
231
Views
8 Months
Since posted

Voting Closed!

Scroll to Top