ಪುಸ್ತಕದ ಶೀರ್ಷಿಕೆ: ಪ್ರಾಜೆಕ್ಟ ಸರ್ಕೊಮಾ
ಪುಸ್ತಕದ ಲೇಖಕರು: ಹೆಚ್.ಶ್ರೀಧರ ರಾವ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿನಯಾ ಅಡಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಈ ಪುಸ್ತಕವು ೫ ಭಾಗಗಳಲ್ಲಿ ವಿವರಿಸಿರುವ ಅನುಭವ ಕಥನ. ಪ್ರಾಜೆಕ್ಟ ಸರ್ಕೋಮಾ ಭಾಗ -೧ ಹಾಗೂ ೨, ಕ್ಯಾನ್ಸರ್ ಬಗೆಗೆ ಜಾಗೃತಿ ಮತ್ತು ಮುಂಜಾಗ್ರತೆ, ಹಿರಿಯರ ಪ್ರವಾಸ ಲೇ-ಲಡಾಕ್ ಹಾಗೂ ಮೊಮ್ಮಗಳ ಪೆಥಾಲಿ. ಪ್ರಾಜೆಕ್ಟ ಸರ್ಕೋಮಾ ಹೆಸರು ಯಾವುದೋ ಪ್ರಾಜೆಕ್ಟ ಎಂದು ಓದಲು ಕೈಗೆತ್ತಿಕೊಂಡರೆ ಮುನ್ನುಡಿಯಲ್ಲಿಯೇ ಇದು ಕ್ಯಾನ್ಸರ್ ಕುರಿತು ಲೇಖಕರಾದ ಹೆಚ್.ಶ್ರೀಧರ ರಾವ್ ಅವರ ಅನುಭವ ಕಥನ ಎಂದು ಸ್ಪಷ್ಟವಾಗುತ್ತದೆ. ಆದರೆ ಪ್ರಾಜೆಕ್ಟ ಸರ್ಕೋಮಾ ಲೇಖಕರಿಟ್ಟ ಕೇವಲ ಪುಸ್ತಕದ ಹೆಸರಲ್ಲ. ಸರ್ಕೋಮಾ ಕ್ಯಾನ್ಸರ್ ಕಾಯಿಲೆಯ ಒಂದು ವಿಧ ಎನ್ನುವುದು ಓದಿದ ನಂತರವೇ ಅರ್ಥವಾಗಲಿದೆ. ಮುಖ್ಯವಾಗಿ ಈ ಪುಸ್ತಕ ಈಗ ಅತಿಯಾಗಿ ಜನರನ್ನು ಕಾಡುತ್ತಿರುವ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಮುಂಜಾಗ್ರತೆ ವಹಿಸಲು, ಧೈರ್ಯ ಹೊಂದಲು, ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆಯಲು, ತನ್ಮೂಲಕ ಗುಣ ಪಡಿಸಿಕೊಳ್ಳಲು ಸಾಧ್ಯ ಎನ್ನುವ ವಿಷಯವನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಈ ಪುಸ್ತಕದ ಮುನ್ನುಡಿ ಬರೆದಿರುವ ಕಾದಂಬರಿಕಾರ, ಅಂಕಣಕಾರ ಶಶಿಧರ ಹಾಲಾಡಿ, ಮೊದಲ ಭಾಗವು ನಿಜಕ್ಕೂ ಕುತೂಹಲಕಾರಿ, ಲೇಖಕರು ಎದುರಿಸಿದ ಆರೋಗ್ಯ ಸಂಬಂಧಿ ದೊಡ್ಡ ಸವಾಲನ್ನು ಸಮಸ್ಯೆಯನ್ನು ಹೇಗೆ ಧೈರ್ಯದಿಂದ ನಿಭಾಯಿಸಿದರು ಎಂಬುದರ ವಿವರವೇ ಈ ಮೊದಲ ಭಾಗದ ತಿರುಳು. ಇದು ನಿಜಕ್ಕೂ ಒಂದು ಸಾಹಸ ಕಥನ: ಜತೆಯಲ್ಲೇ ಒಂದು ಎಜುಕೇಟಿವ್ ಕಥನವೂ ಹೌದು. ಇದನ್ನೋದಿದ ಓದುಗರು ಸಹ, ತಮ್ಮ ವೈಯಕ್ತಿಕ ಬದುಕಿನಲ್ಲಿ ಆಕಸ್ಮಿಕವಾಗಿ ಎದುರಿಸಬಹುದಾದ ಕಷ್ಟಗಳನ್ನು, ಸಂಕಟಗಳನ್ನು ಹೇಗೆ ವ್ಯವಸ್ಥಿತವಾಗಿ, ಧೈರ್ಯದಿಂದ ಎದುರಿಸಬಹುದು ಎಂಬುದಕ್ಕೆ ಪ್ರಾಯೋಗಿಕ ಉದಾಹರಣೆ ಇಲ್ಲಿದೆ. ಕಷ್ಟ ಬಂದಕೂಡಲೇ ಕಂಗಾಲಾಗುವುದಲ್ಲ, ಬದಲಿಗೆ ಸೂಕ್ತ ಯೋಜನೆಯ ಮೂಲಕ, ಬಂಧು ಬಳಗದ ಸಹಕಾರದ ಮೂಲಕ, ಸ್ನೇಹಿತರ ಸಲಹೆಯ ಮೂಲಕ ವ್ಯವಸ್ಥಿತವಾಗಿ ಸಂಕಷ್ಟವನ್ನು ಎದುರಿಸಿ, ಜಯಶಾಲಿಯಾಗಿ ಬರುವುದು ಹೇಗೆ ಎಂಬುದರ ಯಶಸ್ವಿ ಪ್ರಯತ್ನದ ವಿವರಗಳು ಈ ಭಾಗದಲ್ಲಿದೆ. ಲೇಖಕರು ಎದುರಿಸಬೇಕಾಗಿ ಬಂದ ಆ ಒಂದು ಆರೋಗ್ಯ ಸಮಸ್ಯೆಯ ವಿವರಗಳನ್ನು ನಾನಿಲ್ಲಿ ಹೇಳಲು ಹೋಗುವುದಿಲ್ಲ, ಅವುಗಳನ್ನು ಓದುಗರೇ ಓದಿ ಮನನ ಮಾಡಿಕೊಳ್ಳಬಹುದು. ತಿಳಿಯಬೇಕಾದ ವಿಚಾರವೆಂದರೆ, ಲೇಖಕರು ಹೇಗೆ ವ್ಯವಸ್ಥಿತವಾಗಿ, ಧೈರ್ಯವಾಗಿ, ಕುಟುಂಬದವರು ಹೆಚ್ಚು ಗಾಬರಿಗೆ ಒಳಗಾಗದಂತೆ, ಜಾಣೆಯಿಂದ ತಮ್ಮ ಹೋರಾಟವನ್ನು ಜಾರಿಯಲ್ಲಿಟ್ಟು, ಯಶಗಳಿಸಿದರು ಎಂಬುದೇ ಬಹಳ ವಿಶೇಷ ಎನಿಸಿದೆ. ಆ ಸಾಹಸದ, ಹೋರಾಟದ ಬದುಕನ್ನು ಓದುವ ಮೂಲಕ, ಓದುಗರು ತಮ್ಮ ದಿನಚರಿಯಲ್ಲಿ ಹೆಚ್ಚು ಸ್ಫೂರ್ತಿ ತುಂಬಿಕೊಳ್ಳುಲು ಸಾಧ್ಯ ಎಂಬುದು ಒಟ್ಟು ತಾತ್ಪರ್ಯ. ತಮ್ಮ ಬದುಕಿನ ಅನುಭವಗಳನ್ನು ದಿಟ್ಟವಾಗಿ, ವಿವರವಾಗಿ ಇಲ್ಲಿ ದಾಖಲಿಸುವ ಮೂಲಕ ಶ್ರೀಧರ ರಾವ್ ಅವರು ತಮ್ಮ ಒಳತೋಟಿಗಳನ್ನು ತೋಡಿಕೊಳ್ಳುವುದರ ಜತೆ, ಸಮಸ್ಯೆಗಳನ್ನು ಎದಿರಿಸಬೇಕಾಗುವ ಸಂದರ್ಭದಲ್ಲಿ ಇತರರಿಗೂ ಯಶಸ್ಸಿನ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ ಎನ್ನಬಹುದು, ಎಂದು ಕೃತಿಯ ಮಹತ್ವ ತಿಳಿಸಿದ್ದಾರೆ. ಇನ್ನು ವೈದ್ಯರಾಗಿರುವ ಹಾಗೂ ಲೇಖಕರ ಗೆಳೆಯರಾಗಿರುವ ಡಾ.ಅಶೋಕ ಎಸ್.ನಾಯಕ, ಅತ್ಮೀಯ ಗೆಳೆಯ ಶ್ರೀಧರ್ ಅವರು ಜೀವನದ ಎರಡು ಪ್ರಯಾಣಗಳನ್ನು ಈ ಪುಸ್ತಕದಲ್ಲಿ ಸವಿವರವಾಗಿ ನಿರೂಪಿಸಿದ್ದಾರೆ. ಎರಡು ಪ್ರಯಾಣಗಳಲ್ಲೂ ನಾನು ಅವರೊಂದಿಗೆ ಪ್ರಯಾಣಿಸಿದ್ದೇನೆ. ಒಂದು ಪ್ರಯಾಣದಲ್ಲಿ ವೈದ್ಯನಾಗಿ, ಮತ್ತೊಂದು ಪ್ರಯಾಣದಲ್ಲಿ ಸ್ನೇಹಿತನಾಗಿ ಹಾಗು ಸಹ ಪ್ರಯಾಣಿಕನಾಗಿ, ತನ್ನ ಸ್ವಂತ ಸಾಮರ್ಥ್ಯದಿಂದ ಬ್ಯಾಂಕ್‌ನ ಉನ್ನತ ಹುದ್ದೆಗೇರಿ, ಹಲವು ಜವಾಬ್ದಾರಿಗಳನ್ನು ದಕ್ಷತೆಯಿಂದ ನಿರ್ವಹಿಸಿ, ನಿವೃತ್ತಿ ಜೀವನದಲ್ಲಿಯೂ ಬಹಳಷ್ಟು ಸಕ್ರಿಯರಾಗಿದ್ದ ಶ್ರೀಧರ್ ಅವರಿಗೆ ಚಾಲೆಂಜ್ ಆಗಿ ಬಂದಿತ್ತು ಈ ಸರ್ಕೋಮಾ!!!!. ತಮಗೆ ಏನೋ ಒಂದು ವೈದ್ಯನಾದ ನಾನು ಬಹಳಷ್ಟು ಜನರು, ಗಂಭೀರವಾದ ಆರೋಗ್ಯ ಸಮಸ್ಯೆ ಇದೆ ಎಂದು ತಿಳಿದಾಗ ಯಾವ ತರಹ ಎದೆಗುಂದುತ್ತಾರೆ ಮತ್ತು ಖಿನ್ನತೆಗೆ ಜಾರುತ್ತಾರೆ ಎಂದು ನೋಡಿದ್ದೇನೆ. ಆದರೆ ಶ್ರೀಧರ್ ರಾವ್ ಅವರು ಜೀವನದಲ್ಲಿ ಎಲ್ಲವನ್ನೂ ಧೈರ್ಯದಿಂದ ಎದುರಿಸುವ ಧಾಷ್ಟ್ರ‍್ರತೆ ಹೊಂದಿದವರಾದ್ದರಿಂದ, ಅವರ ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಈ ಗಂಭೀರವಾದ ಆರೋಗ್ಯ ಸಮಸ್ಯೆಗೆ ಎದೆಗುಂದದೆ, ಅವರ ಈ ಹೊಸ ಸಮಸ್ಯೆಯನ್ನು ಒಂದು ಪ್ರಾಜೆಕ್ಟ್ ಎಂಬಂತೆ ಸ್ವೀಕರಿಸಿ, ಅದನ್ನು ಹೇಗೆ ನಿಭಾಯಿಸಿಕೊಳ್ಳಬೇಕೆಂಬುದನ್ನು ಸವಿವರವಾಗಿ ವೈದ್ಯಕೀಯ ನೆಲೆಯಲ್ಲಿ ತಿಳಿಯಪಡಿಸಿದ್ದಾರೆ. ಸವಾಲಾಗಿ ತಮಗಾದ ಈ ಸರ್ಕೋಮಾವನ್ನು ತಪಾಸಣೆ ಮಾಡಿದಾಗಿನಿಂದ ಆರಂಭಿಸಿ, ಶುಶ್ರೂಷೆ ಮುಗಿಸಿ ಗುಣಮುಖರಾಗುವವರೆಗಿನ ಅವರ ದೀರ್ಘ ಅನುಭವವನ್ನು, ಆ ಅವಧಿಯಲ್ಲಿ ಅವರ ಅಂತರಾಳದ ತುಮುಲ ಮತ್ತು ಅವರ ಆತ್ಮೀಯರಿಂದ ಅವರಿಗೆ ದೊರೆತ ಸಾಂತ್ವನ, ಮತ್ತು ಇತರ ಅನುಭವಗಳನ್ನೂ, ಅಲ್ಲಲ್ಲಿ ಲಘು ಹಾಸ್ಯವನ್ನು ಸೇರಿಸಿ ಸರಳ ಸುಂದರವಾಗಿ ವರ್ಣಿಸಿದ್ದಾರೆ. ಮಿಗಿಲಾಗಿ ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ವೈಯಕ್ತಿಕವಾಗಿ, ಕುಟುಂಬದೊಡನೆ ಹಾಗೂ ಸಮಾಜದಲ್ಲಿ ಹೇಗೆ ನೋಡಬೇಕೆಂಬ ಪ್ರಜ್ಞೆಯನ್ನು ವಿಷದೀಕರಿಸಿ, ಅದಕ್ಕೊಂದು ವೈದ್ಯಕೀಯ, ಸಾಮಾಜಿಕ ಹಾಗೂ ಭಾವನಾತ್ಮಕ ಸ್ಪರ್ಶವನ್ನು ನೀಡಿದ್ದಾರೆ. ಈ ಸರ್ಕೋಮಾದ ವಿಷಯದಲ್ಲಿ, ಬಹಳಷ್ಟು ಮಾಹಿತಿಯನ್ನು ಸಂಗ್ರಹಿಸಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ. ವಿವಿಧ ಕ್ಯಾನ್ಸರ್‌ನಿಂದು ಬಳಲುತ್ತಿರುವ ಅನೇಕರಿಗೆ ಈ ಪುಸ್ತಕವು ಒಂದು ದಾರಿದೀಪ ಮತ್ತು ಅಶಾ ದೀಪವಾಗಿದೆ. ಮನೋ ಧೈರ್ಯ ಮತ್ತು ಸಮಯೋಜಿತ ಚಿಕಿತ್ಸೆ, ಹಿತ ಮಿತ ಆಹಾರ, ಯೋಗ, ಧ್ಯಾನ ಇವುಗಳಿಂದ ನಾವು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಈ ಪುಸ್ತಕದ ಮೂಲಕ ಸಮಾಜಕ್ಕೆ ತಿಳಿಸಿದ್ದಾರೆ, ಎಂದು ಪುಸ್ತಕದ ಉಪಯೋಗ ಸಾಮಾನ್ಯ ಜನರಿಗೂ ಆಗುವ ಕುರಿತು ಹೇಳಿದ್ದಾರೆ. ಪುಸ್ತಕವು ಲೇಖಕರ ಅನುಭವವೇ ಆಗಿರುವುದರಿಂದ ಅವರ ಕುಟುಂಬ ಹಾಗೂ ಸ್ನೇಹಿತರ ವಲಯ, ಒಡನಾಟದ ವ್ಯಕ್ತಿ ಚಿತ್ರಣ, ವ್ಯಕ್ತಿತ್ವ ಚಿತ್ರಣಗಳು ಸೊಗಸಾಗಿ ಮೂಡಿಬಂದಿದೆ. ಈ ಸರ್ಕೋಮಾ ಕ್ಯಾನ್ಸರ್ ಎಂದಾಗ ಕುಟುಂಬ ಎದುರಿಸಿದ ಆತಂಕ, ಸ್ನೇಹಿತರ ಸಹಕಾರ, ಚಿಕಿತ್ಸೆಯ ವಿಧ, ಹಂತಗಳು, ಅಗತ್ಯಗಳು, ತೊಡಕುಗಳು, ಎಲ್ಲವನ್ನೂ ವಿವರಿಸಿ, ಎದುರಿಸಿದ ಬಗೆಯನ್ನೂ ಹೇಳಿದ್ದು ಸಹಜವಾಗಿ ಸಾಮಾನ್ಯ ಜನರ ತಲ್ಲಣಗಳಿಗೆ ಸಮಾಧಾನವಾಗಲಿದೆ. ಸರ್ಕೋಮಾದಿಂದ ಗುಣಮುಖರಾಗುವುದರ ಜೊತೆಗೆ ಮುಂದಿನ ತಮ್ಮ ಜೀವನ, ಕುಟುಂಬದ ಬಗೆಗೆ ವಿವರಿಸಿದ್ದಾರೆ. ಹಿರಿಯರ ಪ್ರವಾಸ ಲೇ-ಲಡಾಕ್ ನಲ್ಲಿ ತಮ್ಮ ಸ್ನೇಹಿತರ ಗುಂಪಿನ ಪ್ರವಾಸದ ಅನುಭವ, ಅಲ್ಲಿನ ತಾಣಗಳ ಪರಿಚಯ, ಅಗತ್ಯದ ಮುನ್ನೆಚ್ಚರಿಕೆ ಬಗೆಗೆ ಉತ್ತಮ ಮಾಹಿತಿ ನೀಡಿದ್ದಾರೆ. ನಂತರದ ಮೊಮ್ಮಗಳ ಪೆಥಾಲಿ ಭಾಗದಲ್ಲಿ ಮಗು ಮತ್ತು ಬೆಕ್ಕಿನ ಭಾವನಾತ್ಮಕ ಸಂಬಂಧ ಹಾಗೂ ಪ್ರಾಣಿ ಪ್ರಪಂಚದ ಜೀವನ ಶೈಲಿಯ ಪರಿಚಯ ಇದೇ ಕೃತಿಯ ಭಾಗಗಳಲ್ಲಿ ವಿವರಿಸಿದ್ದಾರೆ. ಇಂದಿನ ದಿನಗಳ ಕ್ಯಾನ್ಸರ್ ಮಾರಿಯ ಅಬ್ಬರಕ್ಕೆ ಜನ ಸಾಮಾನ್ಯರಿಗೆ ಉತ್ತಮ ಮಾಹಿತಿ ಒದಗಿಸಬಲ್ಲ ಪುಸ್ತಕ ಇದೆಂದರೆ ಅತಿಶಯೋಕ್ತಿಯಲ್ಲ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಕ್ಯಾನ್ಸರ್ ರೋಗಿಗಳಿಗೆ ಅವರ ಕುಟುಂಬಿಕರಿಗೆ ಉತ್ತಮ ಮಾಹಿತಿ ಹಾಗೂ ಧೈರ್ಯ ತುಂಬ ಬಲ್ಲ ಪುಸ್ತಕ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.