ಪುಸ್ತಕದ ಶೀರ್ಷಿಕೆ: ಕೆನ್ನಾಯಿಯ ಜಾಡಿನಲ್ಲಿ
ಪುಸ್ತಕದ ಲೇಖಕರು: ಕೃಪಾಕರ ಮತ್ತು ಸೇನಾನಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಗಿರೀಶ್ ಮೇವುಂಡಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಕೆನ್ನಾಯಿ ಎಂದರೆ ಇದೊಂದು ತೋಳವನ್ನು ಹೋಲುವ ನಾಯಿಗಳ ಜಾತಿಗೆ ಸೇರಿದ ಕಾಡಿನ ಪ್ರಾಣಿ.ಆದರೆ ಈ ಪ್ರಾಣಿಯ ಬಗ್ಗೆ ಅನೇಕರಿಗೆ ಪರಿಚಯವಿರುವುದಿಲ್ಲ.ಕಾರಣ ಇದೊಂದು ಗುಪ್ತನಡೆಯ ಪ್ರಾಣಿಯಾಗಿದ್ದು ಮನುಷ್ಯರ ಹಾಗೂ ಕಾಡಿನಲ್ಲಿರುವ ಇನ್ನಿತರೆ ಪ್ರಾಣಿಗಳ ಸಂಪರ್ಕವನ್ನೊಪ್ಪದೇ ಕೇವಲ ತನ್ನದೇಯಾದ ಗುಂಪಿನೊಂದಿಗೆ ನಿಗೂಢವಾಗಿ ಬದುಕುವ ಪ್ರಾಣಿಯಾಗಿದೆ.ಹೀಗೆ ಮಾನವ ಲೋಕದಿಂದ ದೂರವಿರುವ ಈ ನಿಗೂಢ ಪ್ರಾಣಿಯು ಮಾನವ ಲೋಕಕ್ಕೆ ನಿಗೂಢವಾಗಿ ಕಂಡರೂ ಅದರ ಅಂತರಂಗದ ಸ್ವಾಭಿಮಾನ,ಬೇಟೆಯ ಶೈಲಿ,ತನ್ನ ಕುಟುಂಬ ಪ್ರೇಮ ಹಾಗೂ ನಾಯಕತ್ವ ಗುಣಗಳ ಕುರಿತು ನವಿರಾಗಿ ನಿರೂಪಿಸಿದ ಕೃತಿಯೇ 'ಕೆನ್ನಾಯಿಯ ಜಾಡಿನಲ್ಲಿ'. ಕೃಪಾಕರ ಮತ್ತು ಸೇನಾನಿ ಇವರು ಮೂಲತ: ವನ್ಯಜೀವಿ ಛಾಯಾಗ್ರಾಹಕರಾಗಿದ್ದು ಬಂಡೀಪುರ ಮತ್ತು ನಾಗರಹೊಳೆ ಕಾಡುಗಳಲ್ಲಿ ಈ ಕೆನ್ನಾಯಿಗಳ ಕುರಿತು ಸಂಶೋಧನೆಮಾಡಿ ತಮ್ಮ ಸುಂದರವಾದ ಅನುಭವಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರಮುಖ ಅಂಶಗಳು: ಈ ಕೃತಿಯಲ್ಲಿ ಧಟ್ಟ ಕಾಡಿನ ವಿವರಣೆ ಇದೆ,ಹಾಗೆಯೇ ಬಯಲು ಸೀಮೆಯ ಭೌಗೋಳಿಕತೆಯ ಸುಳಿವು ಇದೆ.ಬರೀ ಕೆನ್ನಾಯಿಯಲ್ಲದೆ ಇಲ್ಲಿ ಇತರೆ ಸಾಮಾನ್ಯ ವನ್ಯಮೃಗಗಳಾದ ಹುಲಿ,ಚಿರತೆ,ತೋಳ,ಆನೆಗಳ ಜೀವನ ಹಾಗೂ ಕಾಡಿನೊಂದಿಗಿನ ಅವುಗಳ ಒಡನಾಟದ ಸುಳಿವುಗಳಿವೆ.ಅಷ್ಟೇಯಲ್ಲದೆ ಕಾಡುಕುರುಬರಂತಹ ಕಾಡುಜನರ ಬದುಕಿನ ಚಿತ್ರಗಳನ್ನೂ ಇಲ್ಲಿ ನವಿರಾಗಿ ನಿರೂಪಿಸಲಾಗಿದೆ.ಒಂದು ಕ್ಷಣ ಸಾಮಾನ್ಯ ಓದುಗರಿಗಂತೂ ಇದೇನು ಪೂರ್ಣಚಂದ್ರ ತೇಜಸ್ವಿಯವರ ಕೃತಿಯೇ? ಎಂಬ ಸಂಶಯಮೂಡುತ್ತದೆ.ಆದರೆ ಇದು ಯಾವುದೋ ಪ್ರಾಣಿ ಶಾಸ್ತ್ರದ ಅಥವಾ ವನ್ಯಶಾಸ್ತ್ರದ ಪುಸ್ತಕದಂತಿದೆಯೋ ಎಂಬ ಪ್ರಶ್ನೆಗೆ ಉತ್ತರ ಇಲ್ಲಾ! ಇದೊಂದು ವನ್ಯ ಜಗತ್ತಿನ ಸ್ವಾರಸ್ಯಗಳನ್ನು ಸಾಹಿತ್ಯದೊಂದಿಗೆ ಹದವಾಗಿ ಮಿಶ್ರಣಮಾಡಿ ರಸಗವಳ ರಚಿಸಿದಂತಿದೆ.ಏಕೆಂದರೆ ಇದನ್ನು ಓದುವಾಗ ಇಲ್ಲಿ ಕಾಡಿನ ಸಂಪೂರ್ಣ ಪರಿಚಯವಾಗುತ್ತಾ ಅದು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿರುವ ನೂರಾರು ರಹಸ್ಯಗಳನ್ನು ಈ ಕೃತಿಯು ಬಿಚ್ಚಿಡುತ್ತಾ ಸಾಗುತ್ತದೆ. 1.ವಿಭಿನ್ನ ವಿಷಯ ವಸ್ತು: ನಾವೆಲ್ಲರೂ ಕಾಡಿನ ಅನೇಕ ಪ್ರಾಣಿಗಳ ಕುರಿತಾಗಿ ಕೇಳಿದ್ದೇವೆ,ಓದಿದ್ದೇವೆ ಹಾಗೂ ನೋಡಿದ್ದೇವೆ.ಆದರೆ ಈ ʼಕೆನ್ನಾಯಿʼ ಎಂಬ ಪದವನ್ನು ಬಹುತೇಕರು ಮೊದಲಬಾರಿಗೆ ಕೇಳಿದ್ದಾರೆ.ತೀರಾ ನಾಚಿಕೆಯ ಅಥವಾ ಸಂಕೋಚದ ಸ್ವಭಾವದ ಹಾಗೂ ಯಾರೊಂದಿಗೂ ಹೆಚ್ಚಾಗಿ ಬೆರೆಯದೆ ಕಾಡಿನಲ್ಲಿ ನಿಗೂಢವಾಗಿರುವ ಈ ಪ್ರಾಣಿಯ ಕುರಿತಾಗಿ ಸಾಮಾನ್ಯ ಕೃತಿಕಾರರಿಗೆ ಬರೆಯಲಂತೂ ಇದು ಸಾಧ್ಯವಿರದ ಸಂಗತಿಯಾಗಿದ್ದು ಇಲ್ಲಿ ಲೇಖಕರು ಮೂಲತ: ಕಾಡು ಪ್ರೇಮಿಗಳು ಹಾಗೂ ವನ್ಯ ಜೀವಿ ಛಾಯಾಚಿತ್ರಗ್ರಾಹಕರಾಗಿರುವುದರಿಂದಲೇ ಅವರು ಈ ಒಂದು ವಿಶಿಷ್ಟವಾದ ವನ್ಯ ಜೀವಿಯಾದ ಕೆನ್ನಾಯಿಯ ಜಾಡುಹಿಡಿದು ಸಂಶೋಧನೆ ನೆಡಿಸಿ ಅದನ್ನು ಸ್ವತ: ತಾವು ಅರಿಯಲು ಸಾಹಸಪಡುತ್ತಾ ವನ್ಯ ಲೋಕದ ಜಗತ್ತನ್ನು ತಮ್ಮ ಸುಂದರ ಅನುಭವಗಳನ್ನು ಓದುಗರಿಗೂ ಕೂಡಾ ಉಣಬಡಿಸಲು ಪ್ರಯತ್ನಿಸಿದ್ದಾರೆ. 2.ನಿರೂಪಣಾ ಶೈಲಿ: ಲೇಖಕರು ಇಲ್ಲಿ ಕಾಡು,ವನ್ಯಜೀವಿಗಳಾದ ನವಿಲು,ಹುಲಿ,ಕತ್ತೆ,ಆನೆ ಹಾಗೂ ಅಂತಿಮವಾಗಿ ಕಥಾ ವಿಷಯ ವಸ್ತುವಾಗಿರುವ ಅದ್ಭುತ ವನ್ಯ ಜೀವಿಯಾದ ಕೆನ್ನಾಯಿಯ ಕುರಿತು,ಮುಂದುವರೆದು ಕಾಡಿನಲ್ಲಿ ವಾಸವಾಗಿರುವ ಕಾಡು ಕುರುಬರಾದ ಬೊಮ್ಮ,ಮಾರ ಮುಂತಾದವರ ಮುಗ್ಧತೆ ಹಾಗೂ ಕಾಡಿನ ಕುರಿತು ಅವರಿಗಿರುವ ಕಾಳಜಿ ಹಾಗೂ ಪರಿಸರ ಪ್ರಜ್ಞೆಯನ್ನು ಜೊತೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಒಡನಾಟಗಳನ್ನು ಕೇವಲ ವನ್ಯಭಾಷಿಕವಾಗಿ ನಿರೂಪಿಸದೇ ತಿಳಿ ಹಾಸ್ಯದ ಶೈಲಿಯಲ್ಲೂ ತಿಳಿಸುತ್ತಾ ಹೊಸ ಸಾಹಿತ್ಯಿಕ ಶೈಲಿಯ ಮೇಲ್ಪಂಕ್ತಿಯನ್ನು ಹಾಕಿದ್ದಾರೆ.ಈ ಶೈಲಿಯು ಓದುಗರು ಪುಸ್ತಕವನ್ನು ಕೆಳಗಿಡಲು ಬಿಡದೆ ಶಬ್ಧಗಳ ಮೂಲಕ ಅವರಿದ್ದಲ್ಲಿಂದ ನೇರವಾಗಿ ಕಾಡಿಗೇ ಕೊಂಡುಯ್ದುಬಿಡುತ್ತದೆ. 3.ಪಾತ್ರಗಳು: ಮೂಲತ: ಈ ಕೃತಿಯಲ್ಲಿ ಇತರೆ ಕೃತಿಗಳಂತೆ ಕೃತಕ ಪಾತ್ರಗಳೇನೂ ಇಲ್ಲಾ.ಆದರೆ ಇಲ್ಲಿ ಪ್ರಸ್ತಾಪಿಸಿರುವ ಸಂಗತಿಗಳನ್ನಾಧಾರಿಸಿ ಇವುಗಳನ್ನೇ ಪಾತ್ರಗಳೆಂದೊಕೊಂಡರೆ, ಮೊದಲು ʼನವಿಲಿನʼ ಪರಿಚಯವಾಗುತ್ತದೆ. ತನ್ನ ಮೊಟ್ಟೆಯ ಸಲುವಾಗಿ ಮಾನವನ ಸಂಪರ್ಕವನ್ನು ಬಯಸಿಬರುವ ಸನ್ನಿವೇಶ ಓದುಗನಲ್ಲಿ ಹೊಸ ಅನುಭವವನ್ನು ಮೂಡಿಸುತ್ತದೆ.ಇದಾದ ನಂತರ ಕಾಡು ವಾಸಿಗಳಾದ ʼಬೊಮ್ಮʼ ಮತ್ತು ʼಮಾರʼ ಇವರ ಒಡನಾಟ ಇವರಿಗಿದ್ದ ಅಸಾಧಾರಣವಾದ ಕಾಡಿನ ಜ್ಞಾನವು ಓದುಗರಿಗೆ ಬೆರಗು ಹುಟ್ಟಿಸುತ್ತದೆ.ಅಪರೂಪಕ್ಕೆ ಬಂದ ʼಹುಲಿರಾಯನʼ ಅಪರೋಕ್ಷ ಆಗಮನವು ಕಾಡಿನ ವಿಭಿನ್ನ ಜಾಡಿನ ಪರಿಚಯಮಾಡಿಕೊಡುತ್ತದೆ.ಇನ್ನು ʼಒಂಟಿ ಸಲಗನʼ ದರ್ಪ ಹಾಗೂ ಆನೆಗಳ ಮದುಮಲೈನ ಆಶ್ರಯ ಕೇಂದ್ರವು ಎಂಥಹ ದೊಡ್ಡದಾದ ಪ್ರಾಣಿಯಾದರೂ ಅವನ್ನು ಪಳಗಿಸಿದರೆ ಅವು ಮನುಷ್ಯನ ಗುಲಾಮರೆಂಬ ಹುಸಿ ಅಹಂಕಾರವನ್ನು ಮೂಡಿಸುತ್ತವೆ.ಆಗಾಗ್ಗೆ ಬರುವ ಅರಣ್ಯ ಇಲಾಖೆಯ ಸಿಬ್ಬಂದಿಯ ಒಡನಾಟಗಳು ಇಲಾಖೆಯ ಒಳ ಸುಳಿಗಳನ್ನು ಸೂಚ್ಯವಾಗಿ ವಿವರಿಸುತ್ತವೆ.ಅಂತಿಮವಾಗಿ ಕಥಾನಾಯಕನಂತಿರುವ ʼಕೆನ್ನಾಯಿಯʼ ಹುಟ್ಟಿನಿಂದ ಹಿಡಿದು ಅದರ ಬೆಳವಣಿಗೆ,ಸಂತಾನ,ಕುಟುಂಬದ ಪಾಲನೆ-ಪೋಷಣೆ,ಬೇಟೆಯಾಡುವ ವಿಶಿಷ್ಟ ತಂತ್ರಗಾರಿಕೆಗಳು,ಗುಂಪಿನೊಡನಿರುವ ಒಡನಾಟ ಹಾಗೂ ನಾಯಕತ್ವದ ಸಂಗತಿಗಳು ಈ ಒಂದು ನಿಗೂಢ ವನ್ಯ ಜೀವಿಯ ಬದುಕನ್ನು ಓದುಗನ ದೃಶ್ಯಪಟಲದಲ್ಲಿ ಬೆತ್ತಲುಮಾಡುತ್ತಾ ಮನಸ್ಸಿಗೆ ಮುದ ನೀಡುತ್ತಾ ಆ ಪಾತ್ರಗಳೊಂದಿಗೆ ಓದುಗರೂ ಕೂಡಾ ಸಂದರ್ಭಾನುಸಾರ ಕಾಡಿನ ನಿಗೂಢ ಲೋಕದೊಳಗೆ ಕುತೂಹಲದೊಂದಿಗೆ ಸಾಗುವಂತೆ ಮಾಡುತ್ತವೆ. ಸಾರಾಂಶ: ಇದೊಂದು ಸಾಮಾನ್ಯ ಸಾಹಿತ್ಯಿಕ ಕೃತಿಯಾಗಿರದೇ ಕಾಂಕ್ರೀಟು ಕಾಡಿನ ಬದುಕಿನಲ್ಲಿ ಬಸವಳಿದಿರುವ ನಮ್ಮನ್ನೆಲ್ಲಾ ನಿಜವಾದ ವನ್ಯ ಲೋಕಕ್ಕೆ ಕರೆದೊಯ್ಯುವ ಅಪರೂಪದ ಪರಿಸರ ಸಾಹಿತ್ಯದ ಮೇಲ್ಪಂಕ್ತಿಯ ಕೃತಿ ಇದಾಗಿದೆ.ಇಂದು ಕಾಡು ಪ್ರಾಣಿಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿ ನಿಬ್ಬರೆಗಾಗಿ ನೋಡುವ ಆಧುನಿಕ ಜನಾಂಗಕ್ಕೆ ವನ್ಯಲೋಕದ ರಹಸ್ಯ-ಸ್ವಾರಸ್ಯಗಳನ್ನು ಸವಿಯಲು ಈ ಕೃತಿ ನೆರವಾಗುತ್ತದೆ. ಕಾಡೆಂದರೆ ಬರೀ ಕಣ್ಣಿಗೆ ತಂಪುನೀಡುವ ಹಸಿರು,ಸಂದರವಾದ ಹೂವು-ಹಣ್ಣು ಹಾಗೂ ಪ್ರಶಾಂತವಾದ ಪರಿಸರವೆಂಬ ಭ್ರಮೆಯಾಚೆಗೆ ಹೊರಬಂದು ಅಲ್ಲಿ ಸ್ವಲ್ಪ ಎಡವಿದರೂ ಅದೇ ಬದುಕಿನ ಅಂತ್ಯವಾಗುತ್ತದೆಂಬ ಪಾಠವನ್ನೂ ಲೇಖಕರು ತಮ್ಮ ಸಾಹಸಭರಿತ ಅನುಭವಗಳ ಮೂಲಕ ಓದುಗರಿಗೆ ತಿಳಿಸಿಕೊಟ್ಟಿದ್ದಾರೆ. ಇಂದಿನ ಆಧುನಿಕ ಕಾಲ ಘಟ್ಟದಲ್ಲಿ ಹಣ ಕೇಂದ್ರಿತ ಬದುಕಿನ ಚಕ್ರವ್ಯೂಹದಲ್ಲಿ ಸಿಲುಕಿರುವ ನಮಗೆಲ್ಲಾ ವನ್ಯ ಲೋಕದ ಸೊಬಗನ್ನು ಸವಿದು ನಮ್ಮೆಲ್ಲರ ಮೂಲವಾಗಿರುವ ವನ್ಯ ಲೋಕದ ನಿಗೂಢ ಬದುಕಿನ ಕುರಿತು ಸಾದೃಶವಾಗಿ ವಿವರಿಸುವ ಇಂಥಹ ಅದ್ಭುತ ಕೃತಿಗಳ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ನಮಗೆ ಗೊತ್ತಿರದ ಕಾಡು ಹಾಗೂ ಈ ಅಗಾಧವಾದ ವನ್ಯ ಲೋಕದಲ್ಲಿ ನಿಗೂಢವಾಗಿ ಬದುಕುತ್ತಿರುವ ಇಂಥಹ ವಿಶಿಷ್ಟ ಹಾಗೂ ಅಪರೂಪವಾದ ಕೆನ್ನಾಯಿ ಎಂಬ ವನ್ಯ ಜೀವಿಯ ಕುರಿತು ಸಂಶೋಧನೆಮಾಡಿ ಅದನ್ನು ಕೃತಿಯ ಮೂಲಕ ತಿಳಿಸುತ್ತಿರುವ ಲೇಖಕರ ಸಾಹಸ ಮೆಚ್ಚುವಂತದ್ದಾಗಿದೆ.ಕ್ರೂರ ವನ್ಯ ಮೃಗಗಳ ಜೊತೆಗೆ ಧಟ್ಟ ಕಾಡಿನಲ್ಲಿ ವಾಸಮಾಡಿ ಅವಕಾಶ ಸಿಕ್ಕಾಗ ತಮ್ಮ ಕ್ಯಾಮರಾಗಳ ಮೂಲಕ ಈ ವನ್ಯ ಜೀವಿಗಳನ್ನು ಸೆರೆಹಿಡಿದು ಅವುಗಳನ್ನು ನಮಗೆ ಇದ್ದ ಹಾಗೆ ತೋರಿಸುವ ವನ್ಯ ಜೀವಿ ಛಾಯಾಗ್ರಾಹಕರ ಹಸಿವನ್ನು ಈ ಕೃತಿಯು ತಿಳಿಸಿಕೊಡುತ್ತದೆ.ಇದರೊಂದಿಗೆ ಆ ಕಾಡು ಕುರುಬರ ಪರಿಸರ ಪ್ರೇಮ ಹಾಗೂ ಪ್ರಜ್ಞೆ ಜೊತೆಗೆ ಮುಗ್ಧತೆಯು ನಮ್ಮ ಅಂತ:ಕರಣವನ್ನು ಎಚ್ಚರಿಸುತ್ತಾ ಸ್ವಯಂ ವಿಮರ್ಷೆಗೆ ಹಚ್ಚುತ್ತದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಆಧುನಿಕ ಜಂಜಾಟಗಳ ಭರಾಟೆಯಲ್ಲಿ ಬದುಕನ್ನು ಕಳೆದುಕೊಂಡಿರುವ ಎಲ್ಲರಿಗೂ ಇದೊಂದು ರಸಗವಳ.ಜೊತೆಗೆ ಕಾಡಿನ ಸೊಬಗನ್ನು ಅರಿಯಲು ಹಾಗೂ ಸವಿಯಲಿಚ್ಛಿಸುವ ಎಲ್ಲರಿಗೂ ಇದು ಸೂಕ್ತವಾದ ಕೃತಿಯಾಗಿದೆ.ವಿಶೇಷವಾಗಿ ಕನ್ನಡದ ಮಹಾನ್ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಗಳಿಗಂತೂ ಇದು ಖಂಡಿತಾ ರುಚಿಸುತ್ತದೆ.ಪ್ರತಿ ಪುಟದಲ್ಲೂ ನೀವು ಕೃತಿಯಲ್ಲಿನ ವಿಷಯ ವಸ್ತುಗಳೊಂದಿಗೆ ಕಾಡಿನ ಜಾಡು ಹಿಡಿಯುತ್ತಾ ಸಾಗುವ ಅದ್ಭುತ ಅನುಭವ ಮೂಡಿಸುತ್ತದೆ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.