ಪುಸ್ತಕದ ಶೀರ್ಷಿಕೆ: ಬಾಳಿಗೊಂದು ನಂಬಿಕೆ
ಪುಸ್ತಕದ ಲೇಖಕರು: ಡಿ.ವಿ.ಜಿ. (ಡಾ. ಡಿ.ವಿ. ಗುಂಡಪ್ಪ)
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಮಂಗಲಾ ಯಶಸ್ವಿ ಭಟ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
"ಜೀವನಕ್ಕೊಂದು ಹೊಸನೋಟ ಕೊಡುವ “ಬಾಳಿಗೊಂದು ನಂಬಿಕೆ” ಈ ಕೃತಿಯನ್ನು ಡಿವಿಜಿಯವರ ಉಪನ್ಯಾಸಗಳ ಲೇಖನರೂಪ ಅಥವಾ ನಿಬಂಧಗಳ ಗುಚ್ಛ ಎನ್ನಬಹುದು. ಒಂದು ಒಳ್ಳೆಯ ಬಾಳಿಗೆ ಸತ್ಯವನ್ನರಿತ ಹಿರಿಯರೊಬ್ಬರು ಹಾಕಿಕೊಟ್ಟ ನಕಾಶೆ ಎನ್ನಲೂಬಹುದು. “ಇದು ಪಂಡಿತರಿಗಾಗಿ ಬರೆದ ಗ್ರಂಥವಲ್ಲ. ಅತಿ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿರಿಸಿಕೊಂಡು ಬರೆದ ಬರೆವಣಿಗೆಯಿದು.” ಇದು ಕೃತಿಕಾರರ ವಾಕ್ಯ. ಕೃತಿಯನ್ನು ಪೂರ್ತಿಯಾಗಿ ಓದಿದಾಗ ಆ ಮಾತು ಸತ್ಯವೆಂದು ಸಾಬೀತಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ವರ್ಷಗಳಲ್ಲಿ ಮೂಡಿದ ಕೃತಿಯಾದರೂ ಇದು ಎಲ್ಲ ಕಾಲಕ್ಕೂ, ಎಲ್ಲ ಓದುಗವರ್ಗಕ್ಕೂ ಸಲ್ಲುತ್ತದೆ. “ಬದುಕು ಏಕೆ? ಗುರಿಯೇನು? ಒಳ್ಳೆಯದು ಎಂದರೇನು?” ಹೀಗೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಕೆಲವು ಪ್ರಶ್ನೆಗಳೊಂದಿಗೆ ಆರಂಭವಾಗುತ್ತದೆ ಈ ಕೃತಿ. ಮುಂದೆ ಚತುರ್ವಿಧ ಪುರುಷಾರ್ಥವನ್ನು, ಜೀವನೋತ್ಸಾಹ - ಪುರುಷಪ್ರಯತ್ನ- ಲೋಕಸ್ನೇಹ ಎಂಬ ಮೂರು ಗುಣಗಳನ್ನು ಮತ್ತು ಅಂದಿನ ದೇಶಕಾಲದಲ್ಲಿ ಮನುಷ್ಯರ ಮನಸ್ಥಿತಿಯನ್ನು, ಪಾಶ್ಚಾತ್ಯರ ಆಳ್ವಿಕೆಯಿಂದ ನಲುಗಿಹೋದ ನಮ್ಮ ದೇಶದ ಕ್ಷೀಣದೆಸೆಗೆ ನಿಜವಾದ ಕಾರಣವನ್ನೂ ವಿಸ್ತಾರವಾಗಿ ಹೇಳುತ್ತಾ ಹೋಗುತ್ತದೆ. ಹೇಗೆ ಒಂದೇ ಕಾಲು ನಮ್ಮ ನಡಿಗೆಗೆ ಸಾಲದೋ, ಹೇಗೆ ಒಂದೇ ಕೈ ನಮ್ಮ ಕೆಲಸಕ್ಕೆ ಸಾಲದೋ ಹಾಗೆಯೇ ಏಕವಾಕ್ಯ ಸಿದ್ಧಾಂತ ನಮ್ಮ ಬಾಳಿಗೆ ಸಾಲಲಾರದು ಎಂಬುದು ಲೇಖಕರ ಅಭಿಪ್ರಾಯ. ಹಾಗಾಗಿ ಒಂದೆರಡು ಸರಳವಾದ ಸೂತ್ರಗಳನ್ನು ಅರ್ಥ ಮಾಡಿಕೊಂಡು, ಗಟ್ಟಿಯಾಗಿ ಹಿಡಿದು, ಸತತವಾಗಿ ಅನುಸರಿಸಿದರೆ ಸಾಧನೆ ಸಾಧ್ಯ ಎಂಬುದನ್ನು ಗಾಂಧೀಜಿಯವರ ಉದಾಹರಣೆ ಕೊಟ್ಟು ಈ ಕೃತಿಯಲ್ಲಿ ವಿವರಿಸಿದ್ದಾರೆ. ಆ ಹೊತ್ತಿನಲ್ಲಿ ಅವರೇ ಬರೆದ “ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು” ಎಂಬ ಹನುಮಂತನುಪದೇಶವನ್ನು ಹೇಳುವ ಕಗ್ಗ ನೆನಪಾಗುತ್ತದೆ. ಮಹರ್ಷಿಗಳ ಜೀವಧ್ವನಿಯೇನು, ಉಪನಿಷತ್ತುಗಳ ನಿಜವಾದ ಸಾರವೇನು, ವೈರಾಗ್ಯ ಎಂದರೇನು, ಜೀವನಧರ್ಮ ಎಂದರೇನು ಎಂಬುದನ್ನು ಜನಸಾಮಾನ್ಯರಿಗೆ ತಿಳಿಯುವ ರೀತಿಯಲ್ಲಿ ಇಲ್ಲಿ ತಿಳಿಸುತ್ತಾರೆ. ಅಗ್ಗದ ವೈರಾಗ್ಯ ಸರಿಯಲ್ಲ. ಅಗತ್ಯವಿರುವುದು ವಿವೇಕಶುದ್ಧವಾದ ವಿರಕ್ತಿ ಎನ್ನುತ್ತಾರೆ. ವೇದಾಂತ ತತ್ತ್ವಕ್ಕೂ ಲೌಕಿಕ ವ್ಯವಹಾರಕ್ಕೂ ವಿರೋಧವಿಲ್ಲ. ಸಮಸ್ತ ಸೃಷ್ಟಿಯ ಕುರಿತು ಗೌರವಾದರವನ್ನೂ, ಜೀವನಪ್ರೇಮವನ್ನೂ ಇಟ್ಟುಕೊಂಡು, ಮಾಡುವ ನಿಸ್ವಾರ್ಥ ಲೋಕಸೇವೆಯೂ ವೇದಾಂತದ ಅತ್ಯುತ್ತಮ ಮಾರ್ಗವೇ ಸರಿ ಎಂಬುದನ್ನು ವಿದ್ಯಾರಣ್ಯರ ಮಾತುಗಳನ್ನು ಉಲ್ಲೇಖಿಸುತ್ತಾ ಸ್ಪಷ್ಟ ಪಡಿಸುತ್ತಾರೆ. “ಜಗಜ್ಜೀವನದಲ್ಲಿ ಬೆರೆಯುವುದೇ ಆತ್ಮವಿಕಾಸ. ಅದುವೇ ಧರ್ಮದ ರಹಸ್ಯ” ಎಂದು ಪ್ರತಿಪಾದಿಸುವ ಕೃತಿಯಲ್ಲಿ ಆತ್ಮವಿಕಾಸ ಕ್ರಮವನ್ನು ಉಪನಿಷತ್ ಸೂತ್ರಗಳ ಉದಾಹರಣೆಗಳೊಂದಿಗೂ, ತರಂಗವಲಯಗಳಿಗೆ ಬದುಕನ್ನು ಹೋಲಿಸಿ ವಿಶ್ವಾತ್ಮಭಾವವನ್ನೂ, ಪರಮಜ್ಞಾನಿಯ ಲಕ್ಷಣವನ್ನೂ ಚೆನ್ನಾಗಿ ವಿವರಿಸಿದ್ದಾರೆ. ಈ ಕೆಳಗಿನ ಕೆಲವು ನನಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾದ ಹಾಗೂ ಚಿಂತನೆಗೆ ಒಳಪಡಿಸಿದ ಸಾಲುಗಳು. ""ಯಾವುದಕ್ಕೆ ಕಾಲ ದೇಶ ಸಂದರ್ಭಗಳಿಂದ ವಿಕಾರವೂ ಹಾನಿಯೂ ಇಲ್ಲವೋ ಅದೇ ಒಳ್ಳೆಯದು. ಒಳ್ಳೆಯದರ ಮುಖ್ಯ ಲಕ್ಷಣ ಬಾಳಿಕೆ. ಅದು ನಾಶವಿಲ್ಲದೆ ಏಕರೂಪದಲ್ಲಿ ನಿಂತಿರಬಲ್ಲದು."" ""ಯಾವ ಮನುಷ್ಯನು ಸಮಸ್ತ ಜೀವಜಂತುಗಳೂ ತನ್ನೊಳಗೇ - ತನ್ನ ಅಂಶವಾಗಿಯೇ-ಸೇರಿಕೊಂಡಿದೆ ಎಂಬಂತೆ ಅಭೇದ ಬುದ್ಧಿಯಿಂದ ನಡೆದುಕೊಳ್ಳುತ್ತಾನೋ ಮತ್ತು ಯಾರು ತನ್ನ ಒಳಗಿರುವ ಆತ್ಮವನ್ನೇ ಸಮಸ್ತ ಜೀವಜಂತುಗಳಲ್ಲಿಯೂ ಕಾಣುತ್ತ ಅವುಗಳ ಅನುಭವಗಳಲ್ಲಿ ಸಹಭಾಗಿಯಾಗಿರುತ್ತಾನೋ ಅವನಿಗೆ ಶೋಕವಿರದು, ಅವನನ್ನು ಪಾಪವು ಸೋಕದು."" ""ಜಗಜ್ಜೀವನದಲ್ಲಿ ಬೆರೆಯುವುದು ಎಂಬುದೇ ಆತ್ಮವಿಕಾಸ. ಅದೇ ಧರ್ಮದ ರಹಸ್ಯ. ಮನೆ, ಕುಲ, ಸಮಾಜ, ರಾಜ್ಯ- ಮೊದಲಾದ ಎಲ್ಲ ಏರ್ಪಾಟುಗಳೂ ಆ ಆತ್ಮವಿಕಾಸದ ಅಭ್ಯಾಸಕ್ಕಾಗಿ."" ""ವೈರಾಗ್ಯ ಎಂದರೆ ಲೋಕದ ವಸ್ತುಗಳೆಲ್ಲ ತನಗೆಂಬ ಅಪೇಕ್ಷೆಯನ್ನು ಬಿಡುವುದು. ತನ್ನ ಸ್ವಂತ ಸುಖಕ್ಕಾಗಿ ಯಾವುದನ್ನೂ ಬೇಡದೇ, ಯಾರನ್ನೂ ಕಾಡಿಸದೆ ಇರುವುದು. ಇದೆ ನಿಜವಾದ ತ್ಯಾಗ. ಇದೇ ವಿವೇಕಶುದ್ಧವಾದ ವಿರಕ್ತಿ."" ""ಜೀವನೋತ್ಸಾಹ, ಪೌರುಷಪ್ರಕಾಶ, ಲೋಕಸ್ನೇಹ - ಪ್ರಗತಿ, ವಿಜ್ಞಾನ, ಸೌಜನ್ಯ - ಇವು ನಮಗೆ ತಾರಕಮಂತ್ರಗಳು."" ಇಷ್ಟೇ ಅಲ್ಲದೇ ವಿಜ್ಞಾನ ಬದುಕಿಗೆ ತುಂಬಾ ಮುಖ್ಯ ಎನ್ನುತ್ತಲೇ ಅದರ ಮಿತಿಯನ್ನೂ, ಜೀವನ ಪರಿಷ್ಕಾರಕ್ಕೆ ಇರುವ ಸಾಧನಗಳನ್ನೂ, ಸನಾತನ ಸಂಸ್ಕೃತಿ ಮತ್ತು ಕೆಲವು ಪಾಶ್ಚಾತ್ಯ ವಿಚಾರಗಳನ್ನು ಈ ಕಾಲಕ್ಕೆ ತಕ್ಕಂತೆ ಸಮನ್ವಯ ಮಾಡುವುದು ಹೇಗೆಂದು ತಿಳಿಸುತ್ತದೆ. ಪೌರುಷ ಸಂಧಾನ, ಉತ್ಸಾಹ ತುಂಬಿದ ಲೋಕಧರ್ಮಶ್ರದ್ಧೆ ಬೇಕು ಎನ್ನುತ್ತಲೇ ಅದರೊಟ್ಟಿಗೆ ಸ್ವಾರ್ಥತ್ಯಾಗದ ದೈವಭಕ್ತಿ ಇರಲೇಬೇಕು ಎನ್ನುವುದು ಲೇಖಕರ ಅಭಿಮತ. ಆ ಮೂರೂ ಗುಣಗಳೂ ತುಂಬಿಕೊಂಡ ಹನುಮಂತ ಪ್ರತಿ ಭಾರತೀಯನಿಗೂ ಆದರ್ಶವಾಗಬೇಕು ಎಂಬ ತತ್ತ್ವವೇ ಕೃತಿಯ ಕೊನೆಯಲ್ಲಿ ಸೊಗಸಾದ ಕವನವಾಗಿ ಹರಿದಿದೆ. ಹೀಗೆ ಅನೇಕ ಉತ್ತಮ ವಿಷಯಗಳು ಅಡಕವಾಗಿರುವ ಈ ಪುಟ್ಟ ಪುಸ್ತಕವನ್ನು ಓದುತ್ತಾ ಹೋದಂತೆ, ಪ್ರತಿಯೊಬ್ಬ ಓದುಗನಿಗೂ, ಆತ್ಮೀಯ ಹಿರಿಯರೊಬ್ಬರು ಪ್ರೀತಿಯಿಂದ ಪಕ್ಕದಲ್ಲಿ ಕೂರಿಸಿಕೊಂಡು ಬದುಕಿಗೊಂದು ಹೊಸನೋಟವನ್ನೂ, ಬಾಳಿಗೊಂದು ನಂಬಿಕೆಯನ್ನೂ ಕೊಟ್ಟಂತೆ ಅನ್ನಿಸುವುದು ಖಂಡಿತ. “ಬಾಳಿಗೊಂದು ನಂಬಿಕೆ” ಕೃತಿ ಓದಿ. ಅಡಕವಾದ ದೊಡ್ಡ ತತ್ತ್ವವನ್ನು ಹುಡುಕಿಕೊಳ್ಳಿ. ಮಂಗಲಾ ಯಶಸ್ವಿ ಭಟ್"
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.