Submission 1981

ಪುಸ್ತಕದ ಶೀರ್ಷಿಕೆ: ನೆನಪಿನ ದೋಣಿಯಲ್ಲಿ

ಪುಸ್ತಕದ ಲೇಖಕರು: ಕುವೆಂಪು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ರಕ್ಷಿಸಲಾಗಿದೆ. ಪಿ ಪ್ರಕಾಶ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕೃತಿ: ನೆನಪಿನ ದೋಣಿಯಲ್ಲಿ ಲೇಖಕರು: ಕುವೆಂಪು ಪ್ರಕಾರ: ಆತ್ಮಕಥನ ಪೀಠಿಕೆ: ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ರಾಷ್ಟ್ರಕವಿ, ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತರು ಕುವೆಂಪು ಅವರು." ಕುವೆಂಪು", ಈ ಹೆಸರಿನಲ್ಲೇ ಒಂದು ಶಕ್ತಿ ಇದೆ,ಭಕ್ತಿ ಇದೆ,ಯುಕ್ತಿ ಇದೆ ಮತ್ತು ಮುಕ್ತಿ ಇದೆ."ಕನ್ನಡದ ವಿಲಿಯಂ ವರ್ಡ್ಸ್ ವರ್ತ್" ಎಂದು ಕರೆಸಿಕೊಳ್ಳುವ ಕುವೆಂಪು, ಇಡೀ ಮಲೆನಾಡಿನ ಕಾಡನ್ನು ಜಗತ್ತಿಗೆ ಪರಿಚಯಿಸಿದ್ದಾರೆ, ಎಂದಾದರೂ ಪ್ರಕೃತಿ ಮನುಷ್ಯನ ಋಣದಲ್ಲಿ ಇರುವುದುಂಟೇ?, ಪುನಃ ಮಲೆನಾಡು ಕುವೆಂಪು ಅವರನ್ನು ಜಗತ್ತಿಗೆ ಪರಿಚಯಿಸಿದೆ. ಇಲ್ಲಿ ಪ್ರಕೃತಿ ಹಾಗೂ ಕುವೆಂಪು ಅವರು ಒಳಗೊಳ್ಳುವಿಕೆ ವಿಶೇಷವೆನಿಸುತ್ತದೆ. ಈ ಕೃತಿಯಲ್ಲಿ ಕುವೆಂಪು ಅವರು ಮಲೆನಾಡಿನ ಪರಿಸರದಲ್ಲಿ ಬೆಳೆದ ಬಾಲ್ಯ, ಕುಪ್ಪಳ್ಳಿಯ ಜೀವನ ಹಾಗೂ ಮಹಾನ್ ಚೇತನಗಳ ಪ್ರಭಾವವನ್ನು ವಿವರಿಸಿದ್ದಾರೆ ಹಾಗೂ ಅಲೆಮಾರಿ ಮನಸ್ಸಿನ ಅನಾವರಣವೇ ಈ ಕೃತಿ. ವಿಶ್ಲೇಷಣೆ: ಕುವೆಂಪು ಈ ಕೃತಿಯಲ್ಲಿ ತಮ್ಮ ಬದುಕಿನಲ್ಲಾದ ಎಲ್ಲಾ ನಕಾರಾತ್ಮಕ ಹಾಗೂ ಸಕಾರಾತ್ಮಕ ಸಂಗತಿಗಳನ್ನು ಲೀಲಾಜಾಲವಾಗಿ ವಿವರಿಸಿದ್ದಾರೆ. * ಆರಂಭದಲ್ಲಿ ಅವರ ಬಾಲ್ಯದ ಬಗ್ಗೆ, ಅಜ್ಜ ಅಜ್ಜಿಯ ಪರಿಚಯ, ಇವರ ಜನ್ಮ ದಿನಾಂಕ (೨೯-೧೨-೧೯೦೪), ಹಾಗೂ ಇವರ ತಂದೆ ತಾಯಿಯ ಮದುವೆ ದಿನಾಂಕವನ್ನು ಹೇಳಿ ಆತ್ಮ ಕಥೆಯೊಳಗೆ ನಿಧಾನವಾಗಿ ಪ್ರವೇಶ ಮಾಡುತ್ತಾರೆ. *ಅವರ ಬಾಲ್ಯ,ಯೌವ್ವನ,ಓದು ಬರಹ, ದಾಂಪತ್ಯ ಜೀವನ,ಸಾಹಿತ್ಯ ಲೋಕ, ಮಲೆನಾಡಿನ ಪ್ರಕೃತಿ ಎಲ್ಲವನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ್ದಾರೆ. *ಕಥೆಯನ್ನು ಆರಂಭಿಸಿ, "ತೇಲಿ ಸಾಗಲಿ ಆ ಹೊಳೆಯಲ್ಲಿ ನಮ್ಮ ನೆನಪಿನ ದೋಣಿ ಇಲ್ಲಿದೆ ಚುಕ್ಕಾಣಿ ನೆನಪಿನ ದೋಣಿ ತೇಲಿ, ತೇಲಿ, ತೇಲಿ ಅಲೆ, ಅಲೆ, ಅಲೆ ಕೇಲಿ ಅಲೆಯುತ್ತಿದೆ ಪೋಲಿ!" *ಕಥೆಯ ಆರಂಭದಲ್ಲಿ ಅವರ ಅಜ್ಜಿಯನ್ನು ಸ್ಮರಿಸುತ್ತಾ, "ಇವರ ವಿಚಾರ ಬುದ್ಧಿಯ ನಾಸ್ತಿಕತೆ, ತನ್ನ ಕೃತಜ್ಞತೆಗೆ ನಾಚಿ, ಆಸ್ತಿಕತೆಗೆ ತಿರುಗಿ, ಕೃತಜ್ಞತೆಯ ಕಣ್ಣೀರು ಕಪೋಲಗಳನ್ನು ತೊಯ್ಯಿಸಿ ಮೀಯಿಸಿದಂತಾಗುತ್ತದೆ" ಎಂದು ತಮ್ಮ ಅಜ್ಜಿಯ ನಿಷ್ಕಾಮ ಪ್ರೇಮವನ್ನು ವಿವರಿಸಿದ್ದಾರೆ ಹಾಗೂ ಪ್ರೀತಿಯಿಂದ ಕೊಡುತ್ತಿದ್ದ ಸಿಹಿಅಪ್ಪು ನೆನೆದು ಆನಂದ ಪಡುತ್ತಾರೆ. *ಆರಂಭದಲ್ಲಿ ಪುಟ್ಟಯ್ಯ ನಾಯಕರ ಸಹಕಾರವನ್ನು ಸ್ಮರಿಸಿ ಹೊಂದಿಸುತ್ತಾರೆ. *ಮುಂದುವರೆದು "ಕೊಪ್ಪಳ್ಳಿ ಇನ್ನು ಇದೆ, ಹಿರೆಕೊಡಗಿ ಇಲ್ಲ!", ಅದು ಭಟ್ಟರೊಬ್ಬರ ದನದ ಕೊಟ್ಟಿಗೆಯ ಗೊಬ್ಬರದ ಗುಂಡಿಯಾಗಿದೆ ಎಂದು ಹೇಳಿರುವುದು ದುಃಖದ ವಿಷಯವಾಗಿದೆ. *ಅವರ ಕುಟುಂಬದ ಸದಸ್ಯರ ಪರಿಚಯ ಮಾಡುತ್ತಾ, "ಹೆಂಗಸರ ಸಂಖ್ಯೆ ಗಂಡಸರ ಮೂರರಷ್ಟಿತ್ತು"ಎಂದು ಹೆಂಗಸರ ಗರಿಷ್ಠತೆಯನ್ನು ತಿಳಿಸಿದ್ದಾರೆ. *ಮುಂದುವರೆದು ಶನಿವಾರದ ಸಮಸ್ಯೆಯನ್ನು ವಿವರಿಸುತ್ತಾ, "ಇದೆಲ್ಲಿಯ ಆಳು ಶನಿವಾರ",-ಮಡಿ,ಮೈಲಿಗೆ,ಬ್ರಾಹ್ಮಣತ್ವ,ಆಚಾರ ಹಾಗೂ ಸಂಸ್ಕೃತಿಯನ್ನು ಬಡಿದೇಳಿಸುವ ಶನಿವಾರದ ಕುರಿತು ವಿವರಿಸಿದ್ದಾರೆ. *ಮಲೆನಾಡಿನ ಶಿಕಾರಿ (ಈಡುಗಾರಿಕೆ) ಸಂಸ್ಕೃತಿಯ ಕುರಿತು ವಿವರಿಸಿದ್ದಾರೆ. ಶಿಕಾರಿ ಹೊಡೆಯುವಾಗ ತಮ್ಮ ಮನೆಯ ನಾಯಿ ಬಲಿಯಾದ ಕಾರಣ ಆ ದಿನ ಅವರು ಹೊಲಸು (ಮಾಂಸಹಾರ) ತಿನ್ನದೇ ಇರುವುದು ಕುವೆಂಪು ಅವರ, "ಜೀವ ಪರವಾದ ಚಿಂತನೆಯನ್ನು" ಶೋಭಿಸುತ್ತದೆ. *ಮಲೆನಾಡಿನ ಐಗಳು ಸಂಸ್ಕೃತಿಯನ್ನು, ಕ್ರೈಸ್ತ ಮಿಷಿನರಿಗಳ ಆಗಮನದಿಂದ ಬಂದ ಮೇಷ್ಟ್ರು ಸಂಸ್ಕೃತಿಯನ್ನು ಹಾಗೂ ಇಂಗ್ಲೀಷ್ ಕಲಿಯುವುದರ ಅನಿವಾರ್ಯತೆಯನ್ನು ತಿಳಿಸಿದ್ದಾರೆ. *ಮುಖ್ಯವಾಗಿ ಅಕ್ಷರ ಲೋಕದ ಮೂಲಕ ವಿಶ್ವವನ್ನು ಪ್ರತಿನಿಧಿಸುವ ಅವರ ಬಗೆ ಮೆಚ್ಚುಗೆಗೆ ಪಾತ್ರವಾಗಿದೆ. *ಮೋಸಸ್ ಕ್ರೈಸ್ತ ಫಾದರ್ ಬರೆದ "ಪಾಪಕ್ಕೆ ಪ್ರಾಯಶ್ಚಿತ" ಪುಸ್ತಕವನ್ನು ಓದಿದ ನಂತರ ಮಾಂಸಾಹಾರವನ್ನು ವರ್ಜಿಸಿದ್ದರ ಕುರಿತು ತಿಳಿಸಿದ್ದಾರೆ. *ಇತ್ತೀಚಿನ ಕರೋನಾದ ಹಾಗೆ, ಜರ್ಮನಿಯಿಂದ ಬಂದ "ಇನ್ ಫ್ಲುಯರ್ ಬಾ" ಎಂಬ ರೋಗವು ಸಾವಿರಾರು ಜನರ ಬಲಿ ಪಡೆದ ಕುರಿತು ತಿಳಿಸಿದ್ದಾರೆ. * ಜೇಮ್ಸ್ ಕಸಿನ್ ಎಂಬ ವ್ಯಕ್ತಿಯ "ವಾಟ್ ಇಸ್ ಆಲ್ ದಿಸ್ ಸ್ಟಫ್" ಎಂಬ ಮಾತು ಕುವೆಂಪು ಅವರನ್ನು ಕನ್ನಡಕ್ಕೆ ತರಲು ಸಹಾಯ ಮಾಡಿದ ರೀತಿಯನ್ನು ವಿವರಿಸುತ್ತಾ ಅವರಿಗೆ ವಂದಿಸುತ್ತಾರೆ. *ಇವರಿಗಿದ್ದ ಕೆಟ್ಟ ಚಟಗಳಾದ, ಸಿಗರೇಟ್, ಇಸ್ಪೀಟ್ ಹಾಗೂ ನಶ್ಯ ಸೇದುವಿಕೆಯನ್ನು ತಿಳಿಸಿದ್ದಾರೆ. ಕಾರಣ ಭವಿಷ್ಯದಲ್ಲಿ ಈ ಪುಸ್ತಕ ಓದುವ ಜನರಿಗೆ ಇರುವ ಗೊಂದಲವನ್ನು ದೂರ ಮಾಡಲೆಂದೇ ಇರಬೇಕು, ಇವುಗಳನ್ನು ಹೊಂದಿದ ನಾವೂ ಸಾಧಿಸಬಹುದು ಅದರ ಆಚೆಗೆ ಇರುವ ಬದುಕನ್ನು ಕಟ್ಟಿಕೊಂಡು ಪ್ರೀತಿಸಬಹುದು ಎಂದು ತಿಳಿಸಿದ್ದಾರೆ. *ಇವರ ಬದುಕಿನಲ್ಲಿ "ಸಿದ್ದೇಶ್ವರ ಸ್ವಾಮಿಗಳ" ಪಾತ್ರದ ಕುರಿತು ವಿವರಿಸಿದ್ದಾರೆ. *ಇವರ "ಹೌಹಾನ" ಗೀತೆ: "ಬಾ ಶ್ರೀ ಗುರುದೇವನೇ ಬಾ, ಶ್ಯಾಮಲ, ಕಾನನ, ಶೃಂಗ ತರಂಗಿತ ಸಹ್ಯಾದ್ರಿಯಾ ಸುಂದರ ಮಂದಿರಕ್ಕೆ ಚಿನ್ಮಯಿ" ಎಂಬ ಆಹ್ವಾನ ಗೀತೆ ಆಯ್ಕೆಯಾಗಿ ಇವರಿಗೆ ನೀಡಿದ ಆನಂದದ ಕುರಿತು ವಿವರಿಸಿದ್ದಾರೆ. *ಒಮ್ಮೆ ದರ್ಬಾರಿಗೆ ಹೋಗಿ ಯುವರಾಜರಿಗೆ ಪಾಠ ಮಾಡುವ ಸನ್ನಿವೇಶ ಬಂದಾಗ ಅದನ್ನು ತಿರಸ್ಕರಿಸುತ್ತಾರೆ ಕಾರಣ ಶಿಕ್ಷಣವನ್ನು ಗುರುವಿನ ಬಳಿ ಕಲಿಯಬೇಕೆ ಹೊರತು ಗುರು ಶಿಷ್ಯನ ಬಳಿ ಹೋಗಬಾರದು ಎಂಬ ಆಶಯದಿಂದ ಎಂದಿದ್ದಾರೆ. ಮುಂದುವರೆದ ಕುವೆಂಪು " I hava got a better business than teaching" ಎಂದು ಬರೆದಿದ್ದಾರೆ. *ಮುಖ್ಯವಾಗಿ ಇವರ ಪತ್ನಿ ಹೇಮಾವತಿಯ ಕುರಿತು ವಿವರಿಸುತ್ತಾರೆ, ಹೇಮಾವತಿ ಅವರು ಕುವೆಂಪು ಅವರೇ ನಾಮಕರಣ ಮಾಡಿದ ಹುಡುಗಿ. ಮುಂದೆ ಅವರ ಮದುವೆ ಪ್ರಸಂಗ ಬಂದಾಗ ಅವರನ್ನು ಒಪ್ಪಿದ ಕುವೆಂಪು ಮುಂದುವರೆದು ಹೇಳುತ್ತಾರೆ, ಹೇಮಾವತಿ ಅವರನ್ನು ಒಂದು ಮಾತು ಕೇಳಿ ಏಕೆಂದರೆ "ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ ಹಾಗೂ ಆಶಯವಿದೆ" ಎಂದು ಹೇಳುತ್ತಾರೆ ಹಾಗೂ "ದೇವಿ" ಎಂದು ಸಂಬೋಧಿಸುವ ಕುವೆಂಪು ನನಗೆ ದೀಕ್ಷೆ ಸಿಕ್ಕಿದರೆ ಅದು "ಹೇಮಾವತಿ" ಎಂದಿರುವುದು ಗಮನಾರ್ಹ ಸಂಗತಿ. ಕುವೆಂಪು ಅವರು ಹೆಣ್ಣನ್ನು ನೋಡಿದ ಬಗೆ, ನನಗೆ ಅವರ ಮೇಲಿದ್ದ ಒಲವನ್ನು ಇನ್ನು ಹೆಚ್ಚಿಸಿತು. * ಕುವೆಂಪು ಹೇಮಾವತಿ ಅವರನ್ನು ಬಹಳ ಪ್ರೀತಿಸುತ್ತಿದ್ದರು. ಎಷ್ಟೇ ಆದರೂ! ದಾಂಪತ್ಯ ಗೀತೆ ಬರೆದ ಕವಿ ಅಲ್ಲವೇ? *ದಾಂಪತ್ಯ ಗೀತೆ "ನಮ್ಮ ಬಾಳಿಗೆ ಸಾಕ್ಷಿ ಹೋಳಿಗೆ": "ನಾನು ಕಣಕ, ನೀನು ಹೂರ್ಣ ನಿನ್ನ ನಬ್ಬೆ, ನಾನು ಪೂರ್ಣ" ಅಂದರೆ ಕಣಕವನ್ನು ಗಂಡಿಗೆ, ಹೂರ್ಣವನ್ನು ಹೆಣ್ಣಿಗೆ ಹೋಲಿಸುತ್ತಾ ಅವೆರಡು ಸೇರಿದರೆ ಬದುಕು ಪೂರ್ಣ ಎಂದು ದಾಂಪತ್ಯ ಜೀವನಕ್ಕೆ ಹೊಸ ಮೆರುಗು ನೀಡಿದ ಕವಿ ನಮ್ಮ ಕುವೆಂಪು. *ಕುವೆಂಪು ಅವರ ಸಾಹಿತ್ಯದಲ್ಲಿ ಹೇಮಾವತಿ ಅವರ ಪ್ರೇರಣೆಯ ಕುರಿತು ತಿಳಿಸಿದ್ದಾರೆ. *ದಾಂಪತ್ಯದ ಗಟ್ಟಿತನ ಸಾಹಿತ್ಯದ ಸೃಷ್ಟಿಗೆ ಕಾರಣವಾದದ್ದನ್ನು ನಾವಿಲ್ಲಿ ನೋಡಬಹುದು. *ತನ್ನ ಜೀವನದಲ್ಲಿ ಪ್ರಭಾವ ಬೀರಿದ ಕವಿಗಳನ್ನು ಪರಿಚಯಿಸುತ್ತಾ ಲಕ್ಷ್ಮೀಶ ಕವಿಯನ್ನು ಕುರಿತು: "ರನ್ನ ,ಪಂಪ, ಕುಮಾರವ್ಯಾಸರನ್ನು ಅರಿಯುವುದಕ್ಕೆ ಮುನ್ನ ನನ್ನ ಪ್ರಶಂಸೆಯನ್ನೆಲ್ಲ ಸೂರೆಗೊಂಡು ಹೃದಯ ಸಿಂಹಾಸನವೇರಿದ್ದ ಕನ್ನಡದ ಕವಿ ಎಂದರೆ ಲಕ್ಷ್ಮೀಶನೊಬ್ಬನೇ" ಎನ್ನುತ್ತಾ ಅವರನ್ನು ಕುರಿತು: "ಕವಿಚೂತವನ ಚೈತ್ರ, ಕವಿತಾ ಕಡಲ ಭೈತ್ರ ಕವಿತಾ ಮಧು ತುಂಬಿಯೆ, ಸುರಚನಾವಲಂಬಿಯೆ... ಪೊನ್ನ ಸಿರಿ ಪುತ್ರಸಿರಿ ಇಲ್ಲದ ವಿಧವೆಯಂತೆ! ಲಕ್ಷ್ಮೀಶ ಬಾ ಬೇಗ ಕವಿತೆಯಿಂ ಕಣ್ರಾಟ ಲಕ್ಷ್ಮೀಯಂ ಪ್ರಜ್ವಲಿಸು, ಕವಿತೆಯಾವೇಶದಿಂ ಲಕ್ಷ್ಮೀಶ ರಾಜ್ಯವಂ ಕರೆಯೊಲಿದು ಧಾರಿಣಿಗೆ!" ಎಂದು ಲಕ್ಷ್ಮೀಶ ಕವಿಯನ್ನು ಹೊಗಳಿದ್ದಾರೆ. *ಹರಿಶ್ಚಂದ್ರ ಕಾವ್ಯ ಸಂಗ್ರಹವನ್ನು ಓದಿ ಹಿಗ್ಗಿ, ರಸಲಹರಿಯಲ್ಲಿ ತೇಲಿ ಹೋದ ಕ್ಷಣವನ್ನು ಸ್ಮರಿಸುತ್ತಾರೆ. *ಶ್ರೀ ರಾಮಕೃಷ್ಣ ಪರಮಹಂಸರ ಹಾಗೂ ಶಾರದಾ ಮಾತೆಯ ಮೇಲಿನ ಗೌರವ ಹಾಗೂ ಪ್ರೇಮದ ಕುರಿತು ವಿವರಿಸಿದ್ದಾರೆ. ಉಪಸಂಹಾರ: ರಾಷ್ಟ್ರಕವಿ ಕುವೆಂಪು ವಿರಚಿತ "ನೆನಪಿನ ದೋಣಿಯಲ್ಲಿ" ಆತ್ಮಕಥನವು ಕುವೆಂಪು ಅವರ ಸಂಪೂರ್ಣ ಬಾಲ್ಯಜೀವನ, ಯೌವ್ವನ, ಓದು ಬರಹ, ಮಲೆನಾಡಿನ ಪ್ರಕೃತಿ, ಸಾಹಿತ್ಯ ಲೋಕ, ಮಹಾನ್ ಚೇತನಗಳ ಪ್ರಭಾವವನ್ನು ವಿವರಿಸುವ ಹಾಗೂ ಕುವೆಂಪು ಜೀವನದ ಎಲ್ಲಾ ನೆನಪುಗಳ ಅನಾವರಣವೇ ಈ ಕೃತಿ ಇದನ್ನು ಓದಿದ ನಂತರ ನನ್ನ ಎಲ್ಲಾ ಬಾಲ್ಯಜೀವನ ನೆನಪಾಯಿತು,ಆನಂದವು ಆಯಿತು. ಕಾರಣ ನೆನಪುಗಳೇ ಅಲ್ಲವೇ! ಭವಿಷ್ಯದ ಬದುಕಿನಲ್ಲಿ ಆನಂದ ನೀಡುವ ಸಾಧನೆಗಳು. ಸ್ಥಿತ ಪ್ರಜ್ಞ, ಕವಿತಾ ಪ್ರವೀಣ ಕುವೆಂಪು ಅವರ ಭಾಷಾಶೈಲಿ, ವಿಷಯವನ್ನು ವ್ಯಕ್ತಪಡಿಸುವ ಭಾವ ನನ್ನನ್ನು ಬೆರಗುಗೊಳಿಸುತ್ತದೆ. ಮಲೆನಾಡಿನ ಸುಂದರ ಮಡಿಲಿನಲ್ಲಿ ಬೆಳೆದ ಅವರೇ ಧನ್ಯರು ಎನ್ನುತ್ತಾ ಈ ಮಹಾನ್ ಚೇತನದ ಆತ್ಮಕಥೆಯನ್ನು ಓದಿ ನನ್ನ ಹೃದಯವೂ ಆನಂದದಿಂದ ತುಂಬಿದೆ ಎನ್ನುತ್ತಾ ನನ್ನ ಅನಿಸಿಕೆಯನ್ನು ಮುಗಿಸುತ್ತೇನೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ನೆನಪಿನ ದೋಣಿಯಲ್ಲಿ ಬರುವ ಎಲ್ಲಾ ಕ್ಷಣಗಳು ಸ್ಮರಣೀಯವಾಗಿವೆ. ಕುವೆಂಪು ಅವರ ಕನ್ನಡ ಪ್ರೇಮ ನನಗೆ ಸ್ಮರಣೀಯವೆನಿಸಿತು, "ಏನು ಬಿಡು ಎಂದರೂ ಬಿಡಬಲ್ಲೆನಯ್ಯ ಕನ್ನಡದ ಮಮತೆಯನು ಬಿಡಲೊಲ್ಲನಯ್ಯ!"

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಪ್ರತಿಯೊಬ್ಬರಿಗೂ ಈ ಪುಸ್ತಕ ಸೂಕ್ತ, ಕಾರಣ ಒಬ್ಬ ಶ್ರೇಷ್ಠ ವ್ಯಕ್ತಿಯ ಜೀವನವನ್ನು ಆತ ನಡೆದು ಬಂದ ದಾರಿಯನ್ನು ತಿಳಿದು ಮುಂದೆ ಸಾಗಲು ಯುವ ಜನತೆಗೆ ಕೆಲವೊಮ್ಮೆ ಪ್ರೇರಣೆ ಯಾಗುತ್ತದೆ ಹಾಗೂ ನಮ್ಮ ಜೀವನದ ನೆನಪುಗಳನ್ನು ಮರುಕಳಿಸುವ ಯಾವುದೇ ನೆನಪುಗಳು ನಮಗೆ ಆನಂದ ನೀಡುತ್ತವೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

40
Votes
225
Views
7 Months
Since posted

Voting Closed!

Scroll to Top