ಪುಸ್ತಕದ ಶೀರ್ಷಿಕೆ: ರೇಷ್ಮೆ ಬಟ್ಟೆ
ಪುಸ್ತಕದ ಲೇಖಕರು: ವಸುಧೇಂದ್ರ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಲಾವಣ್ಯ ಶ್ರೀಕಾಂತ್ ಹೆಗ್ಡೆ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಯಾವುದೇ ಹೊಸ ಆವಿಷ್ಕಾರವೂ ಒಳಿತು ಮತ್ತು ಕೆಡುಕುಗಳನ್ನು ತನ್ನೊಳಗೆ ಒಳಗೊಂಡಿರುತ್ತದೆ. ಆ ಆವಿಷ್ಕಾರ ಕೆಲವರಿಗೆ ಒಳಿತನ್ನು ಮಾಡಿದರೆ ಕೆಲವರಿಗೆ ಕೆಡುಕನ್ನು ಮಾಡುತ್ತದೆ. ಹಾಗೆಯೇ ನುಣುಪಾದ ರೇಷ್ಮೆಯ ವ್ಯವಹಾರದ ದಾರಿಯು ಅದೆಷ್ಟು ಜನರ ಬದುಕನ್ನು ಕಠಿಣಗೊಳಿಸಿತು ಎಂಬ ಎರಡನೇ ಶತಮಾನದ ಸವಾಲುಗಳನ್ನು ತೆರೆದಿಟ್ಟ ಪುಸ್ತಕವೇ ರೇಷ್ಮೆ ಬಟ್ಟೆ. ಈ ಪುಸ್ತಕದ ಕರ್ತೃ ವಸುಧೇಂದ್ರ. ವರ್ಷಗಳ ಅಧ್ಯಯನವನ್ನು ರೇಷ್ಮೆಯಷ್ಟೇ ಮೌಲ್ಯಯುತವಾದ, ಬೇಡಿಕೆ ಹೊಂದಿದ ಪುಸ್ತಕವನ್ನಾಗಿಸಿದ್ದಾರೆ. ಚೀನೀಯರು ರೇಷ್ಮೆ ಬೆಳೆಯನ್ನು ಕಷ್ಟಪಟ್ಟು ಕೃಷಿ ಮಾಡಿ, ಬಟ್ಟೆಗಳನ್ನು ನೇಯ್ದು ಕಷ್ಟದ ಜೀವನ ನಡೆಸುತ್ತಿರುವುದನ್ನು, ರೇಷ್ಮೆ ನೇಯುವ ಕೌಶಲ್ಯವನ್ನು ಹೊಂದಿರದ ಹೂಣರು ಅವರಿಗೆ ಉಪಟಳ ನೀಡಿ ಅವರಿಂದ ಬಟ್ಟೆಯನ್ನು ದೋಚಿಕೊಂಡು ಹೋಗುವುದು ಇವುಗಳ ಕುರಿತಾದ ವಿವರಣೆಯನ್ನು ಈ ಪುಸ್ತಕ ಒಳಗೊಂಡಿದೆ. ತುಷಾರ ಜನಾಂಗವೆಂಬುದು ಕಾಡಿನಲ್ಲೇ ಬದುಕನ್ನು ಕಟ್ಟಿಕೊಂಡಿದ್ದ ಒಂದು ಸಮುದಾಯ. ಪ್ರಕೃತಿಯನ್ನು ಪ್ರೀತಿಸುವುದು ಅವರ ರಕ್ತದಲ್ಲೇ ಬಂದಿರುವ ಗುಣ. ಕಾಡನ್ನೇ ಉಸಿರಾಗಿಸಿಕೊಂಡು ಅಷ್ಟಷ್ಟು ತಿಂಗಳಿಗೊಮ್ಮೆ ವಾಸವನ್ನು ಬದಲಾಯಿಸುತ್ತಾ, ಬದುಕು ನಿಂತ ನೀರಾಗದೇ, ಹರಿವ ನದಿಯಾದರೆ ಬದುಕಿನಲ್ಲಿ ಉತ್ಸುಕತೆ ಹೆಚ್ಚಿರುತ್ತದೆ ಎಂದು ನಂಬಿದ್ದ ಸಮುದಾಯ. ಬಣ್ಣಗಳಿಲ್ಲದೇ ಬದುಕಿಲ್ಲ. ಬಣ್ಣಗಳಿಲ್ಲದ ಬದುಕನ್ನು ಊಹಿಸಿಕೊಂಡರೆ ಸಪ್ಪೆಯೆನಿಸಿಬಿಡುತ್ತದೆ. ಆದರೆ ಈ ಬಣ್ಣಗಳಿಗೆಲ್ಲಾ ಪ್ರೇರಣೆ ಪ್ರಕೃತಿ. ಬಣ್ಣದ ಎಲೆ, ತಿಳಿ ನೀರು, ಬಗೆ ಬಗೆಯ ರಂಗಿನ ಹೂವು, ಹಾರುವ ಬಣ್ಣದ ಹಕ್ಕಿ, ಪ್ರಾಣಿ ಮುಂತಾದವುಗಳ ಬಣ್ಣಗಳಿಂದ ಪ್ರೇರಣೆಗೊಂಡವನು ಮನುಷ್ಯ. ಹಾಗೆಯೇ ತುಷಾರ ಸಮುದಾಯದ ಮುಖ್ಯಸ್ಥ ಹಾಗೂ ಅವನ ಮೊಮ್ಮಗ ಹವಿನೇಮ ಪ್ರಕೃತಿಯ ಬಣ್ಣಗಳಿಂದ ಪ್ರೇರಿತರಾಗಿ ಹೇಗೆ ಅದನ್ನು ತಯಾರಿಸಿ ಮುಖಕ್ಕೆ ಅಲಂಕಾರವನ್ನು ಮಾಡುತ್ತಾರೆ ಎಂಬ ವಿಶೇಷವಾದ ವಿವರಣೆಗಳಿವೆ. ಹೆಂಡತಿ ಸಗನೇಮಿಯ ಒತ್ತಾಯಕ್ಕೆ ಮಣಿದು ಮಗ, ಋತುನೇಮನ ಅಧ್ಯಯನಕ್ಕಾಗಿ ಕಾಡಿನ ತನ್ನವರನ್ನು ಅಗಲಿ ನಗರವನ್ನು ಸೇರುವ ಹವಿನೇಮ ಮುಂದೆ ಕಾಣುವ ಕಷ್ಟಗಳು, ಅದರ ಜೊತೆಗೆ ವ್ಯಾಪಾರದ ದಾರಿ ಹೇಗೆಲ್ಲಾ ಅವರ ಬದುಕನ್ನು ಬದಲಾಯಿಸಿತು, ಆಸೆಗಳು ಕೆಲವೊಮ್ಮೆ ಹೇಗೆ ಬದುಕಿನಲ್ಲಿ ಸಂತೋಷದ ಜೊತೆ ಜೊತೆಗೆ ದುರಂತವನ್ನು ತಂದು ಬಿಡುತ್ತವೆ ಎಂಬ ವಿವರಗಳನ್ನು ಕೈ ಪುಸ್ತಕ ಹೊರಗೆಳೆದಿದೆ. ವ್ಯಾಪಾರಿಯಾಗುವ ಕನಸನ್ನು ಹೊತ್ತ ಸಮರಖಂಡದ ಮಿತ್ರವಂದಕ ಹೇಗೆ ಮಧುಮಾಯಾಳ ಪ್ರೀತಿಯಲ್ಲಿ ಪರಿಪೂರ್ಣತೆಯ ಅನುಭವ ಪಡೆಯುತ್ತಾನೆ ಜೊತೆಗೆ ಅವರಿಬ್ಬರ ಪ್ರೀತಿ ಅದೆಷ್ಟು ಅನುಮಾನ, ಧರ್ಮದ ನಿಯಮಗಳನ್ನು ಮೀರಿ ಗಟ್ಟಿಯಾಗುತ್ತದೆ, ಲವಂಗ ಬೆಕ್ಕು ಅದು ಹೇಗೆ ಅವರ ನಡುವಿನ ಪ್ರೀತಿಗೆ ಸೇತುವೆಯಾಗುತ್ತದೆ, ಕೊನೆಗೆ ತನ್ನ ಪ್ರೇಮಿಯ ಒಳಿತಿಗಾಗಿ ಮಧುಮಾಯಾ ಎಂತಹ ತ್ಯಾಗ ಮಾಡುತ್ತಾಳೆ ಎಂಬ ಪ್ರೀತಿಯ ಒಳಹೊಕ್ಕ ನೋವಿನ ಕಥೆಯಿದೆ. ಬದಲಾವಣೆಯನ್ನು ಕೆಲವೊಮ್ಮೆ ಮೆಚ್ಚಿ, ಇನ್ನೂ ಕೆಲವೊಮ್ಮೆ ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕು. ಮಧುಮಾಯಾ ಕೂಡ ಅವಳ ಪ್ರೀತಿಗಾಗಿ ತೆಗೆದುಕೊಂಡ ನಿರ್ಧಾರವೊಂದು ಅವಳ ಬದುಕಿನ ದಿಕ್ಕಿನಲ್ಲಿ ಹೇಗೆ ತಿರುವನ್ನು ತರುತ್ತದೆ, ಚೀನಾದ ಕುಟುಂಬವೊಂದರಲ್ಲಿ ಹೀ ಯು ದಾಸಿಯಂತೆ ಹೇಗೆಲ್ಲಾ ನೋವನನ್ನನುಭವಿಸುತ್ತಾಳೆ, ಆದರೆ ವಾನ್ ಮತ್ತು ಲೀಹ್ವಾ ಹೇಗೆ ಅವಳನ್ನು ಗೆಳತಿಯಂತೆ ಭಾವಿಸಿ ನೋವಿನಲ್ಲೂ ಜೊತೆಯಾಗುತ್ತಾರೆ, ಆದರೆ ಕೊನೆಗೊಂದು ದಿನ ಲೀಹ್ವಾ ಹೇಗೆ ತನ್ನ ದುರಂತದ ಬದುಕನ್ನು ನಡೆಸುತ್ತಾಳೆ, ಹೇಗೆ ಆ ದುರಂತದ ಬದುಕು ಅವಳಲ್ಲೊಂದು ಹುಚ್ಚು ಹಟವನ್ನು ಮೂಡಿಸಿ, ಚೀನಾದ ಮೂಲ, ರಹಸ್ಯ ಉತ್ಪಾದನೆ ಹಾಗೂ ಪ್ರಸಿದ್ಧ ವ್ಯಾಪಾರವೊಂದು ಚೀನಾದ ಗೋಡೆಗಳನ್ನು ಹೇಗೆ ದಾಟಿ ಹೋಗಿಬಿಡುತ್ತದೆ ಎಂಬ ಕುತೂಹಲಗಳ ಸರಣಿಯೇ ಇದೆ. ಇನ್ನು ಈ ಪುಸ್ತಕದ ಕೇಂದ್ರಬಿಂದುಗಳಂತೆ ಇರುವ ಬೌದ್ಧ ಭಿಕ್ಕುಗಳ, ಬುದ್ಧನ ಸಂದೇಶಗಳಲ್ಲಿ ಈ ಕಥೆ ಬೆರೆತುಹೋಗಿದೆ. ಜ್ಞಾನಸೇನರು, ಭಿಕ್ಕುವೇ ಆಗಿದ್ದರೂ ರಾಜಾಶ್ರಯದಲ್ಲಿದ್ದುದ್ದರಿಂದ ಎಷ್ಟೋ ರಾಜನ ಬದಲಾವಣೆಗಳಿಗೆ ತಗ್ಗಲೇ ಬೇಕಾದಂತಹ ಸಂದಿಗ್ಧತೆಯ ಸಂದರ್ಭಗಳನ್ನಿಟ್ಟುಕೊಂಡು, ಧರ್ಮದಲ್ಲಿ ಇಂತದ್ದನ್ನೇ ಮಾಡಬೇಕೆಂಬ ನಿಯಮವೇ ಇದ್ದರೂ ಕೆಲವೊಮ್ಮೆ ಜಗತ್ತಿನ ಬದಲಾವಣೆಗೆ ನಾವು ಹೊಂದಿಕೊಳ್ಳಲೇ ಬೇಕೆಂಬ ಸತ್ಯವನ್ನು ತೆರೆದಿಡುತ್ತದೆ. ಬುದ್ಧನ ಅನುಯಾಯಿಯಾದ ಬುಧ್ಧಮಿತ್ರ ಆಸೆಗಳನ್ನು ಹತ್ತಿಕ್ಕಿಕೊಳ್ಳಲಾಗದೇ ಎಂತಹ ಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಾನೆ, ಎಷ್ಟೇ ಅಧ್ಯಯನವನ್ನು ಮಾಡಿ ಕರಗತಮಾಡಿಕೊಂಡರೂ ಬದುಕಿನಲ್ಲಿ ಅಳವಡಿಸಿಕೊಳ್ಳಲಾಗದೇ ಅದೆಷ್ಟು ಕಷ್ಟಪಡುತ್ತಾನೆ, ಧರ್ಮದ ಪ್ರಚಾರಕ್ಕಾಗಿ ಧರ್ಮದ ನಿಯಮವನ್ನೇ ಮೀರಿ ಹೇಗೆ ತನ್ನನ್ನು ಬದಲಾಯಿಸಿಕೊಳ್ಳುತ್ತಾನೆ ಎನ್ನುವುದನ್ನು ಬದುಕನ್ನು ಬದಲಾಯಿಸುವ ರೇಶ್ಮೆಯ ವ್ಯಾಪಾರದ ದಾರಿಯಲ್ಲಿ ಕಾಣಬಹುದು. ಬರೀ ಇದಷ್ಟೇ ಪಾತ್ರಗಳಲ್ಲದೇ ಅಜ್ಜ್ಞಾತಕ ಮಧುಮಾಯಾಳ ತಂದೆ, ಕಾಂಗ್, ಶೀ, ಮಿತ್ರವಂದಕನ ತಂದೆ, ಕಾನಿಷ್ಕ ಮಹಾರಾಜರು, ಚೀನಾದ ರಾಜ ಹೀಗೆ ಇನ್ನಷ್ಟು ಪಾತ್ರಗಳು ಕಥೆಗೆ ಸುಂದರ ರೂಪ ಕೊಟ್ಟಿವೆ. ರಾಜರು ತಮ್ಮ ಅನುಕೂಲಕ್ಕಾಗಿ ಹಾಗೂ ಸಾಮ್ರಾಜ್ಯ ವಿಸ್ತರಣೆಗಾಗಿ ಮಾಡುವ ಬದಲಾವಣೆಗಳು ಪ್ರಜೆಗಳ ಬದುಕಿನಲ್ಲಿ ಎಷ್ಟು ಸಂದಿಗ್ಧತೆ ತರುತ್ತದೆ ಎಂಬ ಸತ್ಯವನ್ನು ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಅದಷ್ಟೇ ಅಲ್ಲದೇ ಮನುಷ್ಯ ಸುಗಮವಾದ ಬದುಕನ್ನು ಯಾವುದೋ ಒಂದು ಬದಲಾವಣೆಗಾಗಿ ಬದಲಾಯಿಸಿಕೊಳ್ಳುತ್ತಾನೆ. ಅದು ಎಷ್ಟೇ ಕಷ್ಟವಾಗಿರಲಿ. ಕೆಲವೊಮ್ಮೆ ಅವಶ್ಯಕತೆಯೇ ಇಲ್ಲದಿದ್ದರೂ ಆಸೆಗಳಿಗೆ ಬಲಿಯಾಗುವ ಮನುಷ್ಯ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಾನೆ. ಈ ವ್ಯಾಪಾರದ ದಾರಿಯೂ ಸುಗಮವಾಗಿದ್ದ ಎಲ್ಲರ ಬದುಕಿನಲ್ಲೂ ಬೇರೆ ಬೇರೆ ರೀತಿಯ ಬದಲಾವಣೆಗಳನ್ನೇ ತಂದಿತ್ತು. ಹಲವು ಕುತೂಹಲಗಳಿಗೆ ಉತ್ತರವನ್ನು ಬಿಚ್ಚಿಡದೇ ಪ್ರೀತಿ, ಕಾಡಿನ ಬದುಕು, ನೋವಿನ ಜೀವನ, ನಾಡಿನ ನಿಗೂಢ ಬದುಕು, ರಹಸ್ಯ, ಸಂದೇಶಗಳನ್ನು ಹೊತ್ತ, ಈ ಹೊತ್ತಿಗೆಯನ್ನು ಸಿಕ್ಕಾಗ ಓದಿ ಬಿಡಿರಿ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಈ ಪುಸ್ತಕ ಇತಿಹಾಸವನ್ನು ಹಾಗೂ ರೋಚಕತೆಯನ್ನು ಇಷ್ಟಪಡುವವರಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.