Submission 1891

ಪುಸ್ತಕದ ಶೀರ್ಷಿಕೆ: ಕರ್ವಾಲೊ

ಪುಸ್ತಕದ ಲೇಖಕರು: ಪೂರ್ಣಚಂದ್ರ ತೇಜಸ್ವಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ರೈಹಾನಾ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನಿಸರ್ಗದ ಅನೂಹ್ಯ ಲೋಕವನ್ನು ತೆರೆದಿಡುತ್ತಾ.... ಚರ್ಚೆಯಾಗದ ಮತ್ತು ಆಗಲೇ ಬೇಕಿರುವ ಅದ್ಭುತ ಅಂಶಗಳನ್ನು ರಸವತ್ತಾಗಿ ಓದುಗರಿಗೆ ಉಣಬಡಿಸುವ ಸ್ವಾರಸ್ಯಕರ ಕಾದಂಬರಿ 'ಕರ್ವಾಲೊ'. ಜೇನುತುಪ್ಪದ ಪ್ರಸಂಗದೊಂದಿಗೆ ಆರಂಭವಾಗುವ ಈ ಕಾದಂಬರಿಯು ಜೇನು ಸಾಕಾಣಿಕೆ , ಜೇನಿನ ವಿವಿಧ ತಳಿಗಳು, ಅವುಗಳ ವಿಶಿಷ್ಟ ಜೀವನಶೈಲಿ, ರುಚಿ ಮತ್ತು ಆಕಾರಗಳ ವೈವಿಧ್ಯವನ್ನು ಜೇನಿಗಿಂತಲೂ ರುಚಿವತ್ತಾಗಿ ತೇಜಸ್ವಿಯವರು ನಿರೂಪಿಸಿದ್ದಾರೆ. ಈ ಪ್ರಪಂಚದಲ್ಲಿ ಪ್ರಕೃತಿಗಿಂತಲೂ ರಮಣೀಯ, ರೋಚಕ, ನಿಗೂಢವಾದದ್ದು ಯಾವುದೂ ಇರಲು ಸಾಧ್ಯವಿಲ್ಲವೆಂದು ಕೇಳಿದ್ದೆನೇ ಹೊರತು ಅದು ಅಕ್ಷರಶಃ ನಿಜವೆಂದು ಮನದಟ್ಟಾದದ್ದು 'ಕರ್ವಾಲೊ' ಓದಿದ ಬಳಿಕವೇ. ನಾವು ನಮ್ಮ ದೈನಂದಿನ ಜೀವನದಲ್ಲಿ ಕಾಣುತ್ತಿರುವುದು ಒಂದು ಹೊದಿಕೆಯನ್ನು ಹೊದ್ದ ಪ್ರಕೃತಿಯನ್ನು ಮಾತ್ರ ಎನ್ನಬಹುದು. ಏಕೆಂದರೆ ನಾವು ಗಮನಿಸದ ಮಹಾ ಅದ್ಭುತಗಳು ಹೊದಿಕೆಯೊಳಗಿನ ಮಹಾ ಸಾಮ್ರಾಜ್ಯದಲ್ಲಿ ಅಡಗಿ ಕೂತಿದೆ ; ಹಾಗೆಯೇ ಲೋಕದ ಕಣ್ಣಿಗೆ ಕಾಣುವ ಮುನ್ನ ಅವು ಮರೆಯಾಗುವ ಸಾಧ್ಯತೆಯೂ ಇವೆ. ಹಲವು ಘಟನೆಗಳನ್ನು ವಿಶ್ಲೇಷಿಸುತ್ತಾ ತೇಜಸ್ವಿಯವರು ಈ ಕುರಿತು ಮನೋಜ್ಞವಾಗಿ ಓದುಗರನ್ನು ಎಚ್ಚರಿಸುವ ಶ್ರಮವನ್ನೂ ಮಾಡಿದ್ದಾರೆ. ನಿಸರ್ಗದ ಚೆಲುವಿಗೆ, ರೋಚಕತೆಗೆ ಹಲವಾರು ಪಾತ್ರಗಳನ್ನು ಪೋಣಿಸುತ್ತಾ ಅದರ ನಿಗೂಢತೆಯನ್ನೂ ವೈಶಿಷ್ಟ್ಯವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ತೇಜಸ್ವಿಯವರು. ಈ ಕಾದಂಬರಿಯನ್ನು ಇನ್ನು ಯಾರೇ ಬರೆದಿದ್ದರೂ ಈ ಮಟ್ಟಿನ ಪ್ರಬುದ್ಧತೆ, ಸ್ಪಷ್ಟತೆ, ವೈಶಿಷ್ಟ್ಯ ಇರುತ್ತಿರಲಿಲ್ಲ. ಹಾಸ್ಯದ ಮೂಲಕವೇ ಹಲವಾರು ಚಿಂತನಾರ್ಹ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸಿದ ತೇಜಸ್ವಿಯವರ ನಿರೂಪಣಾ ಶೈಲಿಗೆ ತಲೆದೂಗಲೇ ಬೇಕು. ೪೫ ವರ್ಷಗಳಿಂದಲೂ 'ಕರ್ವಾಲೊ'ಗಿರುವ ಜನಮನ್ನಣೆ, ಪ್ರಸಿದ್ಧಿಗೆ ಯಾವುದೇ ಕೊರತೆ ಆಗಲಿಲ್ಲವೆಂದರೆ ಅದಕ್ಕೆ ಅದರ ಸರಳ ಭಾಷೆ ಮತ್ತು ನಿರೂಪಣಾ ಶೈಲಿಯೇ ಕಾರಣ. ೨೦೨೫ ರ ಹೊತ್ತಿನಲ್ಲೂ ಕರ್ವಾಲೊ ಅಲ್ಪವೂ ಬೋರು ಹೊಡೆಸದೆ , ಹಳಸದೆ ಇನ್ನೂ ಅಭಿಮಾನಿಗಳನ್ನು ಗಳಿಸುತ್ತಲೇ ಇದೆ. ಕಾದಂಬರಿಯ ಪ್ರತೀ ಸಾಲುಗಳೂ ಎಷ್ಟೊಂದು ನೈಜವಾಗಿ ಮೂಡಿಬಂದಿದೆಯೆಂದರೆ ಓತಿಕ್ಯಾತದ ಅನ್ವೇಷಣೆಯಲ್ಲಿ ನಾನೂ ಅವರಲ್ಲೊಬ್ಬಳಾಗಿ ಬಿಟ್ಟಿದ್ದೆ. ಪ್ರತೀ ಪಾತ್ರದ ಜವಾಬ್ದಾರಿಗಳನ್ನೂ ಜಂಜಾಟಗಳನ್ನೂ ಚಡಪಡಿಕೆಯನ್ನೂ ನಾನೊಬ್ಬಳೇ ಹೇರಿಕೊಂಡಂತಿದ್ದೆ. ಈ ಕಾದಂಬರಿಯು ಹಾಸ್ಯಮಯ ಶೈಲಿಯಲ್ಲಿ ಮಹತ್ವವಾದ ಕಥಾವಸ್ತುವಿನೊಂದಿಗೆ ಓದುಗರಿಗೆ ಸಖತ್ ಮನರಂಜನೆಯನ್ನು ನೀಡುತ್ತದೆ. ಅದಕ್ಕೂ ಮಿಗಿಲಾಗಿ ಹಲವಾರು ಮಂದಿ ಕಂಡೇ ಇರದ ಇನ್ನು ಕಾಣಲೂ ಸಾಧ್ಯವಿರದ ಪರಿಸರದ ಕೌತುಕವನ್ನು ಕಣ್ಣಿಗೆ ಕಟ್ಟುವಂತೆ ಓದುಗನ ಮುಂದಿಡುತ್ತದೆ. ಜೊತೆಗೆ ಹಲವು ತಲೆಮಾರುಗಳಿಗೆ ಸಾಕೆನಿಸುವಷ್ಟು ಸಂಶೋಧನೆಗಳಿಗೆ ಕಿಚ್ಚು ಹಚ್ಚುವ ಮಹತ್ಕಾರ್ಯವನ್ನೂ ಮಾಡಿ ಕರ್ವಾಲೊ ಸಾಹೇಬರಿಗಿಂತಲೂ ಹೆಚ್ಚಿನ ಸಾಮಾಜಿಕ, ಪರಿಸರ ಕ್ರಾಂತಿಗೆ ಮುನ್ನುಡಿಯಾಗಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಕಾದಂಬರಿ ತುಂಬಾ ಮಂದಣ್ಣನ ತರ್ಲೆ ಸಮಾಚಾರಗಳು ಸುಂದರವಾಗಿ ಚಿತ್ರಿತವಾಗಿದೆ. ವಾಸ್ತವದಲ್ಲಿ ಆತನೇ ಈ ಕಾದಂಬರಿಯ ಕೇಂದ್ರ ಬಿಂದು ಎನ್ನಬಹುದು . ಕಾರಣ ಕರ್ವಾಲೊ ಸಾಹೇಬರ ಅನ್ವೇಷಣೆಗಳಿಗೆ ಬತ್ತಿಯಿರಿಸಿದ್ದೇ ಆತ. ಕರ್ವಾಲೊ ಸಾಹೇಬರೇ ಹೇಳುವಂತೆ ಅವನೊಬ್ಬ 'ಹುಟ್ಟಾ ನ್ಯಾಚುರಲಿಸ್ಟ್'. ಕರ್ವಾಲೊ ಓದಿದವರಿಗೆ ಮಂದಣ್ಣನ ಮದುವೆ ಸನ್ನಿವೇಶ ಮಾತ್ರ ಮರೆಯಲು ಸಾಧ್ಯವೇ ಇಲ್ಲ. ಲಕ್ಷ್ಮಣನ ಅತಿರೇಕದ ಮಾತಿಗೆ ಮಾರಾಮಾರಿಯಾಗಿ ನಿಂತೇ ಹೋಗುವಂತಿದ್ದ ಮಂದಣ್ಣನ ಮದುವೆ ಪ್ರಭಾಕರನ ಕ್ಯಾಮೆರಾ ಕೃಪೆಯಿಂದಾಗಿ ಸುಸೂತ್ರವಾಗಿ ನಡೆದದ್ದು ಹಾಸ್ಯಮಯವಾಗಿದೆ. ಮಂದಣ್ಣನ ಬ್ಯಾಂಡಿನ ಸದ್ದಿಗೆ ಮಂತ್ರಿಗಳಿಗೆ ಜೇನು ಕಡಿದದ್ದೂ ಮುಂದೆ ಅವರಿಗೆ ವಾಂತಿ ಬೇಧಿಯಾದದ್ದೂ ಮನಸ್ಸಿನಲ್ಲಿ ಉಳಿಯುತ್ತದೆ. ಕರ್ವಾಲೊ ಸಾಹೇಬರು ಮತ್ತು ಮಂದಣ್ಣನ ಗೆಳತನ , ಅವರಿಬ್ಬರ ಕುರಿತು ಊರು ತುಂಬಾ ಹರಡಿರುವ ಗಾಸಿಪ್ ಗಳು, ಪ್ರಕೃತಿಯೆಡೆಗಿನ ಅಸಡ್ಡೆ ಇವೆಲ್ಲವೂ ಸಾಮಾಜಿಕ ಜೀವನದ ವಾಸ್ತವಕ್ಕೂ ಜಾತಿ, ಪದವಿ, ಸ್ಥಾನಮಾನಗಳಿಗೆ ತಕ್ಕಂತಿರುವ ಜನರ ಮಾನಸಿಕ ಭಿನ್ನತೆಗಳಿಗೂ ಕನ್ನಡಿ ಹಿಡಿದಿದೆ. ಕರ್ವಾಲೊ ಸಾಹೇಬರ ಅನ್ವೇಷಣಾ ತಯಾರಿ, ಅವರಿಗಿರುವ ಅಗಾಧ ಜ್ಞಾನ, ಪರಿಸರದೆಡೆಗಿನ ಕಾಳಜಿ ಇವುಗಳೆಲ್ಲಾ ಅವರು ಮೇಲೆ ಭಕ್ತಿ - ಗೌರವ ಹುಟ್ಟಿಸುತ್ತದೆ. ಹಾಗೆಯೇ ಗರ್ಮಿ ಕರಿಯಪ್ಪನ ಪ್ರಸಂಗಗಳೂ ನಗೆಯುಕ್ಕಿಸುತ್ತದೆ. ಪ್ರಭಾಕರ, ಕಿವಿ, ಎಂಗ್ಟ, ಲಕ್ಷ್ಮಣ ಮುಂತಾದವರೂ ಮನಸ್ಸಿನಲ್ಲಿ ಉಳಿಯುತ್ತಾರೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಕರ್ವಾಲೊ ಪ್ರತಿಯೊಬ್ಬರೂ ಓದಬೇಕಾದ ಅದ್ಭುತ ಕಾದಂಬರಿ. ಆದರೂ ಮುಖ್ಯವಾಗಿ ಪರಿಸರದೆಡೆಗೆ ಅಷ್ಟಾಗಿ ಆಸಕ್ತಿ ಇಲ್ಲದವರು ಈ ಕಾದಂಬರಿಯನ್ನು ಓದಲೇಬೇಕು. ಏಕೆಂದರೆ, ಈ ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಪ್ರಕೃತಿಯ ಮೇಲೆ ಖಂಡಿತ ಆರಾಧನೆ ಮೂಡುತ್ತದೆ. ಅಷ್ಟೊಂದು ಉತ್ಕೃಷ್ಟವಾಗಿ ಈ ಕೃತಿಯು ರಚಿತವಾಗಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

55
Votes
350
Views
7 Months
Since posted

Voting Closed!

Scroll to Top