Submission 1875

ಪುಸ್ತಕದ ಶೀರ್ಷಿಕೆ: ನದಿ ದಾಟಿ ಬಂದವರು

ಪುಸ್ತಕದ ಲೇಖಕರು: ಶಶಿಧರ ಹಾಲಾಡಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸಾವಿತ್ರಿ ಶ್ಯಾನುಭಾಗ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕರಾವಳಿ,ಮಲೆನಾಡಿನ ಕಾಡಿನ ಸೌಂದರ್ಯವನ್ನು ವರ್ಣಿಸುತ್ತಾ,ಅಲ್ಲಿನ ಸುತ್ತಮುತ್ತಲ ಹಳ್ಳಿಗಳಲ್ಲಿ ವಾಸಮಾಡುತ್ತಾ,ಕೃಷಿಪ್ರಧಾನ ಸಮಾಜದ ಬದುಕನ್ನು ಪರಿಚಯಿಸುತ್ತಾ ಸ್ವತಂತ್ರ ಪೂರ್ವ ಭಾರತಕ್ಕೆ ನಮ್ಮನ್ನು ಕೊಂಡೊಯ್ದು ಅಲ್ಲಿನ ಗೇಣಿಪದ್ಧತಿ,ಸ್ವಾತಂತ್ರ್ಯ ಪಡೆಯಲು ಜನರ ಉತ್ಸಾಹ,ಸ್ವತಂತ್ರ ಭಾರತದ ಪ್ರಗತಿ ಇವೆಲ್ಲ ಪರಿಚಯಿಸುತ್ತಾ 'ನದಿ ದಾಟಿ ಬಂದವರು' ಕಾದಂಬರಿ ನಮ್ಮನ್ನು ಆವರಿಸುತ್ತಾ ಹೋಗುತ್ತದೆ.ಈ ಮೊದಲು ಕಾಲಕೋಶ ಮತ್ತು ಅಬ್ಬೆ ಕಾದಂಬರಿ ಬರೆದಿರುವ ಶಶಿಧರ ಹಾಲಾಡಿಯವರ ೩ನೇ ಕಾದಂಬರಿಯಿದು. ನಾರಾಯಣ ಭಂಡಾರಿಯವರ ಮನೆಯಲ್ಲಿ ಗೇಣಿಗಿದ್ದ ಕುಯಿರನಾಯಕ ೨-೩ ವರ್ಷದಿಂದ ಗೇಣಿಕೊಡಲು ಸಾಧ್ಯವಾಗದೇ,ಅವನ ದಬ್ಬಾಳಿಕೆ,ಅವನ ಹೆಂಡತಿಯನ್ನು ಅಸಭ್ಯವಾಗಿ ನಡೆಸಲು ಪ್ರಯತ್ನಿಸುವ ಒಡೆಯರು,ಹೀಗೆ ಈ ಪರಿಸರದಿಂದ ಓಡಿಹೋಗಲು ನಿರ್ಧರಿಸಿ ನದಿ ದಾಟುವ ಕುಯಿರನಾಯಕನ ಮಡದಿ ಶೇಷಿಗೆ ಸ್ವಂತ ಅಣ್ಣ ಆಶ್ರಯ ನೀಡಲಾಗದಿದ್ದರೂ ಅವರಿಗೊಂದು ದಾರಿ ತೋರಿಸಿದನೇನೋ. ವೆಂಕಣ್ಣಯ್ಯನವರ ಆಶ್ರಯ ಪಡೆದು,ಅವರ ಮನೆಯಲ್ಲಿ ಗೇಣಿಗೆ ಸೇರಿ ಅವರ ಮನೆಯ ಹತ್ತಿರವಿರುವ ಗುಡಿಸಲು ಸೇರುವ ಕುಯಿರನಾಯಕನಿಗೆ ಊರ ಬಲ್ಲಾಳರು ಮೊದಲು ತಕರಾರು ತೆಗೆದಂತೆ ಎಣಿಸಿದರೂ ಸಹಾಯವನ್ನೇ ಮಾಡಿದರು.ಹೀಗೆ ಈ‌ ಕಥೆಯ ತುಂಬಾ ಆವರಿಸಿರುವ ಇವರ ಬದುಕು,ಸ್ವತಂತ್ರದ ನಂತರ ಬಂದ ಕಾನೂನು,ಅಂದಿನ ಶಿಕ್ಷಣ ವ್ಯವಸ್ಥೆ, ಸ್ವತಂತ್ರ ಸಿಕ್ಕಾಗ ಸಾಗುವ ಮೆರವಣಿಗೆ,ಊರಿನ ಮಹಾಲಿಂಗೇಶ್ವರ ದೇವಸ್ಥಾನ,ಕುಂದಾಪುರ ಸಂತೆಯ ವಿವರಣೆ (ಪಕ್ಕದ ಹತ್ತು ಹಳ್ಳಿಗಳಿಂದ ರೈತರೂ,ಗ್ರಾಹಕರೂ ಬಂದು ವ್ಯವಹಾರ ನಡೆಸುವ ಸ್ಥಳವೆಂದು ಪರಿಚಯವನ್ನು ಉತ್ತಮವಾಗಿ ವರ್ಣಿಸಿದ್ದಾರೆ)ಹೀಗೆ ಕಥೆ ನಮ್ಮನ್ನು ಸೆಳೆಯುತ್ತಾ ಅಂದಿನ ಬದುಕಿನ ಚಿತ್ರಣ ನೀಡುತ್ತಾ ಸಾಗುತ್ತದೆ. ಸಾಕಮ್ಮನ ಮಗಳು ಜಾನಕಿ ಓದಿನಲ್ಲಿ ಮುಂದಿದ್ದರೂ ಅವಳ ಶಿಕ್ಷಣವನ್ನು ಮುಂದೆ ಸಾಗಲು ಬಿಡದೇ,ಹೆಣ್ಣುಮಕ್ಕಳು ಇಷ್ಟು ಓದಿದರೆ ಸಾಕು,ಜಾಸ್ತಿ ಓದಿದರೆ ಅಷ್ಟು ಓದಿದ ಹುಡುಗನನ್ನು ಎಲ್ಲಿ ಹುಡುಕುವುದು ಎನ್ನುವ ತತ್ತ್ವ, ವಿಧವೆ ಅಕ್ಕ ಮನೆಯಲ್ಲಿಯೇ ಉಳಿದು ತಮ್ಮನಿಗೆ ಸಹಾಯ ಮಾಡುತ್ತಾ ಸಾಗುವುದು,ಮನೆಯಲ್ಲಿ ಸಿರಿತನವಿದ್ದರೂ ಸಿಹಿನೀರಿನ ಬಾವಿಯ ಮನೆಯಲ್ಲಿ ಹೆಂಡತಿಗೆ ಹೊಡೆದು ಕಹಿ ಅನುಭವ ನೀಡುವ ಪರಿಸರ,ಹೀಗೆ ಅಂದಿನ ಸ್ತ್ರೀಯರ ಪರದಾಟವನ್ನು ಎತ್ತಿ ತೋರಿಸುತ್ತಾ ಸಾಗುತ್ತಾರೆ.ಪುಸ್ತಕದ ಮುಖಪುಟ ನೋಡಿ ಅದರ ಸಾಹಿತ್ಯ ನಿರ್ಧರಿಸಬಾರದು,ಎಂಬಂತೆ ದೊಡ್ಡ ಮನೆಯಲ್ಲಿ ಸಣ್ಣ ಮನಸಿನವರೂ,ಸಣ್ಣ ಮನೆಯಲ್ಲಿ ದೊಡ್ಡ ಮನಸಿನವರು ಇದ್ದೀರಲೂ ಬಹುದಲ್ಲವೇ? ಸ್ವತಂತ್ರ ಬಂದ ನಂತರ ಎಲ್ಲರಿಗೂ ಶಿಕ್ಷಣ,ಮೂಡನಂಬಿಕೆಯಿಂದ ದೂರ ಸಾಗುವ ಜ್ಞಾನ,ಪ್ರಗತಿಪರ ಜೀವನ,ಹೀಗೆ ಕನಸು ಕಂಡು,ಗಾಂಧಿಯವರನ್ನು ನೋಡಿಬಂದು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿ,ಭಾರತಕ್ಕೆ ಸ್ವತಂತ್ರ ಬರಬೇಕೆಂದು ಕನಸು ಕಾಣುವ ವೆಂಕಣ್ಣಯ್ಯನವರು ಸ್ವತಂತ್ರ ಬಂದ ದಿನ ಜ್ವರ ಬಂದು ಮೆರವಣಿಗೆಯಲ್ಲಿ ಹೋಗಲಾಗದೇ ಮುಂದಿನ ವರ್ಷ ಲಾಡು ಮಾಡಿ ಎಲ್ಲರಿಗೂ ಹಂಚುವಾ ಎಂದು ಆಶಿಸುವ ಮನೋಭಾವ ನಮ್ಮನ್ನು ಸೆಳೆಯುತ್ತದೆ.ಮುಂದೆ ಅವರಿಗೆ ಲಾಡು ಮಾಡಿಸಲಾದೀತೆ?ಈ ಕುರಿತು ನೀವು ಕಾದಂಬರಿ ಓದಿಯೇ ಕಂಡುಕೊಳ್ಳಬೇಕಾದೀತು. ಬೆಳಿಗ್ಗೆ ಎದ್ದ ತಕ್ಷಣ ಕುಡಿಯುವ ಜೀರಿಗೆ ಕಷಾಯ,ಜ್ವರ,ನೆಗಡಿ,ಕೆಮ್ಮುಗಳಿಗೆ ಮಾಡುವ ಮನೆ ಔಷಧಿ,೩೦ ನಿಮಿಷದ ನಂತರ ಸಿಗುವ ದವಾಖಾನೆ ಅವರು ನೀಡುವ ಕೆಂಪು ಔಷಧ, ರೋಗ ಉಲ್ಬಣಿಸಿದರೆ ದೊಡ್ಡ ಆಸ್ಪತ್ರೆಗೆ ಹೋಗಿ ಎಂದು ಹೇಳುವ ವೈದ್ಯರು ಹೀಗೆ ಅಂದಿನ ಔಷಧ ಪದ್ಧತಿಯ ಪರಿಚಯ ನಮಗೆ ಸಿಗುತ್ತದೆ,ಇಂದಿನ ಆಧುನಿಕ ವೈದ್ಯಕೀಯ ಪದ್ಧತಿಗೂ ಅಂದಿನ ಪದ್ಧತಿ,ಸೌಲಭ್ಯಗಳನ್ನು ಹೋಲಿಸಲೂ ಸಾಧ್ಯವಿಲ್ಲವೇನೋ.ಇಂದಿನ ಯುವಜನತೆಗೆ ಕಲ್ಪಿಸಿಕೊಳ್ಳಲೂ ಕಷ್ಟವೆಂದೆನಿಸುತ್ತದೆ. ತಂದೆಯ ಮರಣದ ನಂತರ ವಿದ್ಯಾಭ್ಯಾಸದಲ್ಲಿ ಮುಂದಿದ್ದರೂ ಮನೆಯಲ್ಲಿ ಅಮ್ಮ ಒಬ್ಬಳೇ ಆಗುತ್ತಾಳೆ,ಅವಳಿಗೆ ಒಬ್ಬಳೇ ಎಲ್ಲ ಕೆಲಸ ಮಾಡಲು ಕಷ್ಟವೆಂಬ ಭಾವದಲ್ಲಿ ಶಾಲಾಶಿಕ್ಷಣವನ್ನು ಮೊಟಕುಗೊಳಿಸಿ ತೋಟದ ಕೆಲಸ,ಮನೆಯ ಹಸು,ಕೋಣದ ಉಸ್ತುವಾರಿ ವಹಿಸಿಕೊಳ್ಳುವ ಸತ್ಯ,ಅವರ ಮಾವ,ಅಮ್ಮ ಕೊನೆಗೆ ಶಾಲೆಯ ಮುಖ್ಯೋಪಾಧ್ಯಾಯರು ಖುದ್ದು ಮನೆಗೆ ಬಂದು ಕರೆದರೂ ಮನಸ್ಸು ಬದಲಾಯಿಸದೇ ಮನೆಗಾಗಿ ಯಜಮಾನಿಕೆ ವಹಿಸಿಕೊಂಡು ಮನೆಗೆ ದಾರದೀಪವೇ ಆದನೇನೋ. ಮುಂದೆ ಹಳ್ಳಿಯಿಂದ ಪೇಟೆಗೆ ಹೋಗಿ ಅಲ್ಲಿ‌ ಮನೆ,ಬದುಕು ಕಟ್ಟಿಕೊಂಡ ನಂತರ 'ಉಳುವವನೇ ಒಡೆಯ' ಕಾನೂನು ಬಂದು ಜಮೀನನ್ನು ಕಳೆದುಕೊಳ್ಳುವ ಅವರ ಮನೆಯ ಪರಿಸರ ಹೀಗೆ ಅವರ ಜೀವನದಲ್ಲಿ ದುಃಖ ತಂದೀತೆ? ಮನೆಯವರೆಲ್ಲರೂ ಒಟ್ಟಿಗೆ ಒಂದೇ ಕಡೆ ಇರುವಂತೆ ಮಾಡೀತು ಎಂದು ಹರ್ಷಿಸಬೇಕೇನೋ! ಹೀಗೆ ಪ್ರತಿಪಾತ್ರವು ನಮ್ಮನ್ನು ಕಾಡುತ್ತಾ ಕಾದಂಬರಿಯ ಒಳಗೆ ನಾವು ನುಸುಳುತ್ತಾ ಮಹಾನದಿಯನ್ನು ದಾಡುತ್ತಾ ಸಾಗುವ ಈ ಕೃತಿಯನ್ನೊಮ್ಮೆ ಓದಿಯೇ ಸವಿಯಬೇಕು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಸ್ವತಂತ್ರ ಭಾರತದ ನಂತರ ದೇಶದ ಪ್ರಗತಿ ಸಾಧ್ಯವೆಂದು‌ ನಂಬಿ,ಮೂಡನಂಬಿಕೆಗಳಿಂದ ದೂರವಾಗಿ ಗ್ರಹಣ ನಡೆಯುತ್ತಿರುವಾಗ ಮನೆಯೊಳಗೆ ಕುಳಿತು ಊಟಮಾಡುವರು ಎಂದು ಸನ್ನಿವೇಶವನ್ನು ಕಲ್ಪಿಸಿಕೊಂಡು ಅಂದು ಹಲವಾರು ವರ್ಷಗಳ ಹಿಂದೆ ದೇಶದ ಪ್ರಗತಿಯ ಬಗ್ಗೆ ಯೋಚಿಸುವ ವೆಂಕಣ್ಣನವರು ಉತ್ತಮ ರಸ್ತೆ,ಶಿಕ್ಷಣ ವ್ಯವಸ್ಥೆ,ದೇಶದ ಸುಸ್ಥಿತಿಯ ಬಗ್ಗೆ ಅವರ ಕಲ್ಪನೆಯಲ್ಲಿ ನಮ್ಮ ದೇಶದ ಇಂದಿನ ಸುಧಾರಣೆಯ ಬಗ್ಗೆ ಮುನ್ನೋಟವಿತ್ತು. ದೇವಾಲಯದಲ್ಲಿ ಏನಾದರೂ ಕಾರ್ಯಕ್ರಮ,ಪೂಜೆಗೆ ಅವರ ಬಳಿ ಕಡಿಮೆಯಿದ್ದರೂ ಇದ್ದುದರಲ್ಲೇ ದೇವಾಲಯಕ್ಕೂ ನೀಡಿ ಅವರ ಖರ್ಚಿನಲ್ಲೇ ಸಮಾರಾಧನೆ ನಡೆಸಿ,ದೇವಾಲಯದ ಲೆಕ್ಕಾಚಾರವನ್ನೆಲ್ಲ ಇದ್ದುದರಲ್ಲೇ ನಿಭಾಯಿಸುತ್ತಾ ಸಾಗುತ್ತಿದ್ದ ಅವರ ನಾಯಕತ್ವ ನಮ್ಮನ್ನು ಸೆಳೆಯುತ್ತದೆ. ಕುಂದಾಪುರದ ಸೊಸೆಯಾದ ನನಗೆ ನಮ್ಮ ಕುಂದಾಪುರದ ಸಂತೆಯ,ಅಂದಿನ ಬಸ್ರೂರಿನ ವೈಭವವನ್ನು ಓದಿ ಪುಳಕಿತಗೊಂಡೆನು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಎಲ್ಲಾ ರೀತಿಯ ಓದುಗರೂ ಈ‌ ಪುಸ್ತಕವನ್ನು ಓದಲೇಬೇಕು.ಸ್ವಲ್ಪವೂ ಬೋರೆನಿಸದೇ ಓದಿಸಿಕೊಂಡು ಹೋಗುತ್ತದೆ.ಇಷ್ಟು ಬೇಗ ಈ‌ ಕಾದಂಬರಿ ಮುಗಿಯಿತೇ ಎಂದೂ ಎನಿಸುತ್ತದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

43
Votes
284
Views
7 Months
Since posted

Voting Closed!

Scroll to Top