ಪುಸ್ತಕದ ಶೀರ್ಷಿಕೆ: ಮತ್ತೊಂದು ಬಾಡದ ಹೂ
ಪುಸ್ತಕದ ಲೇಖಕರು: ಸಾಯಿಸುತೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ನ್ಯಾನ್ಸಿ ನೆಲ್ಯಾಡಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 3.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಸಾಯಿಸುತೆಯವರ ಕಾದಂಬರಿಗಳು ಒಂದಕ್ಕಿಂತ ಒಂದು ವಿಭಿನ್ನ. ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಹಿಡಿದ ಕನ್ನಡಿಯಾಗಿರುತ್ತವೆ. ಅಂತಹ ಕಾದಂಬರಿಗಳಲ್ಲಿ ಮತ್ತೊಂದು ಬಾಡದ ಹೂ ಕಾದಂಬರಿ ಕೂಡ ಒಂದು. ಕಥಾ ನಾಯಕ ಅಭಿಷೇಕ್ ವಿಭಾ ಎನ್ನುವ ಹುಡುಗಿಗೆ ಮುತ್ತುಕೊಟ್ಟ ವಿಷಯದ ಸುತ್ತ ಕಾದಂಬರಿ ಹೆಣೆಯಲಾಗಿದೆ. ಅಭಿಷೇಕ್ ಹಾಗೂ ವಿಭಾ ಪರಿಚಿತರೂ ಅಲ್ಲ. ಪ್ರೇಮಿಗಳೂ ಅಲ್ಲ ಆದರೆ ಅಭಿ, ವಿಭಾಳಿಗೆ ಮುತ್ತಿಡಲು ಕಾರಣವೇನು? ಎಂದು ಕಾಲೇಜಿನ ವಿದ್ಯಾರ್ಥಿಗಳಿಗೂ ಕುತೂಹಲ ಕೆರಳಿಸುತ್ತದೆ. ಅದೇ ಸಮಯಕ್ಕೆ ಇಬ್ಬರೂ ಕಾಲೇಜಿಗೆ ಬರದೇ ಇರುವುದು ಇನ್ನಷ್ಟು ಪುಷ್ಟಿ ನೀಡುತ್ತದೆ. ಈಗಿನ ಕಾಲದಲ್ಲಿಯಾದರೆ ಇದೆಲ್ಲ ಸಾಮಾನ್ಯ ವಿಷಯ. ಆದರೆ ಆಗ ಒಂದು ಹುಡುಗ ಒಂದು ಹುಡುಗಿಗೆ ಕಿಸ್ ಕೊಟ್ಟ ಎಂಬ ವಿಷಯ ತುಂಬಾ ದೊಡ್ದದಾಗಿ ಕಾಣುತ್ತದೆ. ಆದರೆ ಇಲ್ಲಿ ಘಟನೆ ನೋಡಿದವರು ಯಾರೂ ಇರುವುದಿಲ್ಲ. ಬರೀ ಅಂತೆ ಕಂತೆಯನ್ನು ನಂಬಿ ಸುದ್ದಿ ಹರಡಿಸಿರುತ್ತಾರೆ.ಇದು ಸಮಾಜದಲ್ಲಿ ನಡೆಯುವ ಕಥೆ ಕೂಡ. ಮಾಡಿದವನ ಪಾಪ ಆಡಿದವನ ಬಾಯಿಯಲ್ಲಿ ಎಂಬಂತೆ ಇಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ. ಇದರ ಸತ್ಯಾಂಶ ತಿಳಿಯಲು ಹೊರಡುವುದು ವಿದ್ಯಾರ್ಥಿ ನಾಯಕ ಶೈಲೇಂದ್ರ. ಅವನಿಗೆ ಅವನ ಗೆಳೆಯ ಅಭಿಯ ಮೇಲೆ ತುಂಬಾ ನಂಬಿಕೆ. ಅಲ್ಲದೇ ಆ ಹುಡುಗಿಗೂ ನ್ಯಾಯ ಕೊಡಿಸಬೇಕೆಂಬುದು ಅವನ ಉದ್ದೇಶ. ವಿಷಯ ಅಭಿ ತಂದೆ ತಾಯಿಗೆ ತಿಳಿದು ಅವರಿಗೆ ಮಗನ ಮೇಲೆ ಅಸಮಧಾನ ಉಂಟಾಗುತ್ತದೆ. ಆದರೆ ಆ ಒಂದು ಘಟನೆಯಿಂದ ನೋವು ಅನುಭವಿಸುವವಳು ಮಾತ್ರ ವಿಭಾ. ತಾಯಿ ಇಲ್ಲದ ವಿಭಾ ಕಾಲೇಜ್ ಓದಲು ಅತ್ತೆ ಮನೆಯಲ್ಲಿ ಇರುತ್ತಾಳೆ. ಅತ್ತೆ ಮಾವನಿಗೂ ಅವಳೆಂದರೆ ತುಂಬಾ ಪ್ರೀತಿ. ಆದರೆ ಅಭಿ ಮಾಡಿದ ಅವಾಂತರ ತಿಳಿದು ಅವಳನ್ನು ಕಾಲೇಜಿಗೆ ಕಳುಹಿಸದೆ ಊರಿಗೆ ಕಳುಹಿಸುತ್ತಾರೆ. ಶೈಲೇಂದ್ರ ತನ್ನ ಪತ್ತೆದಾರಿಕೆ ಆರಂಭ ಮಾಡಿ ವಿಭಾಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಪಡುತ್ತಾನೆ. ಅಲ್ಲದೇ ವಿಭಾ ಗೆಳತಿ ಮುಕ್ತಾ ಹಾಗೂ ಅವಳ ತಮ್ಮ ಈ ಸುದ್ದಿಯನ್ನು ಕಣ್ಣಾರೆ ಕಂಡಿದ್ದಾಗಿ ಅವಳ ತಮ್ಮ ಎಲ್ಲರಿಗೂ ವಿಷಯ ತಿಳಿಸಿದ್ದಾಗಿ ಮುಕ್ತಾ ಮನೆಗೆ ಬಂದಾಗ ತಿಳಿಯುತ್ತದೆ. ತನ್ನ ಗೆಳೆಯ ಈ ರೀತಿ ಮಾಡಿರುವುದಿಲ್ಲ ಎಂದು ಎನಿಸಿದ್ದ ಶೈಲೇಂದ್ರನ ನಂಬಿಕೆಯ ಗೋಪುರ ಕುಸಿಯುತ್ತದೆ. ಯಾಕೆಂದರೆ ಅವನಿಗೆ ಗೆಳೆಯನ ಮೇಲೆ ಒಂದು ರೀತಿಯ ಹುಚ್ಚು ನಂಬಿಕೆ ಇರುತ್ತದೆ. ಆದರೆ ತನ್ನ ಗೆಳೆಯ ಯಾಕೆ ಹಾಗೆ ಮಾಡಿದ ಎಂಬುದು ಅವನಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಅಭಿ ತಂದೆ ಮೇಘನಾಥ್ ಮಗನ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದರೂ ಎಂದೂ ಸಿಟ್ಟು ಮಾಡಿಕೊಂಡು ವಿಚಾರಿಸುವುದಿಲ್ಲ. ಬದಲಾಗಿ ವಿಷಯವನ್ನು ಶೈಲೇಂದ್ರನ ಮೂಲಕ ತಿಳಿದುಕೊಳ್ಳಲು ಪ್ರಯತ್ನ ಪಡುತ್ತಾರೆ. ಒಂದು ವೇಳೆ ಅವರಿಬ್ಬರೂ ಇಷ್ಟ ಪಟ್ಟಿದ್ದರೆ ಮದುವೆ ಮಾಡಿಸಲು ತಯಾರಿರುತ್ತಾರೆ. ಆದರೆ ತಾಯಿ ವಸುಂಧರಾ ಮಾತ್ರ ಅಂತಸ್ತು ನೋಡುತ್ತಾರೆ. ಇದು ಪ್ರಸ್ತುತ ಶ್ರೀಮಂತ ಮನೆಗಳಲ್ಲಿ ನಡೆಯುವ ಸಂಗತಿ. ಬಡವರು ಎಂದರೆ ಅವರಿಗೆ ಭಾವನೆಗಳೇ ಇಲ್ಲ ಎಂದು ಅಂದುಕೊಂಡಿರುತ್ತಾರೆ. ಹುಡುಗಿ ಮನೆಯವರು ಕಂಪ್ಲೇಂಟ್ ಕೊಟ್ಟರೆ ಹಣ ಕೊಟ್ಟು ಪ್ರಕರಣ ಇತ್ಯರ್ಥ ಮಾಡಿಸುವುದು ಎಂಬುದಾಗಿ ಹೇಳುವಾಗ ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣನ್ನು ಅರ್ಥ ಮಾಡಿಕೊಳ್ಳದೆ ಬರೇ ಅಂತಸ್ತು ನೋಡುವುದು ಬೇಸರ ಅನಿಸುತ್ತದೆ. ಹಣದಿಂದ ಎಲ್ಲವೂ ಸಾಧ್ಯ ಎಂಬ ಅವರ ಮನಸ್ಥಿತಿ ನೋವುಂಟು ಮಾಡುತ್ತದೆ. ಈ ಎಲ್ಲಾ ಘಟನೆಗಳ ಮಧ್ಯೆ ವಿಭಾಳನ್ನು ಅವಳ ಅತ್ತೆ ಮಾವ ಅವಳ ಮನೆಯಾದ ಅನುರಾಗಪುರಕ್ಕೆ ಕಳುಹಿಸಿ ಅವಳ ಚಿಕ್ಕಪ್ಪ ಗೋಪಾಲಕೃಷ್ಣರಿಗೆ ಮಾತ್ರ ವಿಷಯ ತಿಳಿಸಿ ಬರುತ್ತಾರೆ. ಗೋಪಾಲಕೃಷ್ಣರಿಗೆ ಅಣ್ಣ ಗಣಪತಿಯ ಮೇಲೆ ತುಂಬಾ ಭಕ್ತಿ. ಗಣಪತಿಯ ಒಬ್ಬಳೇ ಮಗಳು ತಾಯಿಯಿಲ್ಲದ ತಬ್ಬಲಿ ವಿಭಾಳ ಜವಬ್ದಾರಿಯನ್ನು ಗೋಪಾಲಕೃಷ್ಣ ಹಾಗೂ ಅವರ ಹೆಂಡತಿ ಕಾವೇರಿ ತೆಗೆದುಕೊಂಡಿರುತ್ತಾರೆ. ಅವರಿಬ್ಬರು ಕೊಡುವ ಪ್ರೀತಿ ನಿಜಕ್ಕೂ ಅದ್ಭುತ ಅನಿಸಿತು. ನಿಜವಾದ ತಂದೆ ತಾಯಿ ಕೊಡದ ಪ್ರೀತಿ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಕೊಡುವಾಗ ವಿಭಾ ನಿಜವಾಗಲು ಅದೃಷ್ಟೆ ಅನಿಸಿತು. ಜಗತ್ತಲ್ಲಿ ಕೆಲವು ಜನರು ಇಂತವರು ನೋಡಲು ಸಿಗುತ್ತಾರೆ. ಆದರೆ ಕೆಲವರು ಹಿಂಸೆ ಕೊಡುವವರು. ಅವಳ ಚಿಕ್ಕಪ್ಪ ಅವಳನ್ನು ತುಂಬಾ ಓದಿಸಲು ಪ್ರಯತ್ನ ಪಟ್ಟಿದ್ದು ಆದರೆ ಈ ಘಟನೆಯಿಂದ ಓದಲು ಸಾಧ್ಯವಾಗದಾಗ ಅವರು ಪಡುವ ನೋವು ಬೇಸರ ತರಿಸಿತು. ವಿಭಾಳಿ ಮದುವೆ ಮಾಡುವುದು ಒಳ್ಳೆಯದು ಎಂದು ನಿರ್ಧಾರಿಸಿ ಗಂಡು ಹುಡುಕುವಾಗ ಬಂದವನೇ ಯೋಗಿ.ಅವನ ಸ್ವಭಾವ ವಿಚಿತ್ರವಾದುದು. ಅವನಿಗೆ ಹೆಣ್ಣಿನ ನೋವು ನೋಡಿ ಖುಷಿ ಪಡುವ ವಿಚಿತ್ರ ಸ್ವಭಾವ. ಅವನ ಸ್ವಭಾವ ಒಂದು ರೀತಿ ಅಸಹ್ಯ ಎನಿಸುತ್ತದೆ. ಆದರೆ ಆ ಮದುವೆ ಮುರಿದು ಬೀಳುತ್ತದೆ. ಅವನ ಗುಣ ತಿಳಿದಾಗ ವಿಭಾ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ತುಂಬಾ ನೋವು ಪಡುತ್ತಾರೆ. ತಮ್ಮ ಹೆಣ್ಣು ಮಕ್ಕಳಿಗಿಂತ ವಿಭಾ ಮೇಲೆ ತೋರಿಸುವ ಪ್ರೀತಿ ನೋಡುವಾಗ ಇಂತಹ ವ್ಯಕ್ತಿಗಳು ಇದ್ದಾರ? ಅನಿಸಿದ್ದು ಸುಳ್ಳಲ್ಲ. ಮದುವೆ ಮುರಿದ ಆಘಾತದಲ್ಲಿ ವಿಭಾ ತಂದೆ ನಿಧನರಾಗುತ್ತಾರೆ. ನೊಂದ ವಿಭಾಳನ್ನು ಸಹಜ ಸ್ಥಿತಿಗೆ ತರಲು ಮನೆಯವರು ಮಾಡುವ ಪ್ರಯತ್ನವನ್ನು ಸುಂದರವಾಗಿ ನಿರೂಪಿಸಿದ್ದಾರೆ. ಗಣಪತಿಯ ಶಿಷ್ಯರಾದ ಬೆಂಜಮಿನ್ ವಿಭಾಳಿಗೆ ತನ್ನ ಆಫೀಸಲ್ಲಿ ಕೆಲಸ ಕೊಡಿಸಿ ಗುರುಗಳಿಗೆ ತಮ್ಮ ಗೌರವವನ್ನು ಸಲ್ಲಿಸುತ್ತಾರೆ. ಅವರ ಗುರುಭಕ್ತಿ ನಿಜವಾಗಲೂ ಮೆಚ್ಚುವಂತದ್ದು. ಅಲ್ಲಿ ಜಾತಿ ಬೇಧವಿಲ್ಲದೆ ಒಬ್ಬ ತಂದೆಯ ಸ್ಥಾನದಲ್ಲಿ ಕಾಣುತ್ತಾರೆ ಬೆಂಜಮಿನ್ ವಿಭಾಳಿಗೆ. ಇತ್ತ ಅಭಿಗೆ ಅವನ ತಂದೆಯ ಗೆಳೆಯರ ಮಗಳು ಹಾಗೂ ಅವನದೇ ಕಾಲೇಜಿನ ಗೆಳತಿಯಾದ ಮಧುಬಾಲಾ ಮದುವೆ ಮಾಡಿಕೊಳ್ಳಲು ಕೇಳಿಕೊಂಡಾಗ ನಯವಾಗಿ ನಿರಾಕರಿಸುತ್ತಾನೆ. ಅಲ್ಲದೇ ಮಾವನ ಮಗಳು ರೋಮಾಳನ್ನು ಕೊಡಲು ಮಾವ ಮುಂದಾದಾಗ ಅವಳನ್ನು ನಿರಾಕರಿಸುತ್ತಾನೆ. ಆದರೆ ಅವನ ಮನಸಲ್ಲಿ ಈಗ ವಿಭಾ ಸೇರಿಕೊಂಡಿದ್ದಳು. ಯಾವುದೇ ಪರಿಚಯವಿಲ್ಲದ ವಿಭಾ ಅವನನ್ನು ಒಂದೇ ನೋಟದಲ್ಲಿ ಸೆಳೆದಿದ್ದಳು. ಅದೇ ಅವನು ಮುತ್ತಿಡಲು ಕಾರಣವಾಗಿತ್ತು. ಮೊದಲ ಬಾರಿ ಮುತ್ತಿಡುವಾಗ ಅವನು ಅವನಾಗಿರುವುದಿಲ್ಲ. ಸಂಪೂರ್ಣವಾಗಿ ವಿಭಾಳಲ್ಲಿ ಸೇರಿಕೊಂಡಿದ್ದ. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಇಲ್ಲದೆ ಅವಳಿಗೆ ಮುತ್ತಿಟ್ಟಿದ್ದ. ವಿಭಾಳನ್ನು ನೋಡಲು ಪರಿತಪಿಸುತ್ತಿದ್ದ ಅಭಿಗೆ ಬೆಂಜಮಿನ್ ಆಫೀಸಲ್ಲಿ ಮತ್ತೆ ಸ್ವರ್ಗ ಸಿಕ್ಕಿದಂತಾಗುತ್ತದೆ. ಅವಳನ್ನು ಸೆಳೆಯಲು ಮಾಡುವ ಪ್ರಯತ್ನ , ಕೊನೆಗೆ ತಾನು ಮುತ್ತಿಟ್ಟ ಕಾಲೇಜ್ ಎದುರಿನ ಜಾಗಕ್ಕೆ ಹೋಗಿ ಅಲ್ಲಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. "ಪ್ರವಾಹದಲ್ಲಿ ನೀನು ಸೆಳೆತವಾದರೆ ನಾನು ಜಡ ವಸ್ತು ಆಗಿ ಬಿಟ್ಟೆ" ಎಂಬ ಅಭಿಯ ಮಾತು ಅವಳನ್ನು ಮೂಕವಿಸ್ಮಿತಳನ್ನಾಗಿ ಮಾಡುತ್ತದೆ. ಪ್ರೀತಿ ಎಂದರೆ ಹಾಗೆ ಯಾರಲ್ಲಿ ಯಾವಾಗ ಹುಟ್ಟಬಹುದು ಎಂದು ಹೇಳಲು ಆಗುವುದಿಲ್ಲ. ಅಭಿ ಎಷ್ಟೋ ಹುಡುಗಿಯರ ಜೊತೆ ತಿರುಗಾಡಿರಬಹುದು ಆದರೆ ಅವನ ಮನಸಲ್ಲಿ ಯಾರ ಮೇಲೂ ಪ್ರೀತಿ ಮೂಡಿರಲಿಲ್ಲ. ಆದರೆ ವಿಭಾಳನ್ನು ಕಂಡ ಮೊದಲ ಕ್ಷಣ ಅವನು ಅವನಾಗಿರಲಿಲ್ಲ. ಹಿಂದೆಂದು ಮೂಡದ ಮಧುರ ಭಾವ ಮೂಡಿತ್ತು. ಕೊನೆಗೆ ಅವನ ಪ್ರೀತಿ ಸೋಲದೆ ಅವನಿಗೆ ಎಲ್ಲರೂ ಸೇರಿ ಸಿಗುವಂತೆ ಮಾಡುತ್ತಾರೆ. ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ ಎಂದು ತೋರಿಸುವ ಸುಂದರ ಕಾದಂಬರಿ ನೀಡಿದ ಸಾಯಿಸುತೆಯವರಿಗೆ ವಂದನೆಗಳು. ನ್ಯಾನ್ಸಿ ನೆಲ್ಯಾಡಿ
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಸಾಮಾಜಿಕ ಹಾಗೂ ಪ್ರೇಮ ಕಾದಂಬರಿ ಇಷ್ಟ ಪಡುವವರಿಗೆ ಸೂಕ್ತ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.