Submission 1766

ಪುಸ್ತಕದ ಶೀರ್ಷಿಕೆ: ಮಂಕುತಿಮ್ಮನ ಕಗ್ಗ

ಪುಸ್ತಕದ ಲೇಖಕರು: ಡಿ.ವಿ.ಜಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ರಾಘವೇಂದ್ರ ಸಿ.ಎಸ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಮಂಕುಕವಿದ ಮನಸ್ಸುಗಳಿಗೆ ಜೀವಚೈತನ್ಯ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕನ್ನಡ ಸಾಹಿತ್ಯದ ಸಾರಸತ್ವಲೋಕದ ಶ್ರೇಷ್ಠ ಬರಹಗಾರರ ಸಾಲಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವ, ಹೃದಯ ಮಂದಿರದಲ್ಲಿ ತಮ್ಮ ಘನತೆಯ ಚಾಪು ಮೂಡಿಸಿದ ಅದ್ವಿತೀಯ ಸಾಹಿತಿ ಡಿವಿಜಿ ಅವರು. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಎಂಬುದು ಅವರ ಪೂರ್ಣಹೆಸರಾದರೂ ಡಿವಿಜಿ ಎಂಬ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದಾರೆ. ಕೀರ್ತಿ, ಪ್ರಶಸ್ತಿ, ಪ್ರಸಿದ್ಧಿ, ಅಧಿಕಾರದ ಬೆನ್ನುಹತ್ತದೆ ಜೀವನದುದ್ದಕ್ಕೂ ಸ್ವಾಭಿಮಾನಿಯಾಗಿ ಬಾಳಿ ಬದುಕಿ ಕಿರಿಯರಿಗೆ ಮಾದರಿಯಾಗಿ‌ ನಿಂತವರು. ಹಣ, ಆಸ್ತಿಗಳ ವ್ಯಾಮೋಹಕ್ಕೆ‌ ಒಳಗಾಗದ ಮೇರುಪ್ರತಿಭೆ. ಅವರ ಮೇರು ವ್ಯಕ್ತಿತ್ವದಿಂದ ಅರಳಿದ ಕೃತಿ ಕುಸುಮಗಳು ನೂರಾರು. ಅವುಗಳಲ್ಲಿ ಮಂಕುತಿಮ್ಮನ ಕಗ್ಗ ಡಿವಿಜಿ ಅವರ ಅತ್ಯುತ್ತಮ ಕೃತಿ. ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು ಎಂಬಂತೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ ಎಂದೇ ಹೆಸರುವಾಸಿಯಾಗಿದೆ. ಈ ಕೃತಿಯಲ್ಲಿ ನಾಲ್ಕು ಸಾಲಿನ ಮುಕ್ತಕಗಳಂತೆ ಒಟ್ಟು ೯೪೫ ಪದ್ಯಗಳಿವೆ. ಬದುಕಿನ ಎಲ್ಲ ಸಾರಗಳನ್ನು ಹಿಡಿದಿಟ್ಟ ಹೆಗ್ಗಳಿಕೆ ಈ ಕೃತಿಗೆ ಸಲ್ಲುತ್ತದೆ. ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ ಜೀವನ ಪರೀಕ್ಷೆ ಬಂದಿದಿರು ನಿಲುವನಕ ಭಾವಮರ್ಮಂಗಳೇಳುವುವಾಗ ತಳದಿಂದ ದೇವರೇ ಗತಿಯಾಗ – ಮಂಕುತಿಮ್ಮ ಪ್ರತಿಯೊಬ್ಬರು ಸಾಧುಗಳಂತೆ (ಒಳ್ಳೆಯವರಂತೆ), ನೀತಿಯನ್ನು ಉಪದೇಶಿಸುವರಂತೆ ಕಂಡುಬರುತ್ತಾರೆ. ಆದರೆ ಅವರ ಜೀವನದಲ್ಲಿ ಸಮಸ್ಯೆಗಳು ಬಂದಾಗ ಏನು ಮಾಡಬೇಕೆಂದು ಅರಿಯದೇ ದೇವರ ಮೊರೆ ಹೋಗುತ್ತಾರೆ ಎಂದು ಡಿವಿಜಿ ಅವರು ಈ ಮುಕ್ತಕದಲ್ಲಿ ಹೇಳಿದ್ದಾರೆ. ಬಹುಶಃ ಇಡೀ ಪ್ರಪಂಚದಲ್ಲಿ ಬಿಟ್ಟಿಯಾಗಿ ಸಿಗುವುದು ಎಂದರೆ ಅದು ಸಲಹೆ ಮಾತ್ರವೇ ಆಗಿರುತ್ತದೆ. ಪರರಿಗೆ ತೊಂದರೆಯಾದಾಗ ತಮಗೆ ತಿಳಿದ/ ತಿಳಿಯದಿದ್ದ ವಿಚಾರಗಳನ್ನು ಹೇಳುತ್ತಾರೆ. ತಾವೇ ಜ್ಞಾನಿಗಳಂತೆ ಉಚಿತವಾಗಿ ಸಲಹೆಗಳನ್ನು ನೀಡುತ್ತಾರೆ. ಬೇರೆಯವರ ತಪ್ಪುಗಳನ್ನು, ದೋಷಗಳನ್ನು ಎತ್ತಿ ತೋರಿಸುವ ನಾಗರೀಕತೆಯ ಪೋಷಾಕನ್ನು ಧರಿಸಿರುವ ಮಹನೀಯರಿಗೆ ಸಮಸ್ಯೆ ಬಂದಾಗ ಏನು ಮಾಡಬೇಕೆಂದು ತೋಚದೇ ಕಂಗಲಾಗುತ್ತಾರೆ. ಆಗ ಅವರ ಪಾಲಿಗೆ ಆ ಭಗವಂತನೇ ಗತಿಯಾಗುತ್ತಾನೆ ಎನ್ನುವ ಮೂಲಕ ಸಾಧ್ಯವಾದರೆ ಇಲ್ಲಸಲ್ಲದ ಸಲಹೆಗಳನ್ನು ನೀಡುವುದಕ್ಕಿಂತ ಕಷ್ಟ / ಸಮಸ್ಯೆಯಲ್ಲಿ ಇರುವವರಿಗೆ ಕೈಲಾದ ಸಹಾಯವನ್ನು ಮಾಡಿ ಎಂಬ ಬೋಧನೆಯನ್ನು ಇಲ್ಲಿ ತಿಳಿಸಿದ್ದಾರೆ. ಸಮಸ್ಯೆಗಳು ಎದುರಾದಾಗ ಮೊದಲು ಬೇಕಿರುವುದು ಸಹಾಯವೇ ಹೊರತು ಉಪದೇಶವಾಗಲೀ, ಬೋಧನೆಯಾಗಲೀ ಅಲ್ಲ. ಹಸಿವಾದಾಗ ಆಹಾರವನ್ನು ನೀಡಬೇಕೆ ವಿನಃ ಪಾಕಶಾಸ್ತ್ರದ ಪುಸ್ತಕವನ್ನಲ್ಲ ಎಂಬ ಕವಿವಾಣಿಯಂತೆ ಬದುಕು ತಂದೊಡ್ಡುವ ಪರೀಕ್ಷೆಯಲ್ಲಿ ಸಮಸ್ಯೆಗಳು ಎದುರಾದಾಗ ಕೈಲಾದ ಸಹಾಯವನ್ನು ಮಾಡಿ, ಅದನ್ನು ಹೊರತುಪಡಿಸಿ ಸಲಹೆ ನೀಡುವುದರಿಂದ ಕಷ್ಟದಲ್ಲಿರುವವರಿಗೆ ಮತ್ತಷ್ಟು ನೋವುಂಟಾಗುತ್ತದೆ. ಅವರ ಕಷ್ಟ ನಿಮಗೆ ಅರಿವಾಗುವುದಿಲ್ಲ. ಅದೇ ಕಷ್ಟ ನಮಗೆ ಎದುರಾದಾಗ ಆ ಸಮಸ್ಯೆಯ ಅರಿವು ನಮ್ಮದಾಗುತ್ತದೆ ಎಂದು ಈ ಮುಕ್ತಕದಲ್ಲಿ ತಿಳಿಸಲಾಗಿದೆ. ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ । ಅವರೆಷ್ಟು ಯಶವಂತರ್ ಎನುವ ಕರುಬಿನಲಿ ।। ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು ಶಿವನಿಗೆ ಕೃತಜ್ಞತೆಯೆ? – ಮಂಕುತಿಮ್ಮ ಪಾಲಿಗೆ ಬಂದದ್ದು ಪಂಚಾಮೃತ ಎಂಬುದನ್ನು ಮರೆತು ಜನರು ತಮ್ಮ ಜೀವನವನ್ನು ಮತ್ತೊಬ್ಬರ ಜೀವನದೊಂದಿಗೆ ಹೋಲಿಕೆ ಮಾಡಿಕೊಂಡು ಅವರಂತೆ ನಾವಿಲ್ಲ ಎಂದು ಪರಿತಪಿಸುತ್ತಾರೆ. ಅಂತಹ ಜನರಿಗೆ ಸಿಹಿಯೊಂದಿಗೆ ತಿಳಿಯದಂತೆ ಔಷಧಿ ಮಿಶ್ರಣ ಮಾಡಿಕೊಟ್ಟಂತೆ ಈ ಮುಕ್ತಕದೊಳಗೆ ಬುದ್ಧಿವಾದವನ್ನು ತಿಳಿಸಲಾಗಿದೆ. ಮತ್ಸರ / ಕರುಬುವಿಕೆ ಎಂಬುದು ಬೆಂಕಿ ಇದ್ದ ಹಾಗೆ. ನಾವು ಒಬ್ಬರನ್ನು ನೋಡಿ ಮತ್ಸರ ಪಟ್ಟರೆ ಅದು ಮೊದಲಿಗೆ ಹಾನಿ ಉಂಟು ಮಾಡುವುದು ನಮಗೆ ಹೊರತು ಅನ್ಯರಿಗಲ್ಲ. ಅವರೆಷ್ಟು ಶ್ರೀಮಂತರು, ಇವರೆಷ್ಟು ಬಲವಂತರು, ಅವರೆಷ್ಟು ಯಶಸ್ಸನ್ನು ಪಡೆದವರು ಎಂದು ಅವರಿವರನ್ನು ನೋಡುತ್ತಾ ಅವರಂತೆ ನಮಗಿಲ್ಲವಲ್ಲ ಎಂದು ಪರಿತಪಿಸುವ ಬದಲು ನಿನಗೆ ಸಿಕ್ಕ ಜೀವನವನ್ನು ಸಂತೃಪ್ತಿಯಿಂದ ಅನುಭವಿಸುವ ಎನ್ನುವ ಮೂಲಕ ಇಲ್ಲ ಎಂಬ ಕೊರಗುವಿಕೆಯನ್ನು ಬಿಟ್ಟು ಇರುವುದರಲ್ಲಿ ತೃಪ್ತಿಯನ್ನು ಅನುಭವಿಸುವ ಸಾಧ್ಯತೆಯನ್ನು ರೂಢಿಸಿಕೊಂಡು ಕರುಬುವ ಗುಣವನ್ನು ಬಿಟ್ಟರೆ ಆ ಪರಮಾತ್ಮನಿಗೆ ಕೃತಜ್ಞನಾದಂತೆ ಎಂದಿದ್ದಾರೆ. ನಮಗೆ ಸಿಕ್ಕ ಜೀವನ ಮತ್ತೊಬ್ಬರ ಬದುಕಿನ ಕನಸು ಆಗಿರಬಹುದು ಅವರಿಗೆ ಸಿಗದೆ ಇರುವುದು ನಿನಗೆ ಸಿಕ್ಕಿರಬಹುದು. ಆದ್ದರಿಂದ ನಿನ್ನ ಬದುಕನ್ನು ನೋಡಿ ಸಂತೋಷವನ್ನು ಪಡೆದುಕೊಂಡು ಅನ್ಯರಿಗೆ ಸಿಕ್ಕ ಅವಕಾಶ, ಸವಲತ್ತುಗಳು ನನಗೆ ದೊರಕಲಿಲ್ಲ ಎಂಬುದನ್ನು ನೆನೆದು ಕರುಬುವುದನ್ನು ಬಿಟ್ಟರೆ ನಮ್ಮೊಳಗಿರುವ ಕಾಣದ ಆ ಶಿವನನ್ನು ಮೆಚ್ಚಿಸಿದಂತೆಯೇ ಸರಿ ಎಂಬ ಈ ಮುಕ್ತಕ ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಅನ್ವಯವಾಗಬಲ್ಲದಾಗಿದೆ. ಒಲ್ಲೆನೆನದಿರ್ ಬಾಳನ್ ಒಲವದೇನೆನ್ನದಿರು ಉಲ್ಲಸಕೆಡೆಮಾಡುನಿನ್ನಿನಾದಿನಿತು ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ ಎಲ್ಲಕಂ ಸಿದ್ಧನಿರು- ಮಂಕುತಿಮ್ಮ ಜೀವನ ಎಂದರೆ ಹೋರಾಟ ಇದ್ದ ಹಾಗೆ. ಅಂತಹ ಜೀವನವನ್ನು ಬೇಡ ಎಂದು ಹೇಳದಿರು. ಪ್ರೀತಿಯಿಂದ ಉಲ್ಲಾಸದಿಂದ, ಸಂತೋಷದಿಂದ, ಕೆಚ್ಚೆದೆಯಿಂದ ನಿಂತು ಏನೇ ಬಂದರೂ ಎಲ್ಲವನ್ನು ಸ್ವೀಕರಿಸುವ ಅಥವಾ ಎದುರಿಸಿ ನಿಲ್ಲಲ್ಲು ಸಿದ್ಧನಿರು ಎಂದಿದ್ದಾರೆ. ಕೆಲವರಿಗೆ ಈ ಜೀವನ ಸಾಕಪ್ಪ ಸಾಕು ಅಂತ ಅನಿಸಿರುತ್ತದೆ. ಬದುಕಿನಲ್ಲಿ ಬರುವ ಅಥವಾ ಎದುರಾಗುವ ಕಷ್ಟಗಳನ್ನು ನೋಡಿ ಜರ್ಜರಿತರಾಗಿ ಬದುಕೇ ಬೇಡವೆಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಅಂತಹ ಜನರಿಗೆ ಗುಂಡಪ್ಪನವರು ಈ ಬದುಕನ್ನು ಬೇಡ ಎನ್ನಬೇಡ ಪ್ರೀತಿಯಿಂದ, ಸಂತೋಷದಿಂದ, ಏನೇ ಎದುರಾದರೂ ಅದನ್ನು ಎದುರಿಸಿ ನಿಲ್ಲುವಂತಹ ಕೆಚ್ಚೆದೆಯನ್ನು ರೂಢಿಸಿಕೊಳ್ಳಿ. ಎಲ್ಲದಕ್ಕೂ ಸಿದ್ಧವಾಗಿರಿ ಎನ್ನುವ ಮೂಲಕ ಸಕರಾತ್ಮಕ ಧೋರಣೆಯನ್ನು ಬೆಳೆಸಿಕೊಳ್ಳಬೇಕು, ಬದುಕೆಂಬ ಈ ಪಯಣವನ್ನು ಸಂತೃಪ್ತಿಯಿಂದ ಅನುಭವಿಸಬೇಕು ಎಂಬ ಸಾರವನ್ನು ತಿಳಿಸಿದ್ದಾರೆ. ಸಮಸ್ಯೆಗಳು ಬಂದಷ್ಟು ಮನುಷ್ಯ ಗಟ್ಟಿಯಾಗುತ್ತಾನೆ. ಮುಳ್ಳುಗಳು ಇದ್ದಾಗಲೇ ಗುಲಾಬಿಗೊಂದು ಬೆಲೆ, ಕಷ್ಟಗಳು ಬಂದಾಗಲೇ ಮನುಷ್ಯನಿಗೊಂದು ನೆಲೆ ಎಂಬ ಮಾತು ಬದುಕಿನ ಬಗೆಗೆ ಆಶಾದಾಯಕತೆಯನ್ನು ನೀಡುತ್ತದೆ. 1943ರಲ್ಲಿ ಪ್ರಕಟವಾದ ಡಿವಿಜಿಯವರ ಮಂಕುತಿಮ್ಮನ ಕಗ್ಗ ಆ ಕಾಲಕ್ಕೆ ಅಷ್ಟೆಯಲ್ಲ ಇನ್ನು ಸಾವಿರ ವರ್ಷವಾದರೂ ಜನರ ಮನಸ್ಸಿನಲ್ಲಿ ಅಗಾಧವಾದ ಪರಿಣಾಮವನ್ನು ಬೀರಿ ಶಾಶ್ವತವಾಗಿ ನೆಲೆ ನಿಲ್ಲುವ ಕೃತಿ ಆಗಬಹುದು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಕೃತಿ ತನ್ನ ಸಾರಸತ್ವದಿಂದ ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧಿಯಾಗಿದೆ. ಡಿವಿಜಿಯವರನ್ನು ಆಧುನಿಕ ಕನ್ನಡ ಸರ್ವಜ್ಞ ಎಂದೇ ಕರೆಯಲಾಗಿದೆ. ಯಾವ ಕೃತಿಗಳೇ ಬಂದು ಹೋದರೂ ಡಿವಿಜಿಯವರ ಮಂಕುತಿಮ್ಮನ ಕಗ್ಗಕ್ಕೆ ಇರುವ ಪ್ರಾಮುಖ್ಯತೆ, ಪ್ರಸಿದ್ಧಿ ಎಂದಿಗೂ ಮಾಸಲಾಗದು, ಅಳಿಸಲಾಗದು, ಅದರ ಸಾರ್ವಕಾಲಿಕ‌ ದಾಖಲೆಯನ್ನು ಮುರಿಯಲಾಗದು. ಇಂತಹ ಶ್ರೇಷ್ಠ ಹಾಗೂ ಅಮರ ಕೃತಿಯನ್ನು ನಾವು ಓದುತ್ತಿದ್ದೇವೆ ಡಿವಿಜಿ ಎಂಬಂತಹ ಮೇರು ವ್ಯಕ್ತಿತ್ವ ಬದುಕಿದ್ದ ನೆಲದಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದೇ ನಮ್ಮ ಪಾಲಿನ‌ ಪುಣ್ಯ ಪೂರ್ವಜನ್ಮದ ಸುಕೃತವೆಂದೇ ನನ್ನ ಮನಸ್ಸಿನ ಭಾವನೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಅಪ್ಪಟ ಕನ್ನಡ ಮನಸ್ಸನ್ನು ಹೊಂದಿರುವ ಕನ್ನಡಿಗರಿಗೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

4
Votes
86
Views
8 Months
Since posted

Voting Closed!

Scroll to Top