Submission 1754

ಪುಸ್ತಕದ ಶೀರ್ಷಿಕೆ: ಮರಳಿ ಮಣ್ಣಿಗೆ

ಪುಸ್ತಕದ ಲೇಖಕರು: ಡಾ. ಕೆ ಶಿವರಾಮ ಕಾರಂತರು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶಿವರಂಜಿನಿ ಬಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಮರಳಿ ಮಣ್ಣಿಗೆ: ಡಾ. ಕೆ ಶಿವರಾಮ ಕಾರಂತರು ರಚಿಸಿರುವ ಮರಳಿ ಮಣ್ಣಿಗೆ ಕಾದಂಬರಿಯನ್ನು ನನ್ನ ಕಾಲೇಜಿನ ಪದವಿ ವಿದ್ಯಾಭ್ಯಾಸದ ಸಮಯ ೨೦೧೨ರಲ್ಲಿ ಓದಿದ್ದು. ಕಾದಂಬರಿಯ ಈಗಿನ ವಿಮರ್ಶೆ ನನ್ನ ಓದಿನ ಸ್ಮರಣಾಶಕ್ತಿಗೆ ಸಾಕ್ಷಿಯಾಗಿದೆ. ಕಾರಂತರು ಇಲ್ಲಿ ಮೂರೂ ತಲೆಮಾರಿನ ವಿಭಿನ್ನ ಜೀವನದ ಕಥೆಯನ್ನು ಮಲೆನಾಡಿನ ಜೀವಾಳವಾದ ಮಳೆ ಕಡಲಿನೊಂದಿಗೆ ಕುಟುಂಬಕ್ಕೆ ಆಧಾರವಾದ ಕೃಷಿ ಜೊತೆಗಿನ ನಂಟು ಮತ್ತು ಕುಲದ ಪರಂಪರೆಯ ಪೌರೋಹಿತ್ಯ, ಹಳ್ಳಿ ಹೆಣ್ಣು ಮಕ್ಕಳ ವೈವಾಹಿಕ ಜೀವನದ ಜವಾಬ್ದಾರಿಯನ್ನು ಅತ್ಯಂತ ಸೂಕ್ಷ್ಮವಾಗಿ ಓದುಗರ ಮುಂದಿಟ್ಟಿದ್ದಾರೆ. ಕಥೆಯ ಶುರು ಕೋದಂಡ ರಾಮನ ಮಗನ ಪಾಣಿಗ್ರಹಣದಿಂದ ಸಾಗಿ ಮೊಮ್ಮಗ ರಾಮನ ಮದುವೆ ದಿಬ್ಬಣ ಕೋಡಿಗೆ ತಲುಪುವ ತನಕ ಬಂದುನಿಲ್ಲುತ್ತದೆ. ಕಾದಂಬರಿಯ ಮೊದಲ ಭಾಗ ಐತಾಳರ ಕುಟುಂಬದ ಬದುಕು ಬವಣೆಯ ಕಥೆ ಆದರೂ ಈ ನೆಲೆದ ಮಣ್ಣಿನ ಸೊಗಡು, ಕಡಲಿನಲ್ಲಿ ಮೀಯುವುದು, ಕೃಷಿಯ ತಾಪತ್ರಯ, ಊರಿನ ಸಾಲಿಗ್ರಾಮ ಜಾತ್ರೆ, ಬಿಡದೆ ಸುರಿವ ಮಳೆ, ದನಕರುಗಳ ಅಕ್ಕಚ್ಚು, ಮಳೆಗಾಲ ಕಳೆಯಲು ಮಾಡುವ ಗೆಣಸು ಉದ್ದು ಮತ್ತು ಅವಡೆಯ ಹಪ್ಪಳ ಸಂಡಿಗೆ, ಉಪ್ಪಿನಕಾಯಿಗೂ ಒಂದು ದಾರಿ, ದೀಪ ಉರಿಸಲು ಹೊನ್ನೆಣ್ಣೆ, ತೆಂಗಿನ ಹೆಡೆರಾಶಿ, ಸೋಗೆ ಎಲ್ಲವನ್ನು ಸಮ ಮಾಡುತ್ತಾ ಬದುಕು ನಡೆಸುತ್ತಿದ್ದ ಐತಾಳರ ಮೊದಲ ಪತ್ನಿ ಪಾರೋತಿ. ಕೆಲಸಕ್ಕೆ ನೆರವು ನೀಡುತ್ತಿದ್ದ ಐತಾಳರ ತಂಗಿ- ಚಿಕ್ಕಂದಿನಲ್ಲೇ ಗಂಡ ಸತ್ತು ನಿರ್ಗತಿಕಳಾಗಿದ್ದ ಸರೋಸತಿ. ಮಕ್ಕಳಿಲ್ಲದ ಪಾರೋತಿಗೆ ದನಕರುಗಳೇ ಮಕ್ಕಳು. ಸತ್ತ ನಂತರ ಸದ್ಗತಿ ಸಿಗಲು ಸ್ವಂತ ಮಕ್ಕಳು ಬೇಕು ಎಂದು ಮತ್ತೆ ಸತ್ಯಭಾಮೆಯನ್ನು ಮದುವೆಯಾದ ಐತಾಳರು. ಆಕೆಗೆ ಇಬ್ಬರು ಮಕ್ಕಳು ಲಚ್ಚ ಮತ್ತು ಸುಬ್ಬಿ. ಹೀಗೆ ಕಥೆ ಸಾಗಿ ಲಚ್ಚನ ಶಿಕ್ಷಣ ಅಜ್ಜನ ಊರು ಪಡುಮುನ್ನೂರಿನ ಹಾದಿ ಹಿಡಿಯಿತು ಹಾಗೂ ಸುಬ್ಬಿ ಮದುವೆ ನಡುವೆ ಐತಾಳರು ಶೀನಿಮಯ್ಯರ ದ್ವೇಷ ಅಸೂಯೆ ಮೊದಲ ಭಾಗ ತಿಂದು ಮುಗಿಸುತ್ತದೆ. ಇವರ ಸುಧೀರ್ಘ ಜೀವನವನ್ನು ಕಾದಂಬರಿ ಓದಿಯೇ ಆಸ್ವಾದಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಬರೆದ ಈ ಕೃತಿಯನ್ನು ಇಂದಿನ ಯುವಪೀಳಿಗೆ ಓದಲೇ ಬೇಕು. ತಂದೆ ತಾಯಿ ಅದೆಷ್ಟು ಕನಸು ಭರವಸೆ ಇಟ್ಟುಕೊಂಡು ವಕೀಲನೋ, ದೊಡ್ಡ ಸಾಹೇಬನೋ ಮಾಡಲು ಹೊರಟಿರುತ್ತಾರೆ. ಆದರೆ ಲಚ್ಚನು ತನ್ನ ಜವಾಬ್ದಾರಿ ಮರೆತು ದುಶ್ಚಟ ಬೆಳೆಸಿಕೊಂಡಿರುತ್ತಾನೆ . ಮಗನನ್ನು ಸರಿ ಮಾಡಲು ಐತಾಳರು ನಾಗವೇಣಿಯೊಂದಿಗೆ ವಿವಾಹ ಮಾಡಿಸುತ್ತಾರೆ. ಆಕೆ ಸ್ಥಿತಿವಂತ ವಕೀಲ ಕುಟುಂಬದ ಹೆಣ್ಣು. ಹೆಂಡತಿಗೆ ಸರಿಯಾದ ಗಂಡನಾಗದೇ ಮತ್ತೇ ಅಡ್ಡ ದಾರಿಯ ಬದುಕು, ಇತ್ತ ಮೊದಲ ಮಗು ಹುಟ್ಟುವ ಮುಂಚೆಯೇ ಸತ್ತಿತ್ತು, ನಂತರ ಹುಟ್ಟಿದ ಮಗುವು ಬದುಕುಳಿಯಲಿಲ್ಲ. ನಾಗವೇಣಿಯ ಬಾಳ್ವೆಗೆ ಗ್ರಹಣ ಕವಿದಂತಾಯಿತು. ದೊಡ್ಡ ಅತ್ತೆ ಪಾರೋತಿಯ ಸಾವು ಮನೆಯವರಿಗೆ ಮತ್ತಷ್ಟು ನೋವು ಉಂಟು ಮಾಡಿತು. ಪರಿಸ್ಥಿತಿ ತಿಳಿದ ಐತಾಳರು ಸೊಸೆಯ ಪಾಲಿಗೆ ಸಂಪಾದಿಸಿದ ಆಸ್ತಿ, ಹಣ ಮನೆ ಎಲ್ಲವನ್ನು ವರ್ಗ ಮಾಡಿ ಮಣ್ಣಿಗೆ ಸೇರುತ್ತಾರೆ. ಈ ಮುಖಾಂತರ ಸಾವು ಎಲ್ಲರಿಗೂ ಸಮ ಕಾದಂಬರಿಯ ಎರಡು ಪ್ರಮುಖ ಪಾತ್ರ ಮಣ್ಣಾಗುತ್ತದೆ. ಒಂದು ಹೆಣ್ಣು ಸೋಲುವುದು ಪ್ರೀತಿಯಿಂದಲೇ, ಲಚ್ಚನು ಹೆಂಡತಿಯನ್ನು ವಂಚಿಸಿ ಆಸ್ತಿ ಮನೆ ಕಸಿದು ಕೊನೆಗೆ ಗರ್ಭಿಣಿ ಪತ್ನಿಯನ್ನು ಬಿಟ್ಟು ಹೋಗುತ್ತಾನೆ. ಒಬ್ಬಂಟಿ ಸೊಸೆಗೆ ಅತ್ತೆ ಸತ್ಯ, ಅಜ್ಜಿ ಸರಸೋತಿ, ಮಗ ರಾಮ ಬದುಕಿನ ಆಧಾರವಾಗಿ ಉಳಿಯುತ್ತಾರೆ. ಮುಂದಿನ ದಿನಗಳಲ್ಲಿ ಇವರು ಕಾಲದ ಪ್ರವಾಹಕ್ಕೆ ಕಣ್ಣು ಮುಚ್ಚುತ್ತಾರೆ. ಇವರ ಪ್ರೀತಿ, ನೆಲದ ಋಣ ನಾಗವೇಣಿಯನ್ನು ಅಲ್ಲಿಯೇ ಇರಲು ಕಟ್ಟಿ ಹಾಕುತ್ತದೆ. ಪಾತ್ರಗಳು ಜೀವಂತವಾಗಿ ಕಣ್ಣೆದುರಿಗೆ ನಿಲ್ಲುತ್ತವೆ. ಆಗಾಗ ಐರೋಡಿಯ ಚಿಕ್ಕಪ್ಪ ನಾರಾಯಣಯ್ಯನ ಸಾಂತ್ವನ ನಾಗವೇಣಿಗೆ. ಅಜ್ಜಿ ಸತ್ತ ನಂತರ ಮಗಳ ಮನವೊಲಿಸಿ ವಾಸುದೇವಯ್ಯ ನಾಗವೇಣಿಯನ್ನು ಮನೆಗೆ ಕರೆತರುತ್ತಾರೆ ಅಲ್ಲಿಂದ ಮಗ ರಾಮನ ವಿದ್ಯಾಭ್ಯಾಸದ ಕಥೆ ಆರಂಭ. ಮಗನ ಅಸ್ತಿತ್ವಕ್ಕಾಗಿ ನಾಗವೇಣಿಯ ನಿರಂತರ ಹೋರಾಟ ಬದುಕನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ. ಕೆಲ ವರ್ಷಗಳ ಬಳಿಕ ವಾಸುದೇವಯ್ಯನವರ ನಿಧನ ನಾಗವೇಣಿಯನ್ನು ಆಘಾತಕ್ಕೀಡು ಮಾಡಿತು. ಇದಾದ ತಿಂಗಳಲ್ಲಿ ನಾಗವೇಣಿ ತಾಯಿಯೊಡನೆ ಮಗ ಸದಾಶಿವನ ಆಶ್ರಯಕ್ಕೆ ಬೀಳುತ್ತಾರೆ. ಅಣ್ಣನ ಮನೆ ಅವಳಿಗೆ ತನ್ನ ಮನೆಯಾಗಲೇ ಇಲ್ಲ. ರಾಮನು ನಿಶ್ಚಿಂತೆಯಿಂದ ಆರೇಳು ವರ್ಷ ಓದಿಕೊಂಡು ಮೆಟ್ರಿಕನ್ನು ಮುಗಿಸಿದನು. ಅಣ್ಣನು ಇನ್ನು ಎಷ್ಟು ದಿನ ಸಾಕುತ್ತಾನೆ, ಅವರಿವರ ಹಂಗು ಇನ್ನೆಷ್ಟು ದಿನ ನಮ್ಮ ಮನೆಯಲ್ಲಿರುವ ನೆಮ್ಮದಿ ಬೇರೆಲ್ಲೂ ಸಿಗಲಾರದು ಎಂದು ನಾಗವೇಣಿ ಮನೆ ಸೇರುತ್ತಾಳೆ. ಕಷ್ಟ ಸುಖ ಏನೇ ಬಂದರು ಇನ್ನು ಇಲ್ಲಿಯೇ ಬದುಕು ಎಂಬ ದೃಢ ತೀರ್ಮಾನ ಅವಳದು. ರಾಮನು ರಜೆ ಮುಗಿಸಿ ಮಂಗಳೂರಿಗೆ ತಲುಪಿ ಅಗತ್ಯವಿರುವ ಸರ್ಟಿಫಿಕೇಟ್ ಪಡೆದು ಊರಿನ ಪರಿಚಯಸ್ಥರ ಸಹಾಯದಿಂದ ಸಾಲ ತೆಗೆದುಕೊಂಡು ಮದ್ರಾಸು ರೈಲು ಹತ್ತುತ್ತಾನೆ. ಕಷ್ಟದಲ್ಲಿ ಬೆಳೆದ ರಾಮನು ತಂದೆಯ ಹಿಂದಿನ ಕಥೆ ಕೇಳಿ ಅವರ ಹಾದಿ ತುಳಿಯುವುದಿಲ್ಲಅಲ್ಲಿಗೆ ಕಾದಂಬರಿಯ ಆಶಾಭಾವನೆ ಬೆಳೆದು ಹೆಮ್ಮರವಾಗುತ್ತದೆ. ಮದ್ರಾಸಿನಲ್ಲಿ ತನ್ನ ಚಿಕ್ಕಪ್ಪ ಮಾಧವ - ಚಿಕ್ಕಮ್ಮ ಕೃಷ್ಣವೇಣಿ ಆಸರೆಯಾಗುತ್ತಾರೆ. ಕಾಲೇಜಿನ ಪ್ರವೇಶ ಸುಲಭದಲ್ಲಾಯಿತು, ಆದರೆ ಖರ್ಚು ಭರಿಸಲು ಚಿಕ್ಕ ಮಕ್ಕಳಿಗೆ ಪಾಠ ಹೇಳುತ್ತಾ ಇಪ್ಪತ್ತು ರೂಪಾಯಿಗಳಿಸಲು ಮುಂದಾದನು. ತನ್ನ ಊಟದ ಖರ್ಚುನ್ನು ಚಿಕ್ಕಪ್ಪನಿಗೆ ಕೊಡುತ್ತಾನೆ. ಮಾಧವ ದೊಡ್ಡ ಮನುಷ್ಯ ರಾಮಗಳಿಸಿದ ಹಣ ಒಟ್ಟು ಮಾಡಿ ನಾಗವೇಣಿಗೆ ಕೊಡುತ್ತಿರುತ್ತಾನೆ. ಮಗನ ಈ ಗುಣ ತಾಯಿಯ ಸಂತೋಷಕ್ಕೆ ಮಿತಿಯಿರಲಿಲ್ಲ. ಹೀಗೆ ಬಿ.ಎ ವ್ಯಾಸಂಗ ಮಾಡುತ್ತಿರುವಾಗ ದೇಶದಲ್ಲೆಲ್ಲ ರಾಷ್ಟ್ರೀಯ ಚಳುವಳಿಯ ಕಾವು ಏರುತ್ತಿತ್ತು. ಬಿ.ಎ ಜೊತೆಗೆ ಭಾರತದ ಸ್ವಾತಂತ್ರ್ಯ ರಾಮನ ಅಂತರಾಳದಲ್ಲಿ ಬೇರೂರಿತು. ರಾಮನ ಆತ್ಮ ಮದ್ರಾಸಿನ ಕಾಲೇಜಿಗೆ ಮಾರಿ ಹೋಗದೆ ದೇಶಪ್ರೇಮಕ್ಕಾಗಿ ಮಿಡಿಯುತ್ತಿತ್ತು. ಇದರಿಂದ ಸೆರೆವಾಸ ಅನುಭವಿಸುವ ಗತಿಯು ಬಂದಿತು. ರಾಮನು ಬಿಟ್ಟ ವ್ಯಾಸಂಗ ಮುಗಿಸಿ ಕೋಡಿಗೆ ಬರುತ್ತಾನೆ. ಕೆಲಸವಿಲ್ಲದ ಓದು ಅವನಿಗೆ ರುಚಿಸದು. ತಾಯಿಯ ಕಷ್ಟ ಕಂಡು ಬೆಂಗಳೂರಿಗೆ ಹೋಗಿ ಹೊಟೇಲ್ ಅಲ್ಲಿ ಕೆಲಸ ಮಾಡುತ್ತಾನೆ. ಸ್ವಲ್ಪ ಹಣಗಳಿಸಿ ಮುಂಬೈಗೆ ಕೆಲಸ ಹುಡುಕಲು ತೆರಳುತ್ತಾನೆ. ಅಲ್ಲಿ ಇಲ್ಲಿ ದುಡಿದು ತಾಯಿಗೆ ವರಮಾನ ಕಳುಹಿಸಿ ಕೈ ಬಿಟ್ಟು ಹೋದ ಆಸ್ತಿಯನ್ನು ಮರಳಿ ಪಡೆದರೆ ಯಾರ ಹಂಗಿಲ್ಲದೆ ಇರಬಹುದು ಎಂದು ರಾಮ ಚೂರು ಆಸ್ತಿ ಮಾಡುತ್ತಾನೆ. ಕೊನೆಗೆ ಊರೂರು ಸುತ್ತಿದರು ನಮ್ಮ ಊರು ನಮಗೆ ಮೇಲು ಎಂದು ರಾಮ ಕೋಡಿಗೆ ಬಂದು ಸುಬ್ಬತ್ತೆ ತೋರಿದ ಬ್ರಹ್ಮವರಾದ ನಾಗಪ್ಪಯ್ಯನ ಮಗಳು ಸರಸೋತಿಯನ್ನು ಮದುವೆಯಾಗಲು ಒಪ್ಪುತ್ತಾನೆ. 415 ಪುಟಗಳಿರುವ ಸಾಮಾಜಿಕ ಕಾದಂಬರಿಯ ಕಥೆಯನ್ನು ಕೆಲವು ಪದಗಳಲ್ಲಿ ಬರೆಯುವುದು ಅಸಾಧ್ಯವಾದರೂ ಒಂದೊಳ್ಳೆ ಪ್ರಯತ್ನಎಂಬ ಸಮಾಧಾನ ನನಗೆ. ಕಾದಂಬರಿಯ ಎಲ್ಲಾ ಪಾತ್ರಗಳು, ಪಾತ್ರದ ಭಾವನೆಗಳು, ಸನ್ನಿವೇಶಗಳು ಎಲ್ಲವೂ ಮಹತ್ವವಾಗಿವೆ. ಕಾರಂತರ ಬರಹದ ಮೋಡಿ ಒಂದೊಳ್ಳೆ ಜೀವನ ಸಂದೇಶ ನೀಡುವುದರೊಂದಿಗೆ, ಮನಸ್ಸಿಗೆ ಸಂತೃಪ್ತಿ ನೀಡಿ ಕಾದಂಬರಿಗೆ ಸುಖಾಂತ್ಯ ಹಾಡುತ್ತಾರೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಪಾತ್ರವರ್ಗವಂತೂ ಒಂದಕ್ಕಿಂತ ಒಂದು ಚಂದ, ಐತಾಳರ ಯೌವನ ಮತ್ತು ಮುಪ್ಪಿನ ಕಾಲವಧಿ, ಸರೋಸತಿಯ ಮಾರ್ಗದರ್ಶನ, ಪಾರೋತಿಯ ತಾಳ್ಮೆ, ಲಚ್ಚಿಯ ಬೇಜವಾಬ್ದಾರಿತನ, ನಾಗವೇಣಿಯ ಸ್ವಾಭಿಮಾನ, ರಾಮನ ದೇಶಪ್ರೇಮ ಎಲ್ಲವೂ ಅತಿ ಏನಿಸದೆ ಸಮರ್ಥವಾಗಿ ಮೂಡಿ ಬಂದಿದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಇಂದಿನ ಯುವಪೀಳಿಗೆ ಓದಲೇ ಬೇಕು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

347
Votes
1,391
Views
7 Months
Since posted

Voting Closed!

Scroll to Top