ಪುಸ್ತಕದ ಶೀರ್ಷಿಕೆ: ಸ್ವಾಮಿ ವಿವೇಕಾನಂದರ ಸಂಭಾಷಣೆಗಳು
ಪುಸ್ತಕದ ಲೇಖಕರು: ಶ್ರೀ ರಾಮಕೃಷ್ಣ ಆಶ್ರಮ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಕೆ ಎನ್ ಶ್ರೀವಲ್ಲಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ವಿವೇಕಾನಂದರ ಭಾಷಣಗಳನ್ನು ಓದಿದ್ದೆ, ಆದರೆ ಅವರ ಶಿಷ್ಯರು ಮತ್ತು ಭಕ್ತರು ಸ್ವಾಮೀಜಿಯವರೊಡನೆ ಮಾತನಾಡುವಾಗ ತಮ್ಮ ಮನದ ಸಂದೇಹವನ್ನು ಇಲ್ಲಿ ಹೇಳಿ ಪರಿಹರಿಸಿಕೊಳ್ಳುವುದನ್ನು ಓದಿದಾಗ ನಾವೇ ಅವರೊಡನಿದ್ದು ಮಾತನಾಡದಂತಹ ಅನುಭವವಾಗುತ್ತದೆ. ಈ ಪುಸ್ತಕದಲ್ಲಿ ನಾಲ್ವರು ಶಿಷ್ಯರ ದಿನಚರಿ ಪುಸ್ತಕದಿಂದಲೂ ಮತ್ತು ಅವರು ಹೇಳಿದ್ದನ್ನೂ ಇಲ್ಲಿ ದಾಖಲಿಸಲಾಗಿದೆ. ಸ್ವಾಮೀಜಿಯವರು ಎಲ್ಲೆಲ್ಲಿಗೆ ಹೋಗಿದ್ದಾಗ, ಯಾರೊಡನೆ ಯಾವ ರೀತಿಯಲ್ಲಿ ನಡೆದುಕೊಂಡರು ಎಂಬುದನ್ನು ನಾವಿಲ್ಲಿ ಓದಬಹುದು. ಸ್ವಾಮೀಜಿಯವರ ಶಿಷ್ಯರಾದ ಬಾಬು ಶರತ್ ಚಂದ್ರ ಚಕ್ರವರ್ತಿ ಎಂಬುವವರ ದಿನಚರಿ ಪುಸ್ತಕದಲ್ಲಿರುವ ಒಟ್ಟು ೪೬ ಸನ್ನಿವೇಶಗಳನ್ನೂ, ಪ್ರಿಯನಾಥ ಸಿಂನ್ಹ ಎಂಬುವರು ಹೇಳಿದ ೭, ಸುರೇಂದ್ರನಾಥಸೇನ್ ಎಂಬುವರು ಹೇಳಿದ ೪ ಮತ್ತು ಸುರೇಂದ್ರನಾಥ ದಾಸಗುಪ್ತ ಎಂಬುವವರು ಹೇಳಿದ ಒಂದು ಸನ್ನಿವೇಶವನ್ನೂ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ಧರ್ಮಪ್ರಚಾರದಿಂದ ನಮ್ಮ ದೇಶಕ್ಕೆ ಆಗುವ ಉಪಯೋಗಗಳೇನು ಎಂಬುದಕ್ಕೆ ಸ್ವಾಮೀಜಿಯವರು "ನಮ್ಮ ದೇಶದಲ್ಲಿರುವುದು ವೇದಾಂತಧರ್ಮವೊಂದೇ, ಪಾಶ್ಚಾತ್ಯರಿಗೆ ಇದನ್ನು ಭೋದಿಸಿ, ಅವರಿಗೆ ನಾವು ಗುರುಸ್ಥಾನದಲಿರಬೇಕು, ಅವರಿಗೆ ವೇದಾಂತವನ್ನು ಕಲಿಸಿ ಪಾರಮಾರ್ಥಿಕ ಕಲ್ಯಾಣಕ್ಕೆ ದಾರಿ ತೋರಬೇಕು. ಹಾಗೆಯೇ ಅವರಿಂದ ನಮ್ಮ ಐಹಿಕ ಜೀವನಕ್ಕೆ ಬೇಕಾದ ವಿಜ್ಞಾನ, ಶಾಸ್ತ್ರಾದಿಗಳನ್ನು ಕಲಿತುಕೊಂಡು ಜೀವನದಲ್ಲಿ ಹೆಚ್ಚು ಚುರುಕಿನಿಂದ ಕೆಲಸ ಮಾಡಬೇಕು" ಎಂದು ಕೊಡು-ಕೊಳ್ಳುವಿಕೆಯಿಂದ ನಮ್ಮ ದೇಶಕ್ಕಾಗುವ ಲಾಭವನ್ನೂ, ದೇಹೀ ಎಂದು ಬೇರೆಯವರ ಮುಂದೆ ನಾವು ಕೈಚಾಚಬಾರದು ಎಂಬುದನ್ನು ಸರಳವಾಗಿ ಹೇಳಿದ್ದಾರೆ. ತಾವು ಗೋರಕ್ಷಕರೆಂದು ಬಂದು ಸ್ವಾಮೀಜಿಯವರ ಬಳಿ ಸಹಾಯ ಕೇಳಿದವರಿಗೆ "ಮಧ್ಯ ಹಿಂದೂಸ್ತಾನದಲ್ಲಿ ಕ್ಮಾಮದಿಂದ. ಹೊಟ್ಟೆಗಿಲ್ಲದೆ ೯ ಲಕ್ಷ ಜನ ಸತ್ತು ಹೋದರಲ್ಲ ಅಲ್ಲಿಗೆ ನೀವೇನಾದರೂ ಸಹಾಯ ಮಾಡುತ್ತಿದ್ದೀರಾ" ಎಂದಾಗ "ಅದು ಅವರ ಕರ್ಮಫಲ ಅವರು ಸತ್ತಿದ್ದಾರೆ, ನಾವೇಕೆ ಸಹಾಯ ಮಾಡಬೇಕು" ಎಂದು ಬಂದವರು ಉತ್ತರಿಸಿದರು, ಆಗ ಕೋಪಗೊಂಡ ಸ್ಮಾಮೀಜಿ "ಕಷ್ಟದಲ್ಲಿರುವವರಿಗೆ ಸಹಾಯ ಮಾಡದೆ ಕರ್ಮಫಲ ಎಂದು ಹೇಳುವ ನಿಮಗೆ ಸಹಾಯ ಮಾಡುವುದಿಲ್ಲ. ಹಸುಗಳದ್ದೂ ಕರ್ಮಫಲವೇ ಅಲ್ಲವೇ. ಮನುಷ್ಯನ ಕಷ್ಟಕ್ಕೆ ಅನುಕಂಪದಿಂದ ದುಃಖಿಸದ ಮನುಷ್ಯನು ಮನುಷ್ಯನೇ ಅಲ್ಲ" ಎಂದು ನುಡಿದ ಮಾತುಗಳು ಎಷ್ಟೊಂದು ಅರ್ಥಪೂರ್ಣವಾಗಿದೆ. " *ನಾಗರೀಕತೆ* ಎಂದರೆ ಯಾವ ರಾಷ್ಟ್ರ ಅಥವ ಸಮಾಜ ಆಧ್ಯಾತ್ಮಿಕ ಭಾವದಲ್ಲಿ ಮುಂದಿದೆಯೋ ಅದು ನಾಗರೀಕ. ಐಹಿಕ ಸುಖಭೋಗಗಳನ್ನು ಹೆಚ್ಚಿಸಿಕೊಂಡಲ್ಲಿ ಮಾತ್ರ ನಾಗರೀಕವಾಗುವುದಿಲ್ಲ. ಪ್ರಾಚೀನ ಧರ್ಮವನ್ನು ಧ್ವಂಸಗೊಳಿಸಿ ಹೊಸದನ್ಮು ಸ್ಥಾಪಿಸಲು ಸಾಧ್ಯವಿಲ್ಲ, ಅದನ್ನು ಮಾಡಲು ಹೋದ ಬುದ್ದ ದೇವನ ಧರ್ಮ ಭಾರತದಲ್ಲಿ ನಿರ್ನಾಮವಾಯಿತು" ಎಂಬ ಸ್ವಾಮೀಜಿಯ ನುಡಿಗಳು ಸತ್ಯವಲ್ಲವೆ. ಹೆಂಗಸರಿಗೆ ಎಂತಹ ಶಿಕ್ಷಣ ಕೊಡಬೇಕು , ಏತಕ್ಕಾಗಿ ಅವರಿಗೆ ಶಿಕ್ಷಣ ಬೇಕು ಎಂಬುವುದಕ್ಕೆ ಸ್ವಾಮೀಜಿವರ ನಿಲುವು ಹೀಗಿತ್ತು "ಧರ್ಮ, ಶಿಲ್ಪ, ವಿಜ್ಞಾನ, ಗೃಹಕೃತ್ಯ, ಅಡುಗೆ, ಹೊಲಿಗೆ, ಶರೀರಪಾಲನೆ ಈ ವಿಷಯಗಳನ್ನು ತಿಳಿಸಿಕೊಡಬೇಕು. ಮುಂದೆ ಅವರ ಮಕ್ಕಳೇ ಉತ್ತಮ ನಾಗರೀಕರಾಗುವರು" ಸಾಯಣಾಚಾರ್ಯರ ರಚನೆ ಋಗ್ವೇದದ ಸಾಯಣಭಾಷ್ಯವನ್ನು ಮುದ್ರಿಸಿದ್ದು ಮ್ಯಾಕ್ಸ್ ಮುಲ್ಲರ್, ೨೫ ವರ್ಷ ಅದರ ಹಸ್ತಪ್ರತಿಯನ್ನು ಸಿದ್ದಪಡಿಸಿ, ನಂತರ ಅದನ್ನು ಅಚ್ಚು ಹಾಕಿಸಲು ಅವರಿಗೆ ೨೦ ವರ್ಷ ಬೇಕಾಯಿತಂತೆ, ಇದರ ಬಗ್ಗೆ ಸ್ವಾಮೀಜಿಯವರು "ಸಾವಣಾಚಾರ್ಯರೇ ಮ್ಯಾಕ್ಸ್ ಮುಲ್ಲರ್ ಆಗಿ ತಮ್ಮ ಕೆಲಸವನ್ನು ಮುಗಿಸಲು ಜನ್ಮತಳೆದಿರಬೇಕು" ಎಂದು ಹೇಳಿದ್ದಾರೆ. ಚಿಕಾಗೋ ಉಪನ್ಯಾಸದ ನಂತರ ಅವರಿಗಾದ ಅನುಭವಗಳನ್ನು ಇಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಅಲ್ಲಿನ ಪಾದ್ರಿಗಳು ಇವರ ಮೇಲೆ ಅಪವಾದವನ್ನು ಹೊರೆಸಿ, ಅಲ್ಲಿಯ ಜನರ ಮೂಲಕ ಪತ್ರಿಕೆಗಳಲ್ಲಿ ಇವರ ವಿರುದ್ಧ ಪ್ರಕಟಿಸಿದ್ದರೂ ನಂತರ ಪ್ರಕಟಿಸಿದವರೇ ಇವರ ನಡೆಗೆ ಸೋತು, ಪತ್ರಿಕೆಗಳಲ್ಲಿ ಕ್ಷಮೆಯಾಚಿಸಿ, ನಂತರ ಇವರಿಗೆ ಶಿಷ್ಯರಾಗಿದ್ದನ್ನು ಇವರು ಸೊಗಸಾಗಿ ತಿಳಿಸಿದ್ದಾರೆ. ಪಾಣಿನಿಯ ಅಷ್ಟಾಧ್ಯಾಯಿಯನ್ನು ಕಲಿಯಲು ಸ್ವಾಮೀಜಿಯವರು, ವ್ಯಾಕರಣದಲ್ಲಿ ಮಹಾ ಪಂಡಿತರಾದವರ ಬಳಿ ಹೋಗಿ ಮೂರು ದಿನಗಳು ಹೇಳಿಸಿಕೊಂಡರು ಆದರೂ ಅವರಿಗೆ ಅರ್ಥವಾಗಿರಲಿಲ್ಲ. ಆದರೆ ಸ್ವಾಮೀಜಿಯವರೇ ಏಕಾಗ್ರತೆಯಿಂದ ಕುಳಿತು ಓದಿದಾಗ ಮೂರು ಗಂಟೆಯೊಳಗೆ ಎಲ್ಲವೂ ಅರ್ಥವಾಯಿತಂತೆ. ಏಕಾಗ್ರತೆಯಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಹೀಗೆ ವಿವರಿಸಿದ್ದಾರೆ. ಯಾವ ದಾನ ಅತಿ ಮುಖ್ಯ ಎಂಬ ಪ್ರಶ್ನೆಗೆ ಸ್ವಾಮೀಜಿಯವರು ಈ ರೀತಿ ಉತ್ತರಿಸಿದ್ದಾರೆ. "ಎಲ್ಲಕ್ಕಿಂತ ಮುಖ್ಯವಾದುದು ಅನ್ನದಾನ ಯಾರೂ ಹಸಿವಿನಿಂದ ನರಳಬಾರದು, ಹಸಿದ ಹೊಟ್ಟೆಯಲ್ಲಿರುವವರಿಗೆ ಉಪದೇಶ ಮಾಡಿದರೆ ಅದು ಅವರ ತಲೆಗೆ ಹೋಗುವುದಿಲ್ಲ. ನಂತರದ್ದು ವಿದ್ಯಾ ದಾನ ಹೊಟ್ಟೆ ತುಂಬಿದವನಿಗೆ ವಿದ್ಯೆ ಕಲಿಸಿ, ಆಮೇಲಿನದು ಜ್ಞಾನ ದಾನ, ವಿದ್ಯಾವಂತನಿಗೆ ಮಾತ್ರ ಜ್ಞಾನವನ್ನು ಬೋಧಿಸಲು ಸಾಧ್ಯ" ವಿದ್ಯೆ ಎಂದರೇನು ಎಂಬುದನ್ನು ಬಹು ಸೊಗಸಾಗಿ ಹೇಳಿದ್ದಾರೆ "ಯಾವ ವಿದ್ಯೆಯಿಂದ ಸಾಧಾರಣರನ್ನು ಸಮರ್ಥರನ್ನಾಗಿ ಮಾಡುವುದಕ್ಕೆ ಆಗುವುದಿಲ್ಲವೋ, ಯಾವುದು ಮನುಷ್ಯನಿಗೆ ಚಾರಿತ್ರಬಲ, ಪರಸೇವಾ ಮನೋಭಾವ, ಸಾಹಸ ಸ್ವಭಾವವನ್ನು ಒದಗಿಸುವುದಿಲ್ಲವೋ, ಅದು ವಿದ್ಯೆಯಲ್ಲ. ಪರರ ಏಳಿಗೆಗಾಗಿ ದುಡಿಯುವ, ಮನೋಭಾವ, ಮೊದಲು ಅನ್ನ, ಬಟ್ಟೆಗೆ ದಾರಿ ಮಾಡಿಕೊಟ್ಟು ನಂತರ ಆತ್ಮೋದ್ಧಾರಕ್ಕೆ ದಾರಿ ಮಾಡಿಕೊಡುವುದೋ ಅದು ನಿಜವಾದ ವಿದ್ಯೆ." "ಒಬ್ಬ ಮನುಷ್ಯನಿಗೆ ನೇರವಾಗಿ ಅವನ ನ್ಯೂನತೆಗಳ ಬಗ್ಗೆ ಹೇಳಿ ಸ್ನೇಹಭಾವದಿಂದ ಅವನು ತಿದ್ದಿಕೊಳ್ಳುವಂತೆ ಮಾಡು, ಆದರೆ ಇತರರ ಮುಂದೆ ಅವನ ಸುಗುಣಗಳನ್ನು ಪ್ರಶಂಸೆ ಮಾಡು ಎಂಬ ಮಾತಿನಂತೆ ವಿದೇಶಕ್ಕೆ ಹೋದಾಗ ನಮ್ಮವರ ಪ್ರಶಂಸೆ ಮಾಡಿ ವಿದೇಶೀಯರ ನ್ಯೂನತೆಯನ್ನು ಎತ್ತಿ ತೋರಿಸಿ, ಇಲ್ಲಿಗೆ ಬಂದಾಗ ನಮ್ಮ ದೇಶದ ಜನರ ಮುಂದೆ ವಿದೇಶಿಯರ ರಾಜಸ ಗುಣವನ್ನು ಹೊಗಳಿ ನಮ್ಮವರಲ್ಲಿರುವ ತಾಮಸ ಗುಣವನ್ನು ತಿದ್ದಿ ಕೊಳ್ಳುವಂತೆ ಹೇಳುತ್ತಿದ್ದೇನೆ." ಎಂಬ. ವಿವೇಕಾನಂದರ ಮಾತಿನಲ್ಲಿ ಎಷ್ಟೊಂದು ಅರ್ಥವಿದೆಯಲ್ಲವೆ. ಸಾವಿರ ಪಾಪಿಗಳನ್ನು ಕೊಲ್ಲುವುದರಿಂದ ಜಗತ್ತಿನಲ್ಲಿ ಪಾಪವನ್ನು ಹೋಗಲಾಡಿಸಿದಂತೆ ಆಗುವುದಿಲ್ಲ, ಅದರಿಂದ ಪಾಪವು ಇನ್ನೂ ಹೆಚ್ಚುತ್ತದೆ, ಆಧ್ಯಾತ್ಮಿಕ ಉಪದೇಶದ ಮೂಲಕ ಜನರು ಪಾಪ ಮಾಡುವುದನ್ನು ತಡೆದರೆ ಪಾಪ ನಿವಾರಣೆ ಆದಂತೆ ಎಂಬ ವಿವೇಕಾನಂದರ ಮಾತು ಇಂದಿಗೂ ಪ್ರಸ್ತುತ. ವಿವೇಕಾನಂದರು "ನಿಮ್ಮ ದೇಹವನ್ನು ದೃಢಪಡಿಸಿ, ನಂತರ ನಿಮ್ಮ ಮನಸ್ಸಿನ ಮೇಲೆ ಅಧಿಪತ್ಯ ಬರುತ್ತದೆ. ಆನಂತರ ನೀವು ಏನನ್ನು ಬೇಕಾದರೂ ಸಾಧಿಸಬಹುದು. ಬೇರೆಯವರ ಒಳಿತಿಗಾಗಿ ಕೆಲಸ ಮಾಡಿದರೆ ನಿಮ್ಮಲ್ಲಿರುವ ಸುಪ್ತ ಶಕ್ತಿ ಜಾಗೃತವಾಗುತ್ತದೆ. ಕಷ್ಟದಲ್ಲಿರುವವರಿಗೆ ನೀಡಲು ನಿಮ್ಮ ಬಳಿ ಹಣ ಇಲ್ಲದಿರಬಹುದು, ಆದರೆ ಒಳ್ಳೆಯ ಮಾತನ್ನಾದರೂ ಆಡಬಹುದಲ್ಲವೇ ?" ಎಂದಿದ್ದಾರೆ. "ನಿಜವಾದ ಭಕ್ತಿ ಮತ್ತು ಜ್ಞಾನವನ್ನು ಹೊಂದಲು ಜಪ, ಧ್ಯಾನ, ಪೂಜೆ, ಹೋಮ ಇದೆಲ್ಲಾ ಸಾಧನಗಳು. ಈಗ ಜನರು ಮುಖ್ಯವಾಗಿರುವ ಭಕ್ತಿ ಮತ್ತು ಜ್ಞಾನವನ್ನು ಬಿಟ್ಟು ಬರಿಯ ಸಾಧನಗಳನ್ನು ಹಿಡಿದು, ಹೀಗೆ ಮಾಡಬೇಕು, ಹಾಗೆ ಮಾಡಬಾರದು ಎಂದು ಕಚ್ಚಾಡುತ್ತಿದ್ದಾರೆ. ಈಗ ಧರ್ಮವು ಅಡುಗೆಯ ಪಾತ್ರೆಯಲ್ಲಿ ಮಾತ್ರ ಇದೆ, ಧರ್ಮದ ಮಹತ್ತಾದ. ಸತ್ಯಗಳನ್ನು ಒಂದೆಡೆಯಿಟ್ಟು, ಗುರಿಯನ್ನೇ ಮರೆತು ಜನರು ಹೋರಾಡುತ್ತಿದ್ದಾರೆ" ಎಂಬ ಸ್ವಾಮೀಜಿಯವರ ಮಾತು ಈಗಿನವರ ಆಡಂಬರದ ಪೂಜೆಯನ್ನು ನೋಡಿದಾಗ ಸತ್ಯವೆನಿಸುತ್ತದೆ. "ಭಗವಂತನ ಕೃಪೆಯೆಂಬ ಗಾಳಿ ನಿರಂತರವಾಗಿ ಬೀಸುತ್ತಿದೆ, ನೀನು ನಿನ್ನ ಹಾಯಿಪಟವನ್ನು ಎತ್ತಿ ಕಟ್ಟಿರು, ಅಂದರೆ ಯಾವುದೇ ಕೆಲಸವಿರಲಿ ಹೃದಯ ಪೂರ್ವಕವಾಗಿ ಮಾಡು ಜಯ ಖಂಡಿತಾ ನಿನ್ನದಾಗುತ್ತದೆ" ಎಂಬ ನುಡಿಗಳು ನಮಗೆ ಒಳ್ಳೆಯ ಕೆಲಸವನ್ನು ಮಾಡಲು ಉತ್ತೇಜನ ನೀಡುತ್ತದೆ. "ಮಕ್ಕಳಿಗೇ ಇರಬಹುದು, ಕೈಕೆಳಗಿನ ಕೆಲಸಗಾರರಿಗೇ ಇರಬಹುದು 'ನೀನು ಶುದ್ಧ ಕತ್ತೆ' ಎಂದು ಬೈಯುತ್ತಾ ಇದ್ದರೆ, ಅವರು ತಿದ್ದಿಕೊಳ್ಳಲು, ಮುಂದುವರೆಯಲು ನಾವೇ ತೊಡಕಾಗುತ್ತೇವೆ, ಅದರ ಬದಲು ಅವರಿಗೆ ಮಾರ್ಗದರ್ಶನ ಕೊಡುತ್ತಾ, ಅವರು ಸರಿಯಾಗಿ ಮಾಡಿದ ಚಿಕ್ಕ ಕೆಲಸವನ್ನೂ ಹೊಗಳಿದರೆ, ಅದರಿಂದ ಉತ್ಸಾಹಿತರಾದ ಅವರು ಚೆನ್ನಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಾರೆ." ಎಂಬ ಅವರ ನುಡಿಗಳು ನಮ್ಮೆಲ್ಲರ ಅನುಭವಕ್ಕೆ ಬಂದಿರುವಂತಹುದೇ ಅಲ್ಲವೇ. ಧರ್ಮದ ಪುನರ್ ಸ್ಥಾಪನೆಗಾಗಿ, ದೇಶದ ಜನರ ಏಳಿಗೆಗಾಗಿ ವಿವೇಕಾನಂದರು ದುಡಿಯುತ್ತಿದ್ದರು. "ನಾನೊಂದು ಜೀರ್ಣ ವಸ್ತೃದಂತೆ, ನನ್ನ ದೇಹವನ್ನು ಎಸೆಯಬಹುದು, ಆದರೆ ಜಗತ್ತಿನ ಕಲ್ಯಾಣ ಮಾಡುವುದನ್ನು ನಾನು ಬಿಡುವುದಿಲ್ಲ." ಎಂಬ ವಿವೇಕಾನಂದರ ಮಾತುಗಳು ಎಲ್ಲ ಕಾಲಕ್ಕೂ, ಎಲ್ಲರಿಗೂ ಆದರ್ಶ. ✍ಶ್ರೀವಲ್ಲಿ ಮಂಜುನಾಥ☺
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ವಿವೇಕಾನಂದರು "ನಿಮ್ಮ ದೇಹವನ್ನು ದೃಢಪಡಿಸಿ, ನಂತರ ನಿಮ್ಮ ಮನಸ್ಸಿನ ಮೇಲೆ ಅಧಿಪತ್ಯ ಬರುತ್ತದೆ. ಆನಂತರ ನೀವು ಏನನ್ನು ಬೇಕಾದರೂ ಸಾಧಿಸಬಹುದು. ಬೇರೆಯವರ ಒಳಿತಿಗಾಗಿ ಕೆಲಸ ಮಾಡಿದರೆ ನಿಮ್ಮಲ್ಲಿರುವ ಸುಪ್ತ ಶಕ್ತಿ ಜಾಗೃತವಾಗುತ್ತದೆ. ಕಷ್ಟದಲ್ಲಿರುವವರಿಗೆ ನೀಡಲು ನಿಮ್ಮ ಬಳಿ ಹಣ ಇಲ್ಲದಿರಬಹುದು, ಆದರೆ ಒಳ್ಳೆಯ ಮಾತನ್ನಾದರೂ ಆಡಬಹುದಲ್ಲವೇ ?" ಎಂದಿದ್ದಾರೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಮಕ್ಕಳಲ್ಲಿ, ಯುವಜನತೆಯಲ್ಲಿ ರಾಷ್ಟ್ರಪ್ರೇಮ ಜಾಗ್ರತಗೊಳಿಸಲು ಇದು ಸಹಕಾರಿ .
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.