ಪುಸ್ತಕದ ಶೀರ್ಷಿಕೆ: ರೇಷ್ಮೆ ಬಟ್ಟೆ
ಪುಸ್ತಕದ ಲೇಖಕರು: ವಸುಧೇಂದ್ರ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶ್ರೀಧರ್. ಡಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಕೆಲವು ಕೃತಿಗಳು ಓದುಗರನ್ನು ಕೇವಲ ಕಥಾ ಪ್ರಪಂಚಕ್ಕೆ ಕರೆದೊಯ್ಯುವುದಿಲ್ಲ, ಬದಲಿಗೆ ಕಾಲಯಂತ್ರದಲ್ಲಿ ಕೂರಿಸಿ ಸಹಸ್ರಾರು ವರ್ಷಗಳ ಹಿಂದಿನ ಇತಿಹಾಸದ ಹಾದಿಯಲ್ಲಿ ಪಯಣಿಸುವಂತೆ ಮಾಡುತ್ತವೆ. ವಸುಧೇಂದ್ರ ಅವರ ಮಹತ್ವದ ಕಾದಂಬರಿ 'ರೇಷ್ಮೆ ಬಟ್ಟೆ' ಅಂತಹ ಅಪರೂಪದ ಕೃತಿ. ಎರಡನೇ ಶತಮಾನದ ಏಷ್ಯಾಖಂಡದಲ್ಲಿ ಕುಶಾನರ ದೊರೆ ಕಾನಿಷ್ಕನ ಕಾಲದಲ್ಲಿ ರೂಪುಗೊಂಡ 'ರೇಷ್ಮೆ ಮಾರ್ಗ'ದ ಸುತ್ತ ಹೆಣೆಯಲಾದ ಒಂದು ವಿಶಿಷ್ಟವಾದ ಚಾರಿತ್ರಿಕ ಮತ್ತು ಕಾಲ್ಪನಿಕ ಕಥನ. 'ರೇಷ್ಮೆ ಬಟ್ಟೆ' ಎಂಬ ಶೀರ್ಷಿಕೆ ಕೇವಲ ರೇಷ್ಮೆ ವಸ್ತ್ರವನ್ನು ಸೂಚಿಸುವುದಿಲ್ಲ; ಅದು 'ಒನಪು ಬಟ್ಟೆ – ಒರಟು ದಾರಿ' ಯ ಸಂಕೇತವಾಗಿದೆ. ಅಂದರೆ, ಅತಿನುಣುಪಾದ ರೇಷ್ಮೆ ಬಟ್ಟೆಗಾಗಿ ಸಾವಿರಾರು ಮೈಲುಗಳ ಕಠಿಣ, ಒರಟು ಮಾರ್ಗದಲ್ಲಿ ಪಯಣಿಸಬೇಕಾದ ವ್ಯಾಪಾರಿಗಳು, ಸಾಮಾನ್ಯ ಜನ ಮತ್ತು ಅವರ ಬದುಕು ಎದುರಿಸಿದ ತಲ್ಲಣಗಳ ಅನಾವರಣ. ಈ ಕಾದಂಬರಿಯು ಚೀನಾ ದೇಶದಿಂದ ರೋಮ್ ದೇಶದ ತನಕ ವಿಸ್ತರಿಸಿದ್ದ ಈ ವ್ಯಾಪಾರ ಮಾರ್ಗದ ಹಿನ್ನೆಲೆಯಲ್ಲಿ, ಅಂದಿನ ಜಾಗತೀಕರಣ ಪ್ರಕ್ರಿಯೆ ಹೇಗೆ ಸಾಮಾನ್ಯ ಜನರ ಜೀವನ, ಧರ್ಮ, ಸಂಸ್ಕೃತಿ ಮತ್ತು ನೈತಿಕತೆಗಳ ಮೇಲೆ ಪ್ರಭಾವ ಬೀರಿ ಯುಗ ಸಂಘರ್ಷವನ್ನು ಸೃಷ್ಟಿಸಿತು ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಈ ಕೃತಿಯ ವೈಶಿಷ್ಟ್ಯವೆಂದರೆ, ಇಲ್ಲಿ ಯಾವುದೇ ಒಬ್ಬ ರಾಜ ಅಥವಾ ಮಹಾಪುರುಷ ನಾಯಕನಲ್ಲ. ಬದಲಿಗೆ, ಕಾದಂಬರಿಯ ಪ್ರತಿಯೊಂದು ಅಧ್ಯಾಯವೂ ಅಂದಿನ ಬದುಕಿನಲ್ಲಿ ಅನಿವಾರ್ಯವಾಗಿ ಗಡಿರೇಖೆಗಳನ್ನು ದಾಟಬೇಕಾಗಿ ಬಂದ ಸಾಮಾನ್ಯ ಜನರಾದ ಹವಿನೇಮ, ಸಗನೇಮಿ, ಜ್ಞಾನಸೇನ,, ಮಧುಮಾಯಾ, ಮಿತ್ರವಂದಕ, ಚೀನಾದ ಛಾನ್ ಲೀಹ್ವಾ, ಮತ್ತು ಬುದ್ಧಮಿತ್ರ ಅವರಂತಹ ವಿವಿಧ ಧರ್ಮ, ಭಾಷೆ, ಮತ್ತು ಹಿನ್ನೆಲೆಯ ಪಾತ್ರಗಳನ್ನು ಮುಖ್ಯವಾಗಿಸುತ್ತದೆ. ವಸುಧೇಂದ್ರ ಅವರು ಈ ಪಾತ್ರಗಳ ಮೂಲಕ ಮನುಷ್ಯನ ಮಹತ್ವಾಕಾಂಕ್ಷೆ, ಪ್ರೀತಿ-ಪ್ರೇಮ, ತ್ಯಾಗ, ಬಲಿದಾನ ಮತ್ತು ತಲೆಮಾರುಗಳ ನಡುವೆ ಉಂಟಾಗುವ ಬದಲಾವಣೆಯ ಕಂದಕ ಗಳನ್ನು ಅತ್ಯಂತ ಆಳವಾಗಿ ಮತ್ತು ಸಂವೇದನಾಶೀಲವಾಗಿ ಚಿತ್ರಿಸಿದ್ದಾರೆ. ಚೈನಾದಿಂದ ರೇಷ್ಮೆಯ ಗುಟ್ಟು ಹೊರಬಂದ ಸನ್ನಿವೇಶದಿಂದ ಹಿಡಿದು, ಪಾರಸೀಕನ ಪ್ರೇಮಿ ತಾನೇ ಮಾರಾಟವಾಗುವ ಘಟನೆಯವರೆಗೂ ಇಲ್ಲಿನ ಕಥೆಗಳು ಕುತೂಹಲಕಾರಿಯಾಗಿವೆ. ಸುಮಾರು ನಾಲ್ಕು ವರ್ಷಗಳ ಅಧ್ಯಯನದ ನಂತರ ಲೇಖಕರು ಈ ಕೃತಿಯನ್ನು ರಚಿಸಿದ್ದು, ಆಗಿನ ಭೌಗೋಳಿಕತೆ, ಚಾರಿತ್ರಿಕ ಸಂಗತಿಗಳು ಮತ್ತು ಅಂದಿನ ಜನಜೀವನವನ್ನು ವಿಶ್ಲೇಷಿಸಿ, ಕಲ್ಪನೆಗೂ ಮೀರಿದ ಚಿತ್ರಣವನ್ನು ನಮ್ಮ ಮುಂದೆ ಇಡುತ್ತಾರೆ. ಕಾದಂಬರಿಯು ಕೇವಲ ಇತಿಹಾಸಕ್ಕೆ ಸೀಮಿತವಾಗದೆ, ಸಾರ್ವಕಾಲಿಕ ಸತ್ಯಗಳಾದ ಧಾರ್ಮಿಕ ಮತ್ತು ಸಾಮಾಜಿಕ ಹೊಳಹುಗಳನ್ನು ಚರ್ಚಿಸುತ್ತದೆ. ಬೌದ್ಧ, ಪಾರ್ಸಿ, ಮತ್ತು ಕಾನ್‌ಫ್ಯೂಶಿಯಸ್ ಧರ್ಮಗಳ ನವನೀತವನ್ನು ಸರಳ ತರ್ಕಕ್ಕೆ ಒಡ್ಡಿ, ಒಳಿತಿನ ದಾರಿಯನ್ನು ತೋರಿಸುತ್ತದೆ. ಒಟ್ಟಿನಲ್ಲಿ, 'ರೇಷ್ಮೆ ಬಟ್ಟೆ' ಓದುಗನಿಗೆ ಸಂಯಮದ ಓದನ್ನು ಬೇಡುವ ಒಂದು ಬೃಹತ್ ಕಾದಂಬರಿಯಾದರೂ, ಅದನ್ನು ಮುಗಿಸಿದಾಗ ಸಿಗುವ ಅನುಭವ ರೋಮಾಂಚನಕಾರಿ. ರೇಷ್ಮೆಯ ನುಣುಪಿಗೆ ಮನಸೋತರೂ, ಅದರ ಹಿಂದಿನ ಶ್ರಮ ಮತ್ತು ಸಂಘರ್ಷದ ಕಥನ ಮನಸ್ಸನ್ನು ಕಾಡುತ್ತದೆ. ಕನ್ನಡದಲ್ಲಿ ಬಂದಿರುವ ಅಪರೂಪದ 'ಜಾಗತೀಕರಣದ ಯುಗಸಂಘರ್ಷ' ಕಾದಂಬರಿ ಇದಾಗಿದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ತನ್ನ ಪ್ರೇಯಸಿ ಮಧುಮಾಯಾಳನ್ನು ಬಿಟ್ಟು, ಕೊನೆಯುಸಿರು ಎಳೆಯುತ್ತಿದ್ದ ತನ್ನ ತಂದೆಯನ್ನು ನೋಡಲು ಮಿತ್ರವಂದಕ ಅವನ ಊರಾದ ಸಮರಖಂಡಕ್ಕೆ ವಾಪಸ್ಸಾಗಿರುತ್ತಾನೆ, ಅವನು ಬರುವ ವೇಳೆಗೆ ಅವನ ತಂದೆ ಜೀವ ಬಿಟ್ಟಿರುತ್ತಾರೆ. ವೈಡೂರ್ಯದ ಗಣಿಯಲ್ಲಿ ಆದ ಅವಮಾನದ ನಂತರ ಮಿತ್ರವಂದಕನಿಗೆ ಅಲ್ಲಿ ಕೆಲಸಮಾಡಲು ಅಸಾಧ್ಯವೆಂದು ತೀರ್ಮಾನಿಸಿ, ವ್ಯಾಪಾರ ಮಾಡುವುದೆಂದು ನಿರ್ಧರಿಸುತ್ತಾನೆ, ಆದರೆ ಅದಕ್ಕೆ ಬೇಕಾದ ಹಣವಿರುವುದಿಲ್ಲ, ರೇಷ್ಮೆ ದಾರಿಯಲ್ಲಿ ಹೋಗುವ ವ್ಯಾಪಾರಿಗಳು ಯೌವ್ವನದ ಹುಡುಗಿಯರನ್ನು ಕೊಳ್ಳುತ್ತಾರೆ, ಮತ್ತು ಚಂದದ ಹುಡುಗಿಯರನ್ನು ಚೀನಾದಲ್ಲಿ ತೊತ್ತಿನ ಹೆಣ್ಣಾಗಿ ಮಾರಿದರೆ ಕೈತುಂಬ ಸಿರಿ ಸಂಪಾದನೆಯಾಗುತ್ತದೆ ಎಂಬುದನ್ನು ಮನಗಂಡಿದ್ದ ಮಧುಮಾಯ ತನ್ನನ್ನು ಮಾರಿಕೊಂಡು ಅದರಿಂದ ಸಿಕ್ಕ ಹಣವನ್ನು ಓಹ್ಯಾನಿಗೆ ಕೊಟ್ಟು, ಅದನ್ನು ಮಿತ್ರವಂದಕನ ವ್ಯಾಪಾರಕ್ಕೆ ಬಂಡವಾಳ ಮಾಡಿಕೊಳ್ಳಲು ಹೇಳುತ್ತಾಳೆ. ಒಂದೆಡೆ ತನ್ನ ತಂದೆಯ ಸಾವು, ಮತ್ತೊಂದೆಡೆ ತನ್ನ ಪ್ರೇಯಸಿ ತನ್ನ ವ್ಯಾಪಾರದ ಬಂಡವಾಳಕ್ಕಾಗಿ ದೂರದ ಚೀನಾಕ್ಕೆ ತನ್ನನ್ನು ಮಾರಿಕೊಂಡದ್ದು ನನ್ನನ್ನು ಬಹಳ ಕಾಡಿತು
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಇತಿಹಾಸ ಮತ್ತು ಧರ್ಮಗಳ ಬಗ್ಗೆ ಆಸಕ್ತಿ ಇರುವವರಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.