ಪುಸ್ತಕದ ಶೀರ್ಷಿಕೆ: ಬೆಟ್ಟದ ಜೀವ
ಪುಸ್ತಕದ ಲೇಖಕರು: ಡಾ. ಕೆ ಶಿವರಾಮ ಕಾರಂತ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಹನುಮಂತ ಎಸ್ ಕೆ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನಾನು ಬಯಲು ಸೀಮೆಯ ಆಸಾಮಿ. ನನಗೆ ಮಲೆನಾಡು, ಪಶ್ಚಿಮ ಘಟ್ಟದ ಕಥೆಗಳೆಂದರೆ ಒಂದು ರೀತಿಯ ಹುಚ್ಚು.ಆ ಹಚ್ಚ ಹಸಿರಿನ ವಾತಾವರಣ, ಕಾಡು ಗುಡ್ಡೆಗಳಲ್ಲಿ ಎಲೆಮರೆ ಕಾಯಿಯಂತೆ ಬದುಕುತ್ತಿರುವ ಹಳ್ಳಿಗರ ಬದುಕು. ಜೀವನೋತ್ಸಾಹ,ಸಂತೋಷ, ದುಃಖ, ಸಾಹಸ ಕೆಲವು ರೋಚಕ ಅನುಭವ; ಎಲ್ಲವು. ಈ ಎಲ್ಲವನ್ನು ಬೆಟ್ಟದ ಜೀವ ಎನ್ನುವ ಒಂದೇ ಬುತ್ತಿಯಲ್ಲಿ ಗಂಟು ಕಟ್ಟಿ ಉಣಬಡಿಸಿದವರು ಡಾ ಕೆ ಶಿವರಾಮ ಕಾರಂತರು. ನನಗೆ ಮೊದಲು ಪುಸ್ತಕದ ರುಚಿಯನ್ನು ಹಚ್ಚಿದ್ದೆ ಈ ಕಾದಂಬರಿ. ಈ ಕಥೆ ಪಶ್ಚಿಮ ಘಟ್ಟದ ಸಾಲಿನಲ್ಲಿ ಕಡಿಮೆ ಜನ ಸಂಪರ್ಕದೊಂದಿಗೆ ಪ್ರಕೃತಿಯ ಮಡಿಲಿನಲ್ಲಿ ಉತ್ತಮ ಉತ್ಸಾಹದ ಬದುಕಿನ ಬಂಡಿಯನ್ನು ಸಾಗಿಸುತ್ತಿರುವ ಜೀವಗಳ ಸುತ್ತ ಸುತ್ತುತ್ತದೆ. ಲೇಖಕರು ಘಟ್ಟದ ಕಾಡಿನ ಮದ್ಯೆ ದಾರಿ ತಪ್ಪಿ ಕಂಗಾಲಾಗಿ ನಿಂತಿದ್ದಾಗ ದೇರಣ್ಣ ಎನ್ನುವ ಒಬ್ಬ ವ್ಯಕ್ತಿ ಅವರನ್ನು ಅಲ್ಲೇ ನೆಲೆಕಟ್ಟಿಕೊಂಡಿರುವ ಬ್ರಾಹ್ಮಣ ವ್ಯಕ್ತಿ ಗೋಪಾಲಯ್ಯನವರ ಮನೆಯಲ್ಲಿ ಉಳಿಸಿ ಬರುತ್ತಾನೆ. ಇಲ್ಲಿಂದಲೇ ಕಥೆ ಆರಂಭವಾಗುತ್ತದೆ. ಈ ಕಾದಂಬರಿಯಲ್ಲಿ ಬರುವ ಗೋಪಾಲಯ್ಯ ಎನ್ನುವ ಪಾತ್ರ ಎಂತಹ ಸೋಂಬೇರಿಗಳಿಗೂ ಜೀವನೋತ್ಸಾಹ ತುಂಬಿಸುತ್ತದೆ.ಎಪ್ಪತೈದರ ಇಳಿ ಪ್ರಾಯದ ಗೋಪಾಲಯ್ಯನವರ ಜೀವನ ಶೈಲಿ ಅವರ ಉತ್ಸಾಹ ನನಗೆ ತುಂಬಾ ಇಷ್ಟವಾದ ಅಂಶವಾಗಿದೆ. ಕಷ್ಟಪಡಬೇಕು ದುಡಿಬೇಕು ಏನಾದರೂ ಸರಿ ಎಷ್ಟು ಕಷ್ಟವಿದ್ದರೂ ಜೀವನವನ್ನು ಖುಷಿಯಾಗಿ ಅನುಭವಿಸಬೇಕು ಎನ್ನುವ ಅವರ ಮನಸ್ಥಿತಿಯನ್ನು ಈಗಿನ ಯುವಕರಾದ ನಾವು ನೋಡಿ ಕಲಿಯುಬೇಕಾಗಿದೆ. ಗೋಪಾಲಯ್ಯ ಮತ್ತು ಪತ್ನಿ ಶಂಕರಿಯ ಅನ್ಯೋನ್ಯತೆ, ಪ್ರೀತಿ ವಾತ್ಸಲ್ಯವು, ಪ್ರೀತಿಸಿ ಮದುವೆಯಾಗಿ ಕಿತ್ತಾಡುವ ಈಗಿನ ಕೆಲ ದಂಪತಿಗಳಿಗೆ ನಾಚಿಕೆ ಹುಟ್ಟಿಸುವಂತಿದೆ. ಆ ಇಳಿ ವಯಸ್ಸಿನಲ್ಲೂ ಅವರಿಬ್ಬರ ಮದ್ಯೆ ಅದೆಂತ ಅನುಬಂಧ. ಅದೇ ಹರಟೆ ತಮಾಷೆ ಕೀಟಲೆ ಮಾತು ಮಮಕಾರ ಇವೆಲ್ಲ ಪ್ರಸ್ತುತ ಸಮಾಜ ನಿದರ್ಶನವಾಗಿ ತೆಗೆದುಕೊಳ್ಳಬೇಕಾದ ಅಂಶಗಳು. ಇನ್ನು ನಾರಾಯಣನ ಪಾತ್ರ. ದಿಕ್ಕಿಲ್ಲದ ತನಗೆ ದಾರಿ ತೋರಿದ ಗೋಪಾಲಯ್ಯನವರ ನಂಬಿಕೆ ಉಳಿಸಿಕೊಳ್ಳುತ್ತ ಎಷ್ಟೇ ಸಲಿಗೆ ಕೊಟ್ಟರು ಮೋಸ ಮಾಡದೆ ನಿಷ್ಠೆಯಿಂದ ಅವರ ಸೇವೆ ಮಾಡುವ ಗುಣ ಇಷ್ಟವಾಗುತ್ತದೆ. ಅವನ ಪತ್ನಿ ಲಕ್ಶ್ಮೀ ಕೂಡ ಅಷ್ಟೇ ಪ್ರೀತಿ ವಾತ್ಸಲ್ಯ ಮಮಕಾರದ ಮೂರ್ತಿ. ಗೋಪಾಲಯ್ಯ,ಶಂಕರಿ, ನಾರಾಯಣ, ಲಕ್ಷ್ಮೀ; ಇವರ ಸೇವೆ ಮತ್ತು ಅತಿಥಿ ಸತ್ಕಾರಕ್ಕೆ ಲೇಖಕರು ಅಭಿಮಾನಿಯಾಗಿರುವುದನ್ನು ನಾವಿಲ್ಲಿ ಕಾಣಬಹುದು. ಹಚ್ಚ ಹಸುರಿನ ಘಟ್ಟದ ನಿರ್ಜನ ಪ್ರದೇಶದಲ್ಲಿ ದೈಹಿಕವಾಗಿ ಆರೋಗ್ಯದಿಂದ ಬದುಕುವ ಆ ಜೀವಗಳು ಮನಸ್ಸಿನಲ್ಲಿ ಅದೆಷ್ಟೋ ಹೇಳೋಕೆ ಆಗದಷ್ಟು ನೋವುಗಳನ್ನು ತುಂಬಿಕೊಂಡು ಅದನ್ನು ಹೇಳಿಕೊಳ್ಳಲು ಮತ್ತೊಂದು ಜೀವವನ್ನು ಹುಡುಕುತ್ತವೆ.ಅವಕಾಶ ಸಿಕ್ಕರೆ ಹಂಚಿಕೊಳ್ಳುತ್ತವೆ ಎನ್ನುವುದನ್ನು ಇಲ್ಲಿ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಆ ನೋವನ್ನು ಕೇಳುವ ಪಾತ್ರವನ್ನು ಲೇಖಕರು ಇಲ್ಲಿ ನಿರ್ವಹಿಸಿದ್ದಾರೆ. ನಿಸರ್ಗದ ಮಡಿಲಿನಲ್ಲಿ ಬದುಕಿನ ಪರಿಯ ಜೊತೆಗೆ, ಕೆಲವು ಆಯ್ದ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಬಿಚ್ಚಿದ್ದಾರೆ. ದೇರಣ್ಣಗೌಡ ಗೋಪಾಲಯ್ಯನವರ ಪಾತ್ರ ಗ್ರಾಮೀಣ ಭಾಗದಲ್ಲಿ ಮುಗ್ದ ಮನಸ್ಸುಗಳ ಪ್ರಾಥಮಿಕ ಸಂಬಂಧ ಹೇಗಿರುತ್ತದೆ, ಅವರ ಸಹಕಾರ ಮನೋಭಾವ ಬೆಂಬಲ ಎಲ್ಲವನ್ನು ತಿಳಿಸಿಕೊಡುತ್ತವೆ. ಮದ್ಯದಲ್ಲಿ ಆಗಾಗ ಕಾಣಿಸಿಕೊಳ್ಳುವ 'ಬಟ್ಯ' ಎನ್ನುವ ಪಾತ್ರವೊಂದಿದ್ದು, ಅವನ ಮುಗ್ದತೆ, ಕೌಶಲ್ಯ, ನಯ ವಿನಯ ಎಲ್ಲವು ಕೂಡ ತುಂಬಾ ವಿಶೇಷವಾಗಿದೆ. ಇವೆಲ್ಲದರ ಮಧ್ಯದಲ್ಲಿ ಆಗಾಗ ಶಂಕರಿಯ ಕಣ್ಣಲ್ಲಿ ನೀರು ತರಿಸುವ ಪಾತ್ರ ಮಾಣಿಯದ್ದು. ಮಾಣಿ ಗೋಪಾಲಯ್ಯ ಮತ್ತು ಶಂಕರಿಯ ಮಗ. ಚಿಕ್ಕ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿ ಆ ಹಿರಿಯ ಜೀವಗಳನ್ನು ತಬ್ಬಲಿ ಮಾಡಿದ ಪುಣ್ಯಾತ್ಮ.ಹೆತ್ತ ಕರುಳು ಹೇಗೆ ಮಗನಿಗಾಗಿ ಮಿಡಿಯುತ್ತದೆ ಎನ್ನುವುದನ್ನು ಶಂಕರಿ ತೋರಿಸಿ ಕೊಟ್ಟಿದ್ದಾಳೆ. ಇವಿಷ್ಟು ಈ ಕಾದಂಬರಿಯ ಮುಖ್ಯ ಜೀವಗಳು. ಈ ಕಥೆ ಕೆಲವೇ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಸುತ್ತಿದರು ಹಲವಾರು ಅಂಶಗಳನ್ನು, ಅನುಭವಗಳನ್ನು ನೀಡುವ ಕಥೆಯಾಗಿದೆ. ಈ 'ಬೆಟ್ಟದ ಜೀವ ' ಶೀರ್ಷಿಕೆಯಂತೆ, ನಿರ್ಜನ ಘಟ್ಟ ಪ್ರದೇಶದಲ್ಲಿ ನಿಸರ್ಗದ ಮಡಿಲಿನಲ್ಲಿ ಪ್ರಶಾಂತವಾಗಿ ಬದುಕುವ ಜೀವಗಳ ಬದುಕಿನ ಕಥೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಟ್ಟ ಗುಡ್ಡಗಳ ಹಚ್ಚ ಹಸುರಿನ ವರ್ಣನೆಯ ಜೊತೆಗೆ ಜೀವನ ಶೈಲಿಯನ್ನು ಅಚ್ಚು ಕಟ್ಟಾಗಿ ತಿಳಿಸುವ ಕಾದಂಬರಿ ಈ ಬೆಟ್ಟದ ಜೀವ........... ನಾನಂತು ಸಾಕಷ್ಟು ಬಾರಿ ಈ ಕಾದಂಬರಿಯನ್ನು ಓದಿದ್ದೇನೆ ಒಮ್ಮೆಯೂ ಬೇಸರವೆನಿಸಲಿಲ್ಲ. ಮತ್ತೊಮ್ಮೆ ಓದಬೇಕು ಎನಿಸುವಷ್ಟು ಅದ್ಬುತ ಕಾದಂಬರಿ. ಉತ್ಸಾಹದ ಜೊತೆಗೆ ಉತ್ತಮ ಅಂಶಗಳನ್ನು ತಿಳಿದುಕೊಂಡಿದ್ದೇನೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಕಾದಂಬರಿಯ ಮುಖ್ಯ ಪಾತ್ರ ಗೋಪಾಲಯ್ಯ.:- ಮನಸ್ಸಿನಲ್ಲಿ ಬೆಟ್ಟದಷ್ಟು ನೋವಿದ್ದರೂ ಅದನ್ನು ಹೊರಗೆ ತೋರಿಸಿಕೊಳ್ಳದೆ ತನ್ನ ಪತ್ನಿ ಶಂಕರಿಗಾಗಿ ಅವುಗಳನ್ನು ನುಂಗಿ ಉತ್ಸಾಹಬರಿತ ವಾಗಿ ಜೀವನ ನಡೆಸುವ ವಿಧಾನ. ನಾರಾಯಣನ ಪತ್ನಿ ಲಕ್ಷ್ಮೀ:- ತಾನು ಮಾಡದ ತಪ್ಪಿಗೆ ಪಶ್ಚತ್ತಾಪ ಪಡುವ ಜೀವ. ಗೋಪಾಲಯ್ಯನವರ ಮಗ ಮಾಣಿ ತನ್ನಿಂದಲೇ ಊರು ಬಿಟ್ಟು ದೂರ ಹೋದದ್ದು ಎನ್ನುವುದು ಅವಳ ಮನಸ್ಸಿನ ಕೊರಗು. ಯಾವ ಕಾರಣಕ್ಕೆ ಊರು ಬಿಟ್ಟು ಹೋದ ಸರಿಯಾಗಿ ಯಾರಿಗೂ ತಿಳಿದಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.