Submission 1824

ಪುಸ್ತಕದ ಶೀರ್ಷಿಕೆ: ಬನದ ಕರಡಿ

ಪುಸ್ತಕದ ಲೇಖಕರು: ವಿನಯ ಗುಂಟೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಕೆ ನಿರ್ಮಲ ಮರಡಿಹಳ್ಳಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 3.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

‘ಬನದ ಕರಡಿ’ ಕಥಾ ಸಂಕಲನದ ಹೆಸರು ನೋಡುತಿದ್ದಂತೆ ಪಿ.ಲಂಕೇಶರು ನೆನಪಾದರು. ಇಲ್ಲಿ ವಿನಯ ಗುಂಟೆಯವರು ‘ಅವ್ವ’ಪದ್ಯದ ಪ್ರಭಾವದ ಬಗ್ಗೆ ಹೇಳಿಕೊಂಡಿಲ್ಲ. ಎದೆಗೆ ಬೆಂಕಿಯಿಕ್ಕುವ ಸುತ್ತಲಿನ ಮನಷ್ಯ, ಮನುಷ್ಯನಾದವನ ಮೇಲೆ ಸಾಧಿಸುತ್ತಿರುವ ಅಹಮಿಕೆಯು ನಿರ್ಮಿಸಿರುವ ಜಾತಿ, ಧರ್ಮ, ಲಿಂಗ ,ವರ್ಗ ಮತ್ತು ಪ್ರಭುತ್ವವು ಸೃಷ್ಟಿಸಿರುವ ಬಿಕ್ಕಟ್ಟುಗಳಿಗೆ ಬರೆಯಲೆ ಬೇಕಾದ ಸಂದಿಗ್ಧತೆ ಎಂದಿದ್ದಾರೆ. ಬನದಕರಡಿಮೊದಲನೆ ಕಥೆಯಾಗಿದೆ .ಅಮ್ಮನ ನೋವುಗಳು, ಹಿಡಿತಕ್ಕೆ ಸಿಗದ ಬದುಕು ಆಕೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುವ ಮಗ ಈ ಸುತ್ತ ಹೆಣೆದು ಕೊಂಡಿರುವ ಹಳ್ಳಿಯ ಪ್ರಕೃತಿಯೊಂದಿಗೆ ಕಥೆಯ ಸೊಗಡು ಉತ್ಕೃಷ್ಟವಾಗಿದೆ. ಅಮ್ಮ ಯಾಕೆ ಎಲ್ಲರ ಅಮ್ಮನಂತಿಲ್ಲವೆಂಬ ಹೋಲಿಕೆಯೂ ಹುಟ್ಟಿ ಕೈ ಮಾಡುವ ಮಟ್ಟಕ್ಕೆ ಬೆಳೆಯುತ್ತದೆ. ಬದುಕಿನ ಸಿಕ್ಕುಗಳಿಂದ ಬಿಡಿಸಿಕೊಳ್ಳಲಾಗದೆ ಕುಡಿತಕ್ಕೆ ಬಲಿಯಾಗಿ ಮಕ್ಕಳಿಗೆ ಹೊಡೆದು ಹೊಡೆದು ಕೆಟ್ಟವಳಾಗುತ್ತಾ ಹೋಗುತ್ತಾಳೆ.ಹುಟ್ಟುವ ಸಿಟ್ಟು, ಬೈಗುಳ ,ಅಸಹಾಯಕತೆ ಗಳಿಂದ ಬೇರೊಂದು ವ್ಯಕ್ತಿತ್ವದಿಂದ ಗುರುತಿಸಿಕೊಳ್ಳುತ್ತಾಳೆ.ಇದು ಮಹಿಳೆಯರ ಅಸಹಾಯಕತೆಯಿಂದ ಹೊರಗಿನ ವ್ಯಕ್ತಿತ್ವ ಕ್ಕೂ ,ಅಂತರಂಗದ ಅವಳೂ ಬೇರೆಯೆ ಆಗಿರುತ್ತಾಳೆ. ‘ಅಪ್ಪನ ಚಪ್ಪಲಿ ‘ಯನ್ನು ಓದುತಿದ್ದಂತೆ ಮನಸ್ಸು ಸುಡುವ ಅನುಭವ.ಊರಿನ ಮಾರಮ್ಮನ ಹಬ್ಬದ ವರ್ಣನೆಯೊಂದಿಗೆ ಗುಡಿಯ ಪೂಜಾರಿಗೆ ಮೈಮೇಲೆ ಬರುವುದು “ಬಿಸ್ಲಾಗೆ ನಿಲ್ಲಾಕ್ಕಾಯ್ತಿಲ್ಲ, ನೆಳ್ ಮಾಡ್ಸೊ “ಅಂತ ಕೇಳುವಾಗ ಪಕ್ಕನೆ ದೇವನೂರು ಮಹಾದೇವರ ಮನೆಮಂಚಮ್ಮ ಕಥೆ ನೆನಪಾಗಿ ಇಲ್ಲಿ ಯಾವ ಒಳಸೂಚನೆಗಳಿಲ್ಲದಿರುವುದು ಕಾಣುತ್ತದೆ. ಕುರಿ ಕೋಳಿಗಳ ಬಲಿ ,ಸುರಿಯುವ ರಕ್ತ ಮನುಷ್ಯರ ಮೇಲಿನ ದೌರ್ಜನ್ಯ ವನ್ನೆ ಸೂಚಿಸಿದಂತಾಗಿ ,ರಕ್ತ ಮನೆಯವರೆಗೂ ಸೋರಿ ಮಾರಿಗುಡಿಯ ದಾರಿ ತೋರಿಸುತಿತ್ತು.ಎಂಬ ಮಾತು ಕುಟುಕುತ್ತದೆ.ಮಗ ಅಪ್ಪನಿಗೆ ಕೊಡಿಸುವ ಚಪ್ಪಲಿಯೂ ,ಆ ತಲೆಮಾರಿನವರು ಹೊಸಚಪ್ಪಲಿಯನ್ನು ತೊಡುವಂತಿಲ್ಲವೆಂಬ ಎಂಬ ಮೌಢ್ಯವನ್ನು ಮೀರಿದ ಸೂಚಕವಾಗಿಯೆ ಕಂಡು ಅಪ್ಪನ ಹೊಸಚಪ್ಪಲಿ ನಿಜವಾಗಿಯೂ ಕಳುವಾದವಾ ? ಹೊಸ ಬದುಕಿಗೆ ತೆರೆದುಕೊಳ್ಳುವಲ್ಲಿ ಅಪ್ಪ ಸೋತನಾ ?ಓದುಗರಿಗೆ ಬ” ಹೋಗಿತ್ ಹೋಯ್ತು ,ಬ್ಯಾರೆ ತಂದ್ರಾತು”ಅನ್ನುವುದು ಹೊಸತನಕ್ಕೆ ಬದಲಾಗಿರುವ ಮನಸ್ಥಿತಿಯನ್ನು ಸೂಚಿಸುತ್ತದೆ. ‘ತೋಪಿ ಮತ್ತು ತಟ್ಟೆ ‘ ಕಥೆಯಲ್ಲಿ ಗುಡಿಕೈಗಾರಿಕೆಯಲ್ಲಿ ಕಲಾಯಿ ಹಾಗೂ ಲೋಹ ಕರಗಿಸಿ ಮೂರ್ತಿಗಳನ್ನು ಮಾಡುವ ವಿವರಗಳನ್ನು ಕೊಡುತ್ತಲೆ ,ಕೇರಿಯ ಮನೆಗಳ ಜೀವನಶೈಲಿ ,ನಂಬಿಕೆಗಳ ಬಗ್ಗೆ ತಿಳಿಸುತ್ತಾ ,ಕಡ್ಡಾಯ ಸಾರ್ವತ್ರಿಕ ಶಿಕ್ಷಣ ದಲ್ಲಿಯೂ ನೆಡೆಯುವ ಬೇಧಭಾವಗಳನ್ನು ತೆರೆದಿಡುವುದು ಲೇಖಕರ ಸಂವೃದ್ಧ ಅನುಭವ ವ್ಯಕ್ತವಾಗುತ್ತದೆ. ಕಂಚಿನ ತಟ್ಟೆ ಕಳೆಯುವುದು ಮತ್ತೆ ಸಿಕ್ಕರೂ ತನ್ನದೆಂದು ಪ್ರತಿಪಾದಿಸಲು ಸಮಾಜದ ವಿರುದ್ಧ ಒಬ್ಬಂಟಿಯಾಗುವ ಮತ್ತು ಹೆಚ್ಚಿನ ಅಪಾಯಗಳಿಗೆ ಒಳಗಾಗುವ ಭೀಕರ ವಾತಾವರಣವನ್ನು ತೆರೆದಿಟ್ಟಿದ್ದಾರೆ.ಮೇಲುಗೈ ಅಸಹಾಯಕತೆಯದೆ ಆಗಿದೆ.ಕಂಚಿನತಟ್ಟೆಯ ಸುತ್ತಾ ಹೆಣೆಯುವ ಈ ಕಥೆಯು ಹೆಚ್ ನಾಗವೇಣಿಯವರ ‘ಧಣಿಗಳ ಬೆಳ್ಳಿಲೋಟ’ಕಥೆಯನ್ನು ನೆನಪಿಸುತ್ತದೆ.ಕಳೆದು ನಂತರ ಸಿಕ್ಕ ಕಂಚಿನತಟ್ಟೆಗಾಗಿ ದುಬ್ಬಿ ಹಂಬಲಿಸುತ್ತಾಳೆ.ನಾಗವೇಣಿಯವರ ಕಥೆಯಲ್ಲಿ ಕಳೆದು ನಂತರ ಸಿಕ್ಕ ಪರರ ಬೆಳ್ಳಿಲೋಟವನ್ನು ಚಿನ್ನಮ್ಮ ನಿರಾಕರಿಸುತ್ತಾಳೆ.ಭೌತಿಕ ವಸ್ತುಗಳಾದರೂ ಅವುಗಳೊಂದಿಗಿನ ಭಾವನಾತ್ಮಕ ಬಲೆ ತಂದರೆ ತರಲಿ.ಆದರೆ ಹೇಗೆ ಹೊಡೆತಗಳ ಬೀಸುವಿಕೆಯಲ್ಲಿ ಸಿಕ್ಕು ನಲುಗುವುದನ್ನು ಸೂಚಿಸಲಾಗಿದೆ. ಬಾಲ್ಯದಲ್ಲಿ ಆಟ ಆಡುವಾಗ ತಪ್ಪಾದರೆ ಉಫೀಟ್ ಉಫೀಟ್ ಅನ್ನುತಿದ್ದೆವು. ಅಂದರೆ ಅದು ಲೆಕ್ಕಕ್ಕಿಲ್ಲ ಎಂಬ ಅರ್ಥ. ಇದೇ ಇರ್ಯಾದೆಯನ್ನು ಜೀವನದಲ್ಲಿಯೂ ಪ್ರಯೋಗಿಸಿಕೊಂಡರೆ ?ಉಫೀಟ್ ಅನ್ನುತ್ತಲೆ ತಪ್ಪಗಳನ್ನು ನಿರ್ಲಕ್ಷಿಸುತ್ತಾ ಹೋಗುವುದು ಸುಲಭವಲ್ಲ. ಇದು ಬದುಕಿನ ದಾರಿಯನ್ನು ಛಿದ್ರಗೊಳಿಸುವ ,ಕವಲಾಗಾಸುವ ಶಕ್ತಿ ಹೊಂದಿದೆ.ಉಫೀಟ್ ಕಥೆಯಲ್ಲಿ ಅನಿರೀಕ್ಷಿತವಾಗಿ ಅಪ್ಪಳಿಸುವ ,ನಂಬಿಕೆಗಳೊಳಗೆ ಹಾದು ಬರುವ ಘಟನೆಗಳನ್ನು ಎಳೆಎಳೆಯಾಗಿ ನೆನಪಿಸಿಕೊಳ್ಳುವ ಕಥೆಯಾಗಿದ್ದು ಲೈಂಗಿಕ ದೌರ್ಜನ್ಯವೆಂದು ಅರಿಯುವ ಮೊದಲೆ ನಡೆದು ಅನಿವಾರ್ಯವಾಗಿ ಉಪೀಟ್ ಆಗುವ ಸಂದರ್ಭಗಳಿವೆ.ಎಂತಹ ಸನ್ನಿವೇಶಗಳಲ್ಲಿ ಉಫೀಟ್ ಪದ ಬಳಸಬಹುದು ಋಂಬುದು ಬಹಳ ಮುಖ್ಯ. ಸ್ತ್ರೀ ಯಾದವಳು ಉಫೀಟ್ ಅನ್ನುತ್ತಲೆ ಮುಂದಿನ ಬದುಕಿಗೆ ತಯಾರಿಗೊಳ್ಳುವುದು ಈಗಿನ ಕಾಲದಲ್ಲೂ ಬದಲಾಗಿಲ್ಲ. ವಿನಯಗುಂಟೆಯವರು ಬನದ ಕರಡಿ ಕಥಾಸಂಕಲನ ದಲ್ಲಿ ಸಂದರ್ಭಗಳ ಕೈಗೊಂಬೆಯಾಗಿ ಜೀಕುವ ಬದುಕಿನ ಮಜಲುಗಳನ್ನು ಹಿಡಿದಿಟ್ಟಿದ್ದಾರೆ.ಸಾಗುವ ಕಥೆಗಳಲ್ಲಿ ಕೊನೆಯದು ‘ಮೀಸೆ ಬಣ್ಣದ ಹುಡುಗ’ ಧಾರ್ಮಿಕ ಭಾವನೆಗಳ ಅಂಧಕಾರದಲ್ಲಿ ಮಾನವನ ದುರ್ವರ್ತನೆಗಳೊಂದಿಗೇ ಅರಳುವ ಮಾನವೀಯ ಮೌಲ್ಯದ ಎಳೆಯನ್ನು ಬಿಡಿಸಿ ,ಪ್ರಪಂಚದಲ್ಲಿ ಕೆಟ್ಟದ್ದು ಇರುವಂತೆ ಒಳ್ಳೆಯದೂಯಿದೆ.ಹಗಲುರಾತ್ರಿಗಳಂತೆ .ಇದಕ್ಕೆಲ್ಲಾ ಕೊನೆಯಿಲ್ಲವೆಂದಾದರೂ ಒಳಿತಿನ ಪ್ರಮಾಣವನ್ನು ಹೆಚ್ಚಿಸಬಹುದು.ಮತ್ತು ದ್ವೇಷದ ಪರಿಣಾಮಗಳನ್ನು ಅರಿವಾಗಿಸಬಹುದು. ಖಾಸಾಬಾಗ್ ಕಥೆಯು ಅಸಹಾಯಕತೆಯಿಂದ ಬದುಕು ತೀರಾ ದುಸ್ಥಿತಿಗೆ ತಲುಪಿ ಅವಳ ತಪ್ಪಿಲ್ಲದೆ ಅನುಭವಿಸುವ ನರಕಕ್ಕೆ ಸಮಾಜವೆ ಕಾರಣವಾಗುತ್ತದೆ.ಸಮಾಜದ ಸ್ಥಿತಿ ಗತಿಗಳು, ಮನುಷ್ಯನ ಡೊಂಗಿತನಗಳ ಅನಾವರಣದೊಂದಿಗೆ ಇಂತದೆ ಧರ್ಮ ವೆಂಬ ಹಂಗಿಲ್ಲದೆ ಬದುಕನ್ನು ಮೂರಾಬಟ್ಟೆ ಮಾಡುವ ಸ್ಥಿತಿಯೂ ಅನಾವರಣಗೊಂಡಿದೆ.ಯಾವುದು ಆಚಾರ ?ಯಾವುದು ಅನಾಚಾರ ? ಎಂಬ ಪ್ರಶ್ನೆಗಳಿಗೆ ಪಕ್ಕ ಉತ್ತರವಿಲ್ಲದೆ ಒದ್ದಾಡುವಂತಾಗುತ್ತದೆ.ಒಟ್ಟಾರೆ ಕಾಲ ಸೀಮೆಗಳ ಹಂಗಿಲ್ಲದೆ ಬಲಿಯಾಗುವವಳು ಮಹಿಳೆಯೆ ಆಗಿದ್ದಾಳೆ.ಆಯಾ ಕಥೆಗೆ ತಕ್ಕಂತೆ ಗ್ರಾಮ್ಯ, ನಗರ ಭಾಷೆಗಳನ್ನು ಬಳಸಿ, ಕನ್ನಡ ,ಉರ್ದು ಹಾಗೂ ಕನ್ನಡದಲ್ಲೇ ಬೆರೆತಿರುವ ಇಂಗ್ಲಿಷ್ ಪದಗಳು ಸಹಜತೆಯನ್ನು ತರಲು ಪ್ರಯತ್ನಿಸಿವೆ.ಕೆಲವು ಸನ್ನಿವೇಶಗಳಲ್ಲಿ ಸೂಚ್ಯವಾಗಿ ಹೇಳಬಹುದಿತ್ತಾದರೂ ಇಡಿ ಕಥಾಸಂಕಲನ ಓದುಗರಿಗೆ ಪ್ರಜ್ಞೆ ಯನ್ನು , ಎಚ್ಚರವನ್ನು ಮೂಡಿಸಬಲ್ಲದ್ದಾಗಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
131
Views
7 Months
Since posted

Voting Closed!

Scroll to Top