Submission 1770

ಪುಸ್ತಕದ ಶೀರ್ಷಿಕೆ: ದೊಡ್ಡಮನೆ

ಪುಸ್ತಕದ ಲೇಖಕರು: ಎಚ್.ಎಲ್.ನಾಗೇಗೌಡ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಜಿ.ಹೆಚ್‌. ಸಂಕಪ್ಪ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಭಾರತವು ಹಳ್ಳಿಗಳ ದೇಶವೆಂದೇ ಪ್ರಸಿದ್ದವಾಗಿದ್ದು ಆ ಹಳ್ಳಿಯ ಜನ ಜೀವನ‌ಗಳ ವೈವಿಧ್ಯಮಯವಾದ, ವಿಶಿಷ್ಠವಾದ ಬದುಕಿನ‌‌ ಸೊಗಡು ಇಂದಿಗೂ ಕೆಲವು‌ ಕಡೆ ಜೀವಂತವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅವಿಭಕ್ತ‌ ಕುಟುಂಬದ ವ್ಯವಸ್ಥೆಯು ವಿರಳವಾಗಿದ್ದು, ಇಂದಿನ ಜೀವನ ಕ್ರಮ‌ ಮತ್ತು ಆಧುನಿಕತೆಗಳಿಂದಾಗಿ ಏಕ ಕುಟುಂಬ ಜೀವನ‌ ಪದ್ದತಿಯಲ್ಲಿದ್ದೇವೆ. ಅವಿಭಕ್ತ ಕುಟುಂಬದಲ್ಲಿ ಕೂಡಿಬಾಳುವ ಒಂದೇ ಮನೆಯಲ್ಲಿ ಹತ್ತಾರು ಸಂಸಾರಗಳು ಒಬ್ಬನೇ ಯಜಮಾನಿಕೆಯಲ್ಲಿ ನಡೆಯುತ್ತಿದ್ದ ಕೌಟುಂಬಿಕ ವ್ಯವಸ್ಥೆ, ಒಗ್ಗಟ್ಟು, ಅಭಿವೃದ್ದಿ ಕಾಣುವ ಅದ್ಭುತ ವ್ಯವಸ್ಥೆ ಇತ್ತು. ಇಂತಹ ಕುಟುಂಬದ ದೊಡ್ಢಸ್ತಿಕೆಯನ್ನು ಸಹಿಸದೆ, ಆ ದೊಡ್ಡ ಮನೆ ಎಂಬ ಕೀರ್ತಿಯನ್ನು ಹೇಗಾದರೂ ಮಾಡಿ ಮುರಿದು ತನ್ನ ಮನೆತನ ದೊಡ್ಡಮನೆ ಎನ್ನಿಸಿಕೊಳ್ಳಬೇಕೆಂಬ ದಾಯಾದಿ ಮತ್ಸರಗಳ ಕುಟುಂಬಗಳೂ ಇದ್ದವು.ಇಂತಹ ಸಂದಿಗ್ಧತೆಗಳ ಮಧ್ಯೆ ಪೂರ್ಣ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ, ಸಂಕೀರ್ಣತೆಗಳಲ್ಲಿ ಹೆಣೆಯಲಾದ ಎಚ್.ಎಲ್.ನಾಗೇಗೌಡರ ಬೃಹತ್ತಾದ ದೊಡ್ಢಮನೆ ಕಾದಂಬರಿಯ ವಿಶೇಷ. ಈ‌ ಕಾದಂಬರಿ ಹೆಸರಿಗೆ ತಕ್ಕಂತೆಯೇ ಸಂಪೂರ್ಣ ಹಳ್ಳಿಯ ಗೌಡರ ಮನೆಯೊಂದರ ಬದುಕಿನ ಚಿತ್ರಣ. ನನ್ನೂರು ಊರಿನ ನಂಜೇಗೌಡರ ಮನೆಯ ಅವಿಭಕ್ತ ಕುಟುಂಬದ ಕಥೆ. ನನ್ನೂರು ನಂಜೇಗೌಡರ ಮನೆ ಎಂದರೆ ಸುತ್ತಮುತ್ತಲ ಹಳ್ಳಿಗಳಿಗೆ ದೊಡ್ಢಮನೆ ಎಂದೇ ಪ್ರಸಿದ್ದಿ. ಅವರ ಮಾತೇ ಎಲ್ಲರಿಗೂ ವೇದವಾಕ್ಯ, ಅಷ್ಟೊಂದು ಗೌರವ. ನಂಜೇಗೌಡರು ಸಹ ದೊಡ್ಡ ವ್ಯಕ್ತ್ತಿತ್ವದ ದೊಡ್ಡ ವ್ಯಕ್ತಿ. ಮನೆಯಲ್ಲಿ ಇವರ ಯಜಮಾನಿಕೆಯಲ್ಲಿ ಎಲ್ಲವೂ ನಿರಾತಂಕವಾಗಿ ನಡೆಯುತ್ತಿತ್ತು.‌ ಯುಗಾದಿ ಹಬ್ಬದಿಂದ ವರ್ಷತೊಡಕು ಹಬ್ಬದ ಆಚರಣೆಯಿಂದ ಪ್ರಾರಂಭವಾಗುವ ಈ ಕಥೆಯಲ್ಲಿ ಹಳ್ಳಿಯ ಹಬ್ಬದ ಸೊಬಗು ,ಹಾಡು ಲಾವಣಿಗಳ ವರ್ಣನೆಗಳಿಂದ ಆಗಿನ ಹಳ್ಳಿಯಲ್ಲಿ ಕೂಡಿ ಹಬ್ಬ ಆಚರಿಸುವ ಪದ್ದತಿಯೊಂದಿಗೆ ದೊಡ್ಡಮನೆ ಕತೆ ಆರಂಭವಾಗುತ್ತದೆ. ನಂಜೇಗೌಡರ ದೊಡ್ಡಮನೆ ಆಡಳಿತವನ್ನು, ಆ ಮನೆಯ ಹೆಗ್ಗಳಿಕೆಯನ್ನು ದಾಯಾದಿ ರಂಗೇಗೌಡನಿಗೆ ಸಹಿಸಲು ಆಗುವುದಿಲ್ಲ. ಈ ಮನೆಗಿರುವ ದೊಡ್ಡೆಮನೆ ಹೆಸರು ನನ್ನ ಮನೆಗೆ ಬರಬೇಕು ಹಾಗೂ ಹೇಗಾದರೂ ಮಾಡಿ ನಂಜೇಗೌಡರ ಮನೆ ಕೀರ್ತಿಯನ್ನು ಮುರಿಯಬೇಕೆಂಬುದೇ ರಂಗೇಗೌಡನ ಶತಪ್ರಯತ್ನದ ಕುತಂತ್ರಗಳು . ಆದರೆ ನಂಜೇಗೌಡರ ಸಾತ್ವಿಕ ಗುಣ, ನಾವೆಲ್ಲ ಒಂದೆಂಬ ಭಾವನೆಯಿಂದ ಬದುಕುವ ನಂಜೇಗೌಡರ ಮುಂದೆ ಇವನ ಗುರಿ ಈಡೇರುವುದಿಲ್ಲ. ನಂಜೇಗೌಡರಿಗೆ ತನ್ನ ಜೀವಿತದಲ್ಲೇ ಹೊಸಮನೆ ಕಟ್ಟಿಸಬೇಕೆಂಬ ಮಹದಾಸೆ ಇರುತ್ತದೆ. ಜೋಯಿಸರ ಬಳಿ ಶಾಸ್ತ್ರವನ್ನೂ ಕೇಳಿರುತ್ತಾರೆ. ಕಾಗೆಯ ಅಪಶಕುನ ಬಂದಿದ್ದರಿಂದ ಮುಂದೆ ಏನೇನು ಅನಾಹುತಗಳು ಬರಬಹುದೆಂಬ ಇರಾದೆಯಲ್ಲಿರುವಾಗಲೇ ದೊಡ್ಡಮನೆಯಲ್ಲಿ ಕೆಲ ದುರ್ಘಟನೆಗಳು ಜರುಗುವುವು. ನಂಜೇಗೌಡರ ಮಗ ಲಿಂಗೇಗೌಡ ಮತ್ತು ಪಟೇಲ್ ರಂಗೇಗೌಡರ ಮಗ ಇಬ್ಬರೂ ಸಹ ಬೆಳೆದು ದೊಡ್ಡವರಾಗುತ್ತ ಬರುತ್ತಾರೆ. ಈ ಸಂದರ್ಭದಲ್ಲಿ ನಂಜೇಗೌಡರು ಖಾಯಿಲೆ ಸಂಬಂಧ ಲಿಂಗೇಗೌಡನಿಗೆ ಯಜಮಾನಿಕೆಗೆ ಸಿದ್ಧಪಡಿಸಿ ಖಾಯಿಲೆಯಿಂದಾಗಿ ನಿಧನರಾಗುತ್ತಾರೆ. ಅವರ ಸಾವು ಊರಿಗೇ ದು: ಖ ತಂದರೂ ಪಟೇಲ ರಂಗೇಗೌಡನಿಗೆ ಹಬ್ಬದಂತೆ ಖುಷಿಯಾಗಿರುತ್ತದೆ. ಮುಂದೆ ಲಿಂಗೇಗೌಡರ ಆಳ್ವಿಕೆಯಲ್ಲಿ ದೊಡ್ಢಮನೆ ದೊಡ್ಢದಾಗಿಯೇ ಸಾಗುತ್ತದೆ. ಅಪ್ಪನಂತೆಯೇ ಮನೆಯ ಜವಾಬ್ದಾರಿ ವಹಿಸಿಕೊಂಡು ಚಿಕ್ಕಪ್ಪನವರ ಸಹಕಾರದಿಂದ ಚೆನ್ನಾಗಿಯೇ ಮನೆತನ ನಡೆಸಿಕೊಂಡು ಹೋದರು ಈತನಿಗೆ ಸಂಸಾರದಲ್ಲಿ ನಾಲ್ಕು ಹೆಂಡತಿಯರು ಬರುವ ಗ್ರಹಗತಿಗಳು ! ಲಿಂಗೇಗೌಡ ಅಪ್ಪನ ಆಸೆಯಂತೆ ಹೊಸಮನೆ ಕಟ್ಟಿಸುತ್ತಾನೆ ಮಗ ನಾಗೇಗೌಡನನ್ನೂ ಓದಿಸುತ್ತಾನೆ. ಹಾಗೆಯೇ ಪಟೇಲ್ ರಂಗೇಗೌಡನ ಮಕ್ಕಳೂ ಸಹ ಬೆಳೆಯುತ್ತಾರೆ. ಹೀಗಿದ್ದರೂ ಅವರ ದಾಯಾದಿ ಮತ್ಸರ ಮಾತ್ರ ಕುದಿಯುತ್ತಲೇ ಇತ್ತು. ಹೀಗಿರುವಾಗ ಹೊಸಮನೆಯಲ್ಲಿ ತುಂಬು ಕುಟುಂಬದಲ್ಲಿ ಪಟೇಲ್ ರಂಗೇಗೌಡನು ಮಸಲತ್ತಿನಿಂದ ಕೆಂಗಣ್ಣ, ಅವನ ಹೆಂಡತಿ ರತ್ನ ಇವರಿಗೆ ದುರ್ಭೋಧನೆ ಮಾಡಿ ಮನೆಯಲ್ಲಿ ಪಾಲಿಗೆ ನಿಲ್ಲಿಸುತ್ತಾನೆ. ಲಿಂಗೇಗೌಡ ದೊಡ್ಡಮನೆ ಪಾಲಾಗದಿರಲು ಬಹಳ ಬುದ್ದಿ ಹೇಳಿದರೂ ಕೆಂಗಣ್ಣ ಕೇಳುವುದಿಲ್ಲ. ಲಿಂಗೇಗೌಡರ ಮಗ ಅಷ್ಟು ಹೊತ್ತಿಗೆ ಓದಿ ಲಾಯರ್ ವಿದ್ಯೆ ಪಡೆದಿರುತ್ತಾನೆ ಹಾಗೆಯೇ ಪಟೇಲ್ ರಂಗೇಗೌಡನ ಮಗ ಸಹ ಕೆಟ್ಟ ಗುಣಗಳಿಂದ ಬೆಳೆಯುತ್ತಾನೆ. ದೊಡ್ಡಮನೆ ಪಾಲಾಗುತ್ತದೆ. ಪ್ಲೇಗ್ ಬಂದು ಲಿಂಗೇಗೌಡರೂ ಸಾಯುತ್ತಾರೆ. ಮನೆ ಪಾಲಾದ ಮೇಲೆ ಮಗ ನಾಗೇಗೌಡ ನಗರದಲ್ಲಿ ವಕೀಲಿಕೆ ವೃತ್ತಿಯನ್ನು ಮಾಡುತ್ರಾನೆ. ದೊಡ್ಢಮನೆ ಪಾಲಾದ ಖುಷಿಯಲ್ಲಿದ್ದ ರಂಗೇಗೌಡನಿಗೆ ಆಘಾತ ಒದಗಿಬರುತ್ತದೆ. ಇವನ ಮಗ ಕೆಟ್ಟ ನಡೆಗಳಿಂದ ಜೈಲು ಪಾಲಾಗಿರುತ್ತಾನೆ. ತಾನು ದೊಡ್ಢಮನೆ ಮುರಿಯಲು ಕಾರಣನಾದ ತಪ್ಪಿಗೆ ಆತನ ಮನೆ ಮರ್ಯಾದೆ ಎಲ್ಲವೂ ಹಾಳಾಗಲು ದೊಡ್ಢಮನೆ ಗೆ ಬಗೆದ ದ್ರೋಹವೇ ಕಾರಣವೆಂದು ದು:ಖಿಸಿ ಕೊನೆಗೆ ದೊಡ್ಢಮನೆಯ ಮಗನೇ ತನ್ನ ಮಗನ ಭವಿಷ್ಯವನ್ನು ಉಳಿಸಿಕೊಡುವಂತೆ ಕಾಲಿಗೆ ಬೀಳಲು ಹೋಗುವ ದೃಶ್ಯ ದೊಡ್ಢಮನೆಗೆ ಮಾಡಿದ ದ್ರೋಹದ ಫಲವಾಗಿರುತ್ತದೆ. ಇದು ಕಥೆಯ ಸಂಕ್ಷಿಪ್ತ ವಿವರಣೆ. ಕಾದಂಬರಿಯಲ್ಲಿ ಬರುವ ಸನ್ನಿವೇಶಗಳು, ಬಳಸಿರುವ ಗ್ರಾಮೀಣ ಪದಗಳು, ಹಾಡುಗಳು, ಹೆಳವರ ಹಾಡು ಇವೆಲ್ಲವೂ ಓದುಗನ ಮನಸ್ಸಿನಲ್ಲಿ ಉಳಿಯುತ್ತವೆ. ‌ನಾಗೇಗೌಡರ ಈ ಬೃಹತ್ ಕಾದಂಬರಿಯನ್ನು ಓದಲು ಕುಳಿತರೆ ಪೂರ್ಣವಾಗಿ ಕಾದಂಬರಿ ಮುಗಿಸುವವರೆಗೆ ಮನಸ್ಸನ್ನು ಹಿಡಿದಿಟ್ಟಿರುತ್ರದೆ‌.‌‌ ಇಂದಿನ ಒಂಟಿ ಕುಟುಂಬದ ನೀರಸ ಬದುಕಿಗೂ ಅವಿಭಕ್ತ ಕುಟುಂಬದ ಒಗ್ಗಟ್ಟಿನ ಬದುಕಿಗೂ ಇರುವ ಅರ್ಥವನ್ನು ಕಂಡುಕೊಳ್ಳುವ ಇಂದಿನ ಓದುಗರನ್ನೂ ಸೆಳೆಯುವಂಥ ಈ ಕಾದಂಬರಿ ಆರು ಮರುಮುದ್ರಣ ಕಂಡಂಥ ಕಥಾವಸ್ತು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಕಾದಂಬರಿಯಲ್ಲಿ ಬರುವ ನಂಜೇಗೌಡನ ಗುಣಗಳು ,ನಡೆ ನುಡಿಗಳು ಅಪ್ಪಟ ಒಬ್ಬ ಭಾರತೀಯ ವ್ಯಕ್ತಿತ್ವದ ಗುಣಗ್ರಾಹಿ. ಹಿರಿಯರಿಂದ ಕಿರಿಯರಾದಿಯಾಗಿ ಈ ಪಾತ್ರದ ಗತ್ತು, ಯಜಮಾನಿಕೆಯ ಸೂಕ್ಷ್ಮತೆಗಳು ಓದುಗನ ಮನಸ್ಸನ್ನು ಆಕರ್ಷಿಸುವಲ್ಲಿ ಸಫಲತೆ ಕಾಣುತ್ತದೆ. ಹಾಗೆಯೇ ಈ ಪಾತ್ರವು ಅನುಭವಿಸುವ ಸಂಕಟಗಳು, ಸಂಸಾರದಲ್ಲಿ ಬಂದು ಹೋಗುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಎಲ್ಲ ಸಹೋದರರ ಕುಟುಂಬಗಳನ್ನು ಒಬ್ಬ ಯಜಮಾನನಾಗಿ ನಿಭಾಯಿಸುವ ಘಟನೆಗಳು ಓದುಗನ ಮನ ಕಲಕುತ್ತವೆ. ನಂಜೇಗೌಡರ ಜೀವನಶೈಲಿಗೆ ಊರಿಗೆ ಊರೇ ತಲೆಬಾಗುವಂಥ ಚಿತ್ರಣ ಬಹುವಾಗಿ ಸೆಳೆಯುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಕಾದಂಬರಿಯ ಬೃಹತ್ತಾದ ಕಥೆಯು ಇಂದಿನ ಎಲ್ಲ ವಯೋಮಾನದವರೂ ಓದಲೇಬೇಕಾದಂಥ ಸುಂದರವಾದ ಕೌಟುಂಬಿಕ ಕಥಾನಕವು.. ಇಂದಿನ ಏಕ ಕುಟುಂಬ ಜೀವನ ಶೈಲಿಗೂ ಹಿಂದಿನವರ ಕೂಡು ಕುಟುಂಬದ ಜೀವನ‌ಕ್ರಮಕ್ಕೂ ಇದ್ದ,-ಇರುವ ಲಾಭ- ನಷ್ಠಗಳ ಅವಲೋಕನೆಗಳಿಗೆ ಈ ಕಾದಂಬರಿ ಹೇಳಿಮಾಡಿಸಿದಂತಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

33
Votes
199
Views
8 Months
Since posted

Voting Closed!

Scroll to Top